ಮಡಿಕೇರಿಯ ಅಂದಿನ ಹೆಸರಾಂತ ಬಿ.ಟಿ. ಗೋಪಾಲಕೃಷ್ಣ ಹಾಗೂ ಕೊಡಗಿನ ಖ್ಯಾತ ಸಾಹಿತಿ ಗೌರಮ್ಮ ದಂಪತಿಯ ಸುಪುತ್ರರಾಗಿ 13.12.1931ರಂದು ಮಹದೇವಪೇಟೆ ನಿವಾಸದಲ್ಲಿ ಜನಿಸಿದ್ದೀರಿ. ಬಿಎಸ್ಸಿ ಪದವಿಯೊಂದಿಗೆ ಆಟೋ ಮೊಬೈಲ್ ಇಂಜಿನಿಯರಿಂಗ್ (ಎಲ್.ಎ.ಇ.) ಡಿಪ್ಲೋಮಾ) ಪೂರೈಸಿದ ತಾವು ಸ್ವಯಂ ಉದ್ಯೋಗ (ಆಟೋ ಸರ್ವಿಸ್) ಪ್ರಾರಂಭಿಸುವದರೊಂದಿಗೆ ಒಂದು ಸ್ವಾವಲಂಬಿ ಸಂಸ್ಥೆಯಾಗಿ ರೂಪಿಸಿ ಕೊನೆಯುಸಿರಿರುವ ತನಕ ಪರಿಶ್ರಮದಿಂದ ಗ್ರಾಹಕರ ಮನ್ನಣೆ ಪಡೆದಿದ್ದೀರಿ.

1961ರಲ್ಲಿ ವೈವಾಹಿಕ ಬದುಕಿನೊಂದಿಗೆ ಪತ್ನಿ ಕಮಲ ಹಾಗೂ ಪುತ್ರರಾದ ಅಶೋಕ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಅವಿನಾಶ್ ಗೋಪಾಲ್ ಮತ್ತು ಕುಟುಂಬದೊಂದಿಗೆ ತುಂಬು ಜೀವನ ನಡೆಸಿದ್ದೀರಿ.

ಆ ಮುನ್ನ 1954ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕದೊಂದಿಗೆ ಹರದೂರುವಿನಲ್ಲಿ ಶಾಖಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಬಾಲ್ಯದ ದಿನಗಳನ್ನು ನೆನಪಿಸಿದ್ದೀರಿ. 1969ರಲ್ಲಿ ಉಡುಪಿಯಲ್ಲಿ ಜರುಗಿದ ವಿ.ಹಿಂ.ಪ. ಕಾರ್ಯಕ್ರಮವೊಂದಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರನ್ನು ಕರೆದುಕೊಂಡು ‘‘ನಾನು ಫೀಲ್ಡ್ ಮಾರ್ಷಲ್ ಕಾರು ಚಾಲಕನಾಗಿ ಹೋಗಿದ್ದೆ’’ ಎಂದು ಹೆಮ್ಮೆಯಿಂದ ನನ್ನೊಡನೆ ಹೇಳಿಕೊಂಡಿದ್ದೀರಿ.

ಅನಂತರ ಮತ್ತೆ ಸೂರತ್ಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜರುಗಿದ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಫೀ.ಮಾ. ಕಾರ್ಯಪ್ಪ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ ವೇಳೆ ದ್ವಿತೀಯ ಬಾರಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದೀರಿ ಎಂದಿದ್ದು ನೆನಪು. ಫೀ.ಮಾ. ಕಾರ್ಯಪ್ಪ ಅವರ ಒಡನಾಟವು ತಮ್ಮ ಕೌಟುಂಬಿಕ ಬದುಕಿನಲ್ಲಿ ಲಭಿಸಿದ್ದ ಉತ್ತಮ ಸಂಸ್ಕಾರದೊಂದಿಗೆ ಇನ್ನಷ್ಟು ಶಿಸ್ತು, ಸ್ವಚ್ಛತೆಗೆ ಒತ್ತು ನೀಡುವಂತೆ ಮಾಡಿತ್ತು ಎಂದಿದ್ದೀರಿ.

ತುರ್ತು ಪರಿಸ್ಥಿತಿ ನೆನಪು : 1975ರ ತುರ್ತು ಪರಿಸ್ಥಿತಿಯ ದಿನಗಳಲ್ಲಿ ಬಿ.ಕೆ. ನಾರಾಯಣ ಗೋಪಾಲ ಮುಂತಾದ ತರುಣರನ್ನು ಕಟ್ಟಿಕೊಂಡು ಇಂದಿರಾಗಾಂಧಿ ವಿರುದ್ಧ ಜೆ.ಪಿ. ನಾಯಕತ್ವದ ಹೋರಾಟ ಬೆಂಬಲಿಸಿ ‘ಕಹಳೆ’ ಪತ್ರಿಕೆ ಹಂಚಿದ ಕಷ್ಟಕರ ಸನ್ನಿವೇಶ ಮೆಲುಕು ಹಾಕುತ್ತಾ, ಒಮ್ಮೆ ನೀವು ಗದ್ಗದಿತರಾದಿರಿ. ಅರಂತೋಡುವಿನ ಶ್ರೀಧರ್ ಭಟ್ ಮನೆಗೆ ಸಿಹಿತಿಂಡಿ ಗಾಡಿಯೊಂದರಲ್ಲಿ ಈ ಪತ್ರಿಕೆ ಬಂಡಲ್‍ನೊಂದಿಗೆ ಆರ್.ಎಸ್.ಎಸ್. ಪ್ರಚಾರಕರೊಬ್ಬರನ್ನು ತಲುಪಿಸಿದ್ದ ಪರಿಯನ್ನು ಸ್ಮರಿಸಿದ್ದೀರಿ.

ಅಂದಿನ ಕಾಂಗ್ರೆಸ್ ಮೇಲ್ಮನೆ ಸದಸ್ಯರಾಗಿದ್ದ ಎಸ್.ಎಸ್. ನಾರಾಯಣ ಮೂರ್ತಿ ಅವರ ಸಹಾಯದಿಂದ ಅವರದ್ದೇ ಕಾರಿನಲ್ಲಿ ರಾಜಗೋಪಾಲ್ ಎಂಬ ಸಂಘದ ಹಿರಿಯರನ್ನು ಚೆಯ್ಯಂಡಾಣೆಯ ಮನೆಯಲ್ಲಿ ಒಂದಿಷ್ಟು ಸಮಯ ಉಳಿಯಲು ವ್ಯವಸ್ಥೆ ರೂಪಿಸಿದ ಸನ್ನಿವೇಶ ನೆನಪಿಸಿಕೊಂಡಿದ್ದೀರಿ.

ಆ ದಿನಗಳಲ್ಲಿ ವಕೀಲ ಬಿ.ಆರ್. ಶಿವಕುಮಾರ್, ಡಾ. ಪಾಟ್ಕರ್, ಸಿ.ವಿ. ಸದಾಶಿವ ರಾವ್ ಮೊದಲಾದವರ ಒಡನಾಟ ಕುರಿತು ಮೆಚ್ಚ್ಚುಗೆಯ ಮಾತನಾಡಿದ್ದೀರಿ. ಕಾಶೀರಾವ್ ಅವರಂಥ ಪ್ರಚಾರಕರೊಬ್ಬರ ಪರಿಶ್ರಮ ಗುರೂಜಿ ಕೊಡಗು ಭೇಟಿ ಮುಂತಾದ ಕುರಿತು ಮಾತನಾಡಿದ್ದೀರಿ.

ಅಶ್ವಿನಿ ಸಸಿ : 1971ರಲ್ಲಿ ಮೊದಲ ಬಾರಿಗೆ ವೇದಾಂತ ಸಂಘದಲ್ಲಿ ಬೆ.ಸು. ಶೇಷಾದ್ರಿ ಸಹಿತ ಒಂದಿಷ್ಟು ಹಿರಿಯರು ವಿಶ್ವ ಹಿಂದೂ ಪರಿಷತ್ತಿನ ಸಭೆ ನಡೆಸಿ ಸುಂದರ ಕನಸಿನ ಬೀಜವೊಂದು ಟಿಸಿಲೊಡೆಯುವಂತೆ ಮಾಡಿ ಅಶ್ವಿನಿ ಆಸ್ಪತ್ರೆ ಸ್ಥಾಪನೆಯತ್ತ ಕಾರ್ಯೋನ್ಮುಖರಾದ ಕಾಲಘಟ್ಟದೆಡೆಗೆ ಗಮನ ಸೆಳೆದಿದ್ದೀರಿ.

ಪತ್ರಕರ್ತರ ಒಡನಾಟ : ಪತ್ರಿಕಾ ಸ್ನೇಹಿತರಾದ ‘ಶಕ್ತಿ’ ಗೋಪಾಲಕೃಷ್ಣ, ಬಿ.ಡಿ. ಗಣಪತಿ, ಕಾಕೆಮಾನಿ (ಸುಬ್ಬಯ್ಯ) ಸೇರಿದಂತೆ ಅನೇಕ ಹಿರಿಯ ಚೇತನಗಳೊಂದಿಗೆ ತಮಗಿದ್ದ ಬಂಧುತ್ವವನ್ನು ಸ್ಮರಿಸಿಕೊಂಡಾಗ ನಾನೊಬ್ಬ ಕಿರಿಯ ಪತ್ರಕರ್ತನಾಗಿ ಹೆಮ್ಮೆ ಪಟ್ಟೆ. ಹೀಗೆ ಅನೇಕ ವಿಚಾರ ಮಾತನಾಡುತ್ತಲೇ ಸಾಗಿದ್ದೀರಿ.

