ಕುಶಾಲನಗರ, ಜು. 8: ವಿಜ್ಞಾನ ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದಲ್ಲಿ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷÀ ಎಸ್.ವಿ. ಸಂಕನೂರು ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು, ವಿವೇಕಾನಂದ ಪದವಿಪೂರ್ವ ಕಾಲೇಜು ಕುಶಾಲನಗರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಪೂರ್ವಭಾವಿಯಾಗಿ ‘ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ’ ವಿಷಯದಡಿ ನಡೆದ ರಾಜ್ಯಮಟ್ಟದ ಜಿಲ್ಲಾ ಸಮನ್ವಯಕಾರರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಸಂಶೋಧನಾ ಚಟುವಟಿಕೆಗಳಲ್ಲಿ ಭಾರತ ಹಿಂದುಳಿದಿದೆ. ಜೀವನದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿ ಕೊಂಡು ಕಾರ್ಯನಿರ್ವಹಿಸಬೇಕಿದೆ ಎಂದರು.

ಇಂದಿನ ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಮನೋಭಾವನೆ ಕುಂಠಿತಗೊಂಡಿದೆ. ಪೋಷಕರು ಈ ನಿಟ್ಟಿನಲ್ಲಿ ಚಿಂತನೆ ಹರಿಸಿ ವಿಜ್ಞಾನದ ಬಗ್ಗೆ ಒಲವು ಮೂಡಿಸಬೇಕಿದೆ ಎಂದು ಅವರು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ವಿಜ್ಞಾನದ ಬಗ್ಗೆ ಆಳವಾದ ಚಿಂತನೆ ಮೂಡಿಸಬೇಕಿದೆ. ಪರಿಸರ ನಾಶದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳುವ ಮೂಲಕ ಪ್ರಕೃತಿ ಮೇಲಿನ ಧಾಳಿಗೆ ನಿಯಂತ್ರಣವಾಗಬೇಕು. ಮೌಢ್ಯತೆಗಳ ವಿರುದ್ಧ ಧ್ವನಿ ಎತ್ತುವದರೊಂದಿಗೆ ವೈಜ್ಞಾನಿಕ ಚಿಂತನೆಯ ಅಗತ್ಯ ಇರುವದಾಗಿ ತಿಳಿಸಿದರು.

ಸಮ್ಮೇಳನ ರಾಜ್ಯ ಸಂಯೋಜಕ ಎಚ್.ಜಿ. ಹುದ್ದಾರ್ ಪ್ರಾಸ್ತಾವಿಕ ನುಡಿಗಳಾಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷರಾದ ಫಿಲಿಪ್‍ವಾಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಪಿ. ಚಂದ್ರಕಲಾ, ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶಂಭುಲಿಂಗಪ್ಪ, ಆಡಳಿತಾಧಿಕಾರಿ ಎಂ. ನಾಗೇಶ್, ಸಂಪನ್ಮೂಲ ವ್ಯಕ್ತಿಗಳಾದ ಎನ್. ರವಿಕುಮಾರ್, ಡಾ. ಹರೀಶ್ ಆರ್.ಭಟ್, ಸುಭಾಷ್ ರೈ, ಸಮಾವೇಶದ ರಾಜ್ಯ ಶೈಕ್ಷಣಿಕ ಸಂಯೋಜಕರಾದ ಸಿ. ಕೃಷ್ಣೇಗೌಡ, ಜಿಲ್ಲಾ ಶೈಕ್ಷಣಿಕ ಸಂಯೋಜಕರಾದ ಶ್ರೀಹರ್ಷ, ಕರಾವಿಪ ಜಂಟಿ ಕಾರ್ಯದರ್ಶಿ ಬಿ.ಎನ್. ಶ್ರೀನಾಥ್, ವಿ.ಎನ್ ನಾಯಕ್ ಮತ್ತಿತರರು ಇದ್ದರು.

ಇದೇ ಸಂದರ್ಭ ಸಮಾವೇಶದ ಕೈಪಿಡಿ ಬಿಡಗಡೆಗೊಳಿಸಲಾಯಿತು.

ಕರಾವಿಪ ಜಿಲ್ಲಾ ಕಾರ್ಯದರ್ಶಿ ಹಾಗೂ ಕಾರ್ಯಕ್ರಮ ಸಂಯೋಜಕರಾದ ಟಿ.ಜಿ. ಪ್ರೇಮ್‍ಕುಮಾರ್ ಸ್ವಾಗತಿಸಿದರು, ಗೌರವ ಕೋಶಾಧಿಕಾರಿ ಎಸ್.ಎಚ್. ಈಶ ನಿರೂಪಿಸಿದರು, ಉಪಾಧ್ಯಕ್ಷ ವೆಂಕಟನಾಯಕ್ ವಂದಿಸಿದರು.