ಕುಶಾಲನಗರ, ಜು. 8: ಪಟ್ಟಣ ಪಂಚಾಯಿತಿಯಿಂದ ರೂ. 25 ಲಕ್ಷ ವೆಚ್ಚದಲ್ಲಿ ನಗರದ ಮುಖ್ಯ ರಸ್ತೆಯ ಫುಟ್‍ಪಾತ್ ನಿರ್ಮಾಣ ಕಾಮಗಾರಿ ಸಂಬಂಧ ನಗರದ ವರ್ತಕರ ಸಂಘದಿಂದ ಅಹವಾಲು ಆಲಿಸಲು ಸಭೆ ನಡೆಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಗರದಲ್ಲಿ ಪಾದಚಾರಿಗಳಿಗೆ ಅನುಕೂಲವಾಗುವಂತೆ ಫುಟ್‍ಪಾತ್ ನಿರ್ಮಾಣಕ್ಕೆ ಯೋಜನೆ ನಿರ್ಮಿಸಿದ್ದು ಈ ಬಗ್ಗೆ ವರ್ತಕರೊಂದಿಗೆ ಚರ್ಚಿಸಲಾಯಿತು.

ವ್ಯಾಪಾರಸ್ಥರ ಪರವಾಗಿ ಸ್ಥಳೀಯ ವರ್ತಕರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆ ನೀಡಿದರು. ಮುಖ್ಯ ಬೀದಿಯಲ್ಲಿ ಮೈಸೂರು ರಸ್ತೆಯ ಎಸ್.ಬಿ.ಎಂ. ಬ್ಯಾಂಕ್ ನಿಂದ ಮಡಿಕೇರಿ ರಸ್ತೆಯ ಅತಿಥಿ ಹೊಟೇಲ್ ತನಕ ರಸ್ತೆಯ ಬಲ ಬದಿಯಲ್ಲಿ ಚರಂಡಿಗೆ ಸ್ಲ್ಯಾಬ್‍ಗಳನ್ನು ಮತ್ತು ಇಂಟರ್‍ಲಾಕ್ ಬ್ರಿಕ್ ಅಳವಡಿಸಿ ಕಬ್ಬಿಣದ ಸಲಾಖೆಯಿಂದ ರಕ್ಷಣಾ ಕಂಬಿಗಳನ್ನು ನಿರ್ಮಿಸುವಂತೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಎಂ.ಎಂ. ಚರಣ್ ಮಾಹಿತಿ ನೀಡಿದರು.

ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಮಾತನಾಡಿ, ಹೆದ್ದಾರಿ ಪ್ರಾಧಿಕಾರದಿಂದ ಚರಂಡಿ ಮೇಲ್ಬಾಗಕ್ಕೆ ಕಾಂಕ್ರಿಟ್ ಚಪ್ಪಡಿಗಳನ್ನು ಹಾಕಲು ನಿರ್ಧರಿಸಲಾಗಿದೆ. ಚರಂಡಿ ಜಾಗ ಬಿಟ್ಟು ನಂತರದ 4 ಅಡಿ ಅಗಲ, 1 ಅಡಿ ಎತ್ತರದಲ್ಲಿ ಫುಟ್‍ಪಾತ್ ನಿರ್ಮಿಸಲಾಗುತ್ತದೆ. ಮೇಲ್ಬಾಗದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಅನುವುಮಾಡಿಕೊಡಲಾಗುವದು. ಕೆಲವು ಅಂಗಡಿ ಮುಂಗಟ್ಟುಗಳ ಮುಂಭಾಗ ಜಾಗ ಕಿರಿದಾಗಿರುವ ಕಡೆಗಳಲ್ಲಿ ಅಂಗಡಿ ಮೆಟ್ಟಿಲುಗಳಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲಾಗುವದು ಎಂದು ಭರವಸೆ ನೀಡಿದರು.

ವರ್ತಕರ ಸಂಘದ ಸರ್ವ ಸದಸ್ಯರ ಅಭಿಪ್ರಾಯದ ಮೇರೆಗೆ ಸಂಘದ ಅಧ್ಯಕ್ಷ ಅಮೃತ್‍ರಾಜ್ ಮಾತನಾಡಿ, ಅಭಿವೃದ್ಧಿ ಕೆಲಸಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವದಾಗಿ ಭರವಸೆ ನೀಡುವದರೊಂದಿಗೆ ವ್ಯಾಪಾರಿಗಳಿಗೆ ಯಾವದೇ ಅನಾನುಕೂಲವಾಗದಂತೆ ಕಾಮಗಾರಿ ನಡೆಸಲು ಸಲಹೆ ನೀಡಿದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪಾರ್ವತಿ, ಹೆಚ್.ಡಿ. ಚಂದ್ರು, ಸದಸ್ಯರುಗಳು, ಛೇಂಬರ್ ಆಫ್ ಕಾಮರ್ಸ್‍ನ ಪದಾಧಿಕಾರಿಗಳಾದ ಎಂ.ಕೆ. ದಿನೇಶ್, ರವೀಂದ್ರ ರೈ, ಕೆ.ಎಸ್.ರಾಜಶೇಖರ್, ವಿಮಲ್ ಜೈನ್, ಅಶ್ವತ್ ಕುಮಾರ್, ರವಿಕುಮಾರ್, ಪಿ.ಎಂ. ಮೋಹನ್ ಮತ್ತಿತರರು ಇದ್ದರು.