1972ರಲ್ಲಿ ಆರ್.ಎಸ್.ಎಸ್. ಹಿರಿಯರಾಗಿದ್ದ ಹೊ.ವೇ. ಶೇಷಾದ್ರಿ, ಯಾದವ್ ರಾವ್ ಜೋಷಿ, ಕೃ. ಸೂರ್ಯ ನಾರಾಯಣರಾವ್, ಫೀ.ಮಾ. ಕಾರ್ಯಪ್ಪ ಮುಂತಾದವರ ಸಮ್ಮುಖ ಅಶ್ವಿನಿ ಆವರಣ ಬಳಿ ಶ್ರೀ ಗಣಪತಿ ಗುಡಿಗೆ ಚಾಲನೆ ನೀಡಿದ್ದನ್ನು ಹೇಳಿದ್ದೀರಿ. ಬಿ.ಕೆ. ಕೃಷ್ಣ ಅವರ ಸಲಹೆಯಂತೆ ಇತ್ತೀಚಿನ ವರ್ಷದಲ್ಲಿ ಶ್ರೀ ಚಾಮುಂಡಿ ನೆಲೆ ಸ್ಥಾಪಿಸಿದ್ದನ್ನು ವಿವರಿಸಿದ್ದೀರಿ.

1977ರಲ್ಲಿ ವಿ.ಹಿಂ.ಪ. ಅಂತಾರ್ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಮೇವಾಡದ ರಾಜ ಮಹಾರಾಣಾ ಭಾಗವತ್ ಸಿಂಹ ಸೇರಿದಂತೆ, ಉಡುಪಿ ಪೇಜಾವರ ಅಧೋಕ್ಷಜ ಮಠದ ಪೂಜ್ಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸಹಿತ ಗಣ್ಯರ ಸಮಕ್ಷಮ ಅಶ್ವಿನಿ ಆಸ್ಪತ್ರೆ ಕಾರ್ಯಾರಂಭಗೊಂಡ ಸುಸಜ್ಜಿತ ಕಟ್ಟಡ ನಿರ್ಮಾಣ ಮತ್ತು ಪರಿಶ್ರಮ, ಸಹಕರಿಸಿದ ದಾನಿಗಳನ್ನು ಸ್ಮರಿಸುತ್ತಾ ಗಂಟೆಗಟ್ಟಲೆ ನೀವು ಮಾತನಾಡಿದ್ದು ಇನ್ನು ನೆನಪಿದೆ.

2017ಕ್ಕೆ ಅಶ್ವಿನಿ ಆಸ್ಪತ್ರೆಗೆ 40 ವರ್ಷ ಕಾಣಲಿದೆ ಎಂದಿದ್ದ ನೀವು, ನಿತ್ಯವೂ ನಿಮ್ಮ ಮನೆ ‘ವಿನಾಯಕ ನಿವಾಸ’, ಆಟೋ ಸರ್ವಿಸ್, ಅಶ್ವಿನಿ ಆಸ್ಪತ್ರೆಯ ಅವಿನಾಭಾವ ಸಂಬಂಧದೊಂದಿಗೆ ಎಲ್ಲರ ನೆಚ್ಚಿನ ‘ಸ್ವಾಮಿ’ ಆಗಿದ್ದೀರಿ.

ಅಯೋಧ್ಯಾ ಆಂದೋಲನ..., ಗಾಲ್ಫ್ ಕ್ರೀಡೆ..., ರೋಟರಿಯಂತಹ ಸಂಸ್ಥೆಗಳಲ್ಲಿ ತಾವು ತೊಡಗಿಸಿಕೊಂಡಿದ್ದ ದಿನಗಳನ್ನು ನೆನಪಿಸುತ್ತಾ ಹೋದ ನೀವು ಒಮ್ಮೆಲೆ ನನ್ನನ್ನು ಗದರಿಸಿದ್ದೀರಿ... ‘‘ಇದೆಲ್ಲ ಕೇಳಿಸಿಕೊಂಡು ಹೋಗಿ ನಾಳೆ ‘ಶಕ್ತಿ’ಯಲ್ಲಿ ಬರೆಯಬೇಡ...’’ ಎಂದು ನಿಮ್ಮ ಗಡಸು ಮಾತಿನಿಂದ ಹೇಳಿದಾಗ ನಾನು ಅರೆಕ್ಷಣ ಬೆಚ್ಚಿದೆ. ಅಷ್ಟರಲ್ಲಿ ಕಲ್ಲು ಹಾಸಿನಿಂದ ಎದ್ದ ನೀವು ನಿಮ್ಮ ಅಭಯ ಹಸ್ತವನ್ನು ನನ್ನ ಭುಜದಲ್ಲಿರಿಸಿ ಮನೆಯೊಳಗೆ ಕರೆದೊಯ್ದು ತಮ್ಮ ಮಡದಿ ಕಮಲಮ್ಮ ಅವರನ್ನು ಕರೆದು ಬಿಸಿ ಕಾಫಿ ಕುಡಿಸಿ ಬೀಳ್ಕೊಟ್ಟೀರಿ... ನಿಮ್ಮ ಅಗಲಿಕೆಯ ನಡುವೆ ಆ ನೆನಪು ಇಂದು ಮರುಕಳಿಸಿತು. ಹೀಗಾಗಿ ಈ ಮೂಲಕ ‘ಶಕ್ತಿ’ ಶ್ರದ್ಧಾಂಜಲಿ ಅರ್ಪಿಸುತ್ತದೆ.