ನವದೆಹಲಿ, ಜು. 8: ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಇಲಾಖೆಯು ಕೊಡಗಿನ ಎಲ್ಲಾ ಅಭಯಾರಣ್ಯಗಳನ್ನು ಬಿಡದೆ ಸೂಕ್ಷ್ಮ ಪರಿಸರ ತಾಣಕ್ಕೆ ಸೇರಿಸಿದೆ. ಇತ್ತೀಚೆಗಷ್ಟೆ ತಲಕಾವೇರಿ ವನ್ಯಧಾಮ ಹಾಗೂ ದಕ್ಷಿಣ ಕೊಡಗಿನ ಬ್ರಹ್ಮಗಿರಿ ವನ್ಯಧಾಮಗಳನ್ನು ಕೇಂದ್ರ ಸರಕಾರ ಸೂಕ್ಷ್ಮ ಪರಿಸರ ಪ್ರದೇಶವಾಗಿ ಘೋಷಿಸಿ ಆದೇಶ ಹೊರಡಿಸಿತ್ತು. ಜುಲೈ 3 ರಂದು ಕೊಡಗಿನ ಪುಷ್ಪಗಿರಿ ಅಭಯಾರಣ್ಯವನ್ನು ಕೂಡ ಸೂಕ್ಷ್ಮ ಪರಿಸರ ಪ್ರದೇಶಕ್ಕೆ ಸೇರ್ಪಡೆಗೊಳಿಸಿ ಅದೇಶ ಹೊರಡಿಸಿದೆ.ಪುಷ್ಪಗಿರಿ ಸೂಕ್ಷ್ಮ ಪರಿಸರ ತಾಣಕ್ಕೆ ಕೊಡಗಿನ 6 ಗ್ರಾಮಗಳು ಹಾಗೂ ಸುಳ್ಯದ 1 ಗ್ರಾಮವನ್ನು ಸೇರ್ಪಡೆಗೊಳಿಸಲಾಗಿದೆ. ಸೋಮವಾರಪೇಟೆ ತಾಲೂಕಿನ ಕುಮಾರಳ್ಳಿ ಮತ್ತು ಅಲ್ಲಿನ ಅರಣ್ಯ ಪ್ರದೇಶದ 54.32 ಹೆಕ್ಟೇರ್, ಕೊತ್ತನಳ್ಳಿಯ 20.11 ಹೆಕ್ಟೇರ್, ಸೂರ್ಲಬ್ಬಿಯ 52.89 ಹೆಕ್ಟೇರ್, ಹಮ್ಮಿಯಾಲದ 65.28 ಹೆಕ್ಟೇರ್ ಹಾಗೂ ಮಡಿಕೇರಿ ತಾಲೂಕಿನಲ್ಲಿ ಕಾಲೂರುವಿನ 90.83 ಹೆಕ್ಟೇರ್, ಗಾಳಿಬೀಡು ಮತ್ತು ಅಲ್ಲಿನ ಅರಣ್ಯದಲ್ಲಿ 42.47 ಹೆಕ್ಟೇರ್ ಹಾಗೂ ಸುಳ್ಯದ ಬಾಳಗೋಡುವಿನ 4.01 ಹೆಕ್ಟೇರ್ ಸೇರಿದಂತೆ ಒಟ್ಟು 321.89 ಹೆಕ್ಟೇರ್ ಪ್ರದೇಶವನ್ನು ಸೂಕ್ಷ್ಮ ಪರಿಸರ ತಾಣವಾಗಿ ಘೋಷಿಸಿದೆ.
ಪುಷ್ಪಗಿರಿ ಅಭಯಾರಣ್ಯವು ಉತ್ತರ ಭಾಗದ ಬಿಸಿಲೇ ರಾಜ್ಯ ಅರಣ್ಯ ಪ್ರದೇಶದಿಂದ ಪ್ರಾರಂಭಗೊಂಡು ಸುಬ್ರಹ್ಮಣ್ಯದ ಮೀಸಲು ಅರಣ್ಯದವರೆಗೂ ವಿಸ್ತೀರ್ಣಗೊಂಡಿದೆ. ಪೂರ್ವ ಭಾಗದಲ್ಲಿ ಕುಮಾರಳ್ಳಿ, ಕೊತ್ತನಳ್ಳಿ, ಸೂರ್ಲಬ್ಬಿ, ಹಮ್ಮಿಯಾಲ,
(ಮೊದಲ ಪುಟದಿಂದ) ಕಾಲೂರಿನಿಂದ ಹಾದುಹೋಗಿ ಗಾಳಿಬೀಡು ಪ್ರದೇಶದವರೆಗೆ ವಿಸ್ತರಣೆಗೊಂಡಿದೆ. ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿ ಸಂಪಾಜೆ ವಲಯದ ಕಡಮಕಲ್ ಮೀಸಲು ಅರಣ್ಯ ಹಾಗೂ ಬಾಳಗೋಡು ಗ್ರಾಮಗಳವರೆಗೆ ವಿಸ್ತøತಗೊಂಡಿದೆ.
ಬ್ರಹ್ಮಗಿರಿ ಹಾಗೂ ಪುಷ್ಪಗಿರಿ ಸೂಕ್ಷ್ಮ ಪರಿಸರ ತಾಣಗಳಲ್ಲಿ ವಿಧಿಸಿರುವ ನಿರ್ಬಂಧದಂತೆಯೇ ಪುಷ್ಪಗಿರಿ ಸೂಕ್ಷ್ಮ ಪರಿಸರ ತಾಣದಲ್ಲೂ ನಿರ್ಬಂಧಗಳನ್ನು ವಿಧಿಸಲಾಗಿದೆ. ಪುಷ್ಪಗಿರಿ ತಾಣವು 170.53 ಚದರ ಕಿ.ಮೀ.ಗಳವರೆಗೆ ಹರಡಿದೆ. ಪುಷ್ಪಗಿರಿ ಅಭಯಾರಣ್ಯ ಪ್ರದೇಶದಲ್ಲಿ ವಾರ್ಷಿಕವಾಗಿ 6000 ಮಿ.ಮೀ.ಗಳಿಂದ 7000 ಮಿ.ಮೀ.ಗಳವರೆಗೆ ಮಳೆಯಾಗುತ್ತದೆ. ವಿಶೇಷವಾದ ವನ್ಯ ಪ್ರಾಣಿಗಳು, ಪಶುಪಕ್ಷಿಗಳು ವಾಸಿಸುತ್ತಿವೆ. ಬೆಲೆಬಾಳುವ ಸಸ್ಯಸಂಕುಲಗಳು, ಗಿಡಮರಗಳು ಈ ಪ್ರದೇಶದಲ್ಲಿ ಸಮೃದ್ಧಯುತವಾಗಿದೆ. ಅಲ್ಲದೆ ಕುಮಾರಧಾರ ನದಿಗೆ ಪುಷ್ಪಗಿರಿ ವನ್ಯಧಾಮವು ಮುಖ್ಯ ಜಲಾನಯನ ಪ್ರದೇಶವಾಗಿದೆ. ಕುಮಾರಧಾರೆಯ ಉಪನದಿಗಳಾಗಿರುವ ಲಿಂಗದ ಹೊಳೆ, ಪೆರ್ಚೆ ಹೊಳೆ, ಮಾರಿಗುಂಡಿ ಹೊಳೆ, ಉಪ್ಪಂಗಳ ಹೊಳೆ, ಪಾದಕ್ಕ ಹೊಳೆ ಹಾಗೂ ಕಡಮಕಲ್ ಹೊಳೆಗಳಿಗೂ ಈ ತಾಣವು ಜಲಾನಯನ ಪ್ರದೇಶವೆನಿಸಿದೆ. ಈ ಹಿನ್ನೆಲೆಯಲ್ಲಿ ಪರಿಸರವನ್ನು ಉಳಿಸುವ ಸಲುವಾಗಿ ಸೂಕ್ಷ್ಮ ಪರಿಸರ ತಾಣವಾಗಿ ಘೋಷಿಸಲಾಗಿರುವದಾಗಿ ಪರಿಸರ ಸಚಿವಾಲಯ ಸಮರ್ಥಿಸಿಕೊಂಡಿದೆ. ಘೋಷಿತ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳು, ಗಣಿಗಾರಿಕೆ, ಬೃಹತ್ ಉದ್ಯಮಗಳು, ಕಾರ್ಖಾನೆಗಳು ಮೊದಲಾದ ಚಟುವಟಿಕೆಗಳಿಗೆ ನಿಯಂತ್ರಣ ಕಲ್ಪಿಸಲಾಗಿದೆ.