ಗೋಣಿಕೊಪ್ಪಲು, ಜು. 8: ಇಲ್ಲಿನ ಕಾವೇರಿ ಕಾಲೇಜು ಆವರಣದಲ್ಲಿ ಒಂದು ಗಿಡ ಒಂದು ಮರ ಕಾರ್ಯಕ್ರಮಕ್ಕೆ ಗೋಣಿಕೊಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ವನಮಹೋತ್ಸವದಲ್ಲಿ ