ಮಡಿಕೇರಿ, ಜು. 8 : ಹದಿನೆಂಟು ವರ್ಷ ಪೂರ್ಣಗೊಂಡವರನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಸಹಕರಿಸುವಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಕೋರಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರ ಉಪಸ್ಥಿತಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ವಿಶೇಷ ಅಭಿಯಾನದ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾ. 31 ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಹೆಸರು ತೆಗೆಸುವದು ಮತ್ತಿತರ ಬಗ್ಗೆ ಅಭಿಯಾನ ನಡೆಯಲಿದೆ. ಹಾಗೆಯೇ ತಾ. 8 ಮತ್ತು 22 ರಂದು ವಿಶೇಷ ಅಭಿಯಾನವು ಬೂತ್ ಮಟ್ಟದಲ್ಲಿ ಜರುಗಲಿದ್ದು, ಈ ಸಂಬಂಧ ಸಾರ್ವಜನಿಕರಿಗೆ, ಅರ್ಹ ಯುವಜನರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.

ಹೆಸರು ಸೇರ್ಪಡೆ, ಹೆಸರು ತೆಗೆಯುವುದು ಅಥವಾ ವರ್ಗಾವಣೆ ಮಾಡುವುದು ನಿರಂತರ ಪ್ರಕ್ರಿಯೆಯಾಗಿದ್ದರೂ ಸಹ, ವಿಶೇಷ ಅಭಿಯಾನದ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರ ಹೆಸರು ಸೇರ್ಪಡೆ ಮಾಡುವುದು, ಮೃತಪಟ್ಟವರ ಹೆಸರು ತೆಗೆಯುವುದು ಮತ್ತಿತರ ಬಗ್ಗೆ ಮಾಹಿತಿ ನೀಡುವ ವಿಶೇಷ ಅಭಿಯಾನಯನ್ನು ಚುನಾವಣಾ ಆಯೋಗ ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೆಸರು ಸೇರ್ಪಡೆಯಾಗದೆ ಬಿಟ್ಟು ಹೋಗಿರುವ ಮತ್ತು ಮೊದಲ ಬಾರಿಗೆ ಮತದಾರರ ಪಟ್ಟಿಯಲ್ಲಿ ಯುವ ಮತದಾರರನ್ನು (18-21) ನೋಂದಣಿ ಮಾಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ಬೂತ್ ಮಟ್ಟದ ಅಧಿಕಾರಿಗಳು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು, ತಿದ್ದುಪಡಿ ಮಾಡಲು ಮತ್ತು ಹೆಸರು ವರ್ಗಾಯಿಸಲು ನಮೂನೆ 6, 7, 8 ಮತ್ತು 8ಎ ಯನ್ನು ಸ್ವೀಕರಿಸಲಾಗುತ್ತದೆ. ಆದ್ದರಿಂದ ಹೊಸದಾಗಿ ಹೆಸರು ಸೇರ್ಪಡೆ ಮಾಡಲು ಮೃತ ಪಟ್ಟವರ ಹೆಸರು ತೆಗೆಯಲು, ವರ್ಗಾವಣೆ ಮಾಡಿಸಿಕೊಳ್ಳಲು ಬೂತ್ ಮಟ್ಟದಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಮಾತನಾಡಿ ತಾ. 31 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಲಿದ್ದು, ಕುಟುಂಬದ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೆ ಇದ್ದರೆ, ಹೆಸರು ಸೇರ್ಪಡೆ ಮಾಡುವುದು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗಿರುವ ಗುರುತಿನ ಚೀಟಿ ತಪ್ಪು ಆಗಿದ್ದಲ್ಲಿ ಸರಿಪಡಿಸಲು ನಮೂನೆ (8), ಸೇರ್ಪಡೆಯಾಗಿರುವ ಮತದಾರರು ಮರಣ ಅಥವಾ ಸ್ಥಳಾಂತರ ಅಥವಾ ಮತದಾರರು ಎರಡು ಬಾರಿ ನೋಂದಣಿಯಾಗಿದ್ದಲ್ಲಿ, ಇತರೆ ಕಾರಣಗಳಿಂದ ಮತದಾರರ ಪಟ್ಟಿಯಿಂದ ಹೆಸರು ಸೇರ್ಪಡೆಯಾಗಿದ್ದಲ್ಲಿ, ನಮೂನೆ (7) ರಲ್ಲಿ ಮಾಹಿತಿ ನೀಡಬೇಕಿದೆ. ಹಾಗೆಯೇ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಬಯಸುವಲ್ಲಿ ಪೂರಕ ದಾಖಲೆಗಳನ್ನು ನೀಡಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಭಾರತೀಯ ಜನತಾ ಪಕ್ಷದ ಪ್ರಮುಖ ಮಹೇಶ್ ಜೈನಿ, ಅರುಣ್ ಕುಮಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ತೆನ್ನೀರ ಮೈನಾ, ಜಾತ್ಯಾತೀತ ಜನತಾ ದಳ (ಎಸ್)ಮುಖಂಡ ಯೋಗೇಶ್ ಕುಮಾರ್ ಅವರು ಮತದಾರರ ಪಟ್ಟಿಯ ಅಭಿಯಾನಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವದು ಎಂದು ಅವರು ತಿಳಿಸಿದರು.

ತಹಶೀಲ್ದಾರ್‍ರಾದ ಕುಸುಮ, ಮಹೇಶ್, ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯ ತಹಶೀಲ್ದಾರ್ ಕುಂಞಮ್ಮ, ಸರಸ್ವತಿ ಡಿ.ಇಡಿ. ಕಾಲೇಜಿನ ಪ್ರಾಂಶುಪಾಲ ಶ್ರೀಕುಮಾರ್, ಮೂರ್ನಾಡು ವಿದ್ಯಾಸಂಸ್ಥೆಯ ಪ್ರೊ. ಭಾಗೀರಥಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಚೈತ್ರ, ಕೌಶಿಕ್ ಕುಮಾರ್, ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್ ಕುಮಾರ್, ಚೆರಿಯನ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಕಾರ್ಯಪ್ಪ ಇತರರು ಇದ್ದರು.