ಮಡಿಕೇರಿ, ಜು. 8: ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ, ಕೂಡ ಇಂದಿಗೂ ಜಿಲ್ಲೆಯ ಗ್ರಾಮೀಣ ಭಾಗಗಳು ಸೇರಿದಂತೆ ಕೊಡಗಿನ ಹಾಡಿಗಳಲ್ಲಿ ವಾಸಿಸುವ ಜನತೆಗೆ ಕನಿಷ್ಟ ಮೂಲಭೂತ ಸೌಕರ್ಯ ಲಭಿಸದೆ ಮಳೆಗಾಲದಲ್ಲಿ ಪರಿತಪಿಸುವಂತಾಗಿದೆ.

ಹಮ್ಮಿಯಾಲ ಗ್ರಾಮದ ಗದ್ದೆ ಬಯಲಿನ ಪಕ್ಕದಲ್ಲೇ ಮಳಗಾಲದಲ್ಲಿ ಹೊಳೆ ತುಂಬಿ ಹರಿಯುತ್ತದೆ. ಈ ಹೊಳೆಯನ್ನು ದಾಟಲು ವರ್ಷಂಪ್ರತಿ ಗ್ರಾಮ ಪಂಚಾಯಿತಿಯಿಂದ ಮರದ ಪಾಲವನ್ನು (ಕಾಲು ದಾರಿ) ನಿರ್ಮಿಸಿಕೊಳ್ಳಲು ಒಂದಿಷ್ಟು ಹಣ ಕಲ್ಪಿಸಲಾಗುತ್ತದೆ.

ಈ ಹಣಕ್ಕೆ ತಕ್ಕಂತೆ ಗ್ರಾಮಸ್ಥರು ತಮ್ಮ ಸೌಕರ್ಯಕ್ಕಾಗಿ ಕಾಡು ಮರಗಳಿಂದ ಪಾಲವನ್ನು (ಕಾಲು ಸೇತುವೆ) ನಿರ್ಮಿಸಿಕೊಳ್ಳುತ್ತಿದ್ದು, ನಿರಂತರ ಮಳೆಯಿಂದ ಮರದ ಸಿಪ್ಪೆಗಳು ಕಳಚಿ ಕಾಲಿಟ್ಟರೆ ಜಾರಿ ಬೀಳುವ ಪ್ರಸಂಗ ಹೆಚ್ಚು.

ಅತ್ತ ಸಂಬಂಧಪಟ್ಟವರು ಗಮನ ಹರಿಸಿ ಶಾಶ್ವತವಾಗಿ ಸೇತುವೆ ನಿರ್ಮಿಸುವ ಮೂಲಕ ಗ್ರಾಮಸ್ಥರ ನಿತ್ಯ ಬವಣೆ ತಪ್ಪಿಸುವಂತೆ ಅಲ್ಲಿನ ನಿವಾಸಿಗಳು ಆಗ್ರಹಪಡಿಸಿದ್ದಾರೆ.

ಗ್ರಾಮೀಣ ಜನತೆಯ ಮಳೆಗಾಲ ಪರಿಸ್ಥಿತಿ ಬಗ್ಗೆ ಜಿಲ್ಲಾಡಳಿತ ಖುದ್ದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಮ್ಮಿಯಾಲ, ಮುಟ್ಲುವಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಮಳೆ ಹಾನಿ ಲೆಕ್ಕದಲ್ಲಿ ಸರಕಾರದ ಅನುದಾನವನ್ನು ಜಿಲ್ಲಾ ಕೇಂದ್ರ ಹಾಗೂ ಮಾಮೂಲಿ ರಸ್ತೆಗಳಿಗೆ ಸುರಿದು ದುರುಪಯೋಗ ಎಸಗುವ ಬದಲು ಹಳ್ಳಿಗಾಡಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಗಮನ ಸೆಳೆದಿದ್ದಾರೆ.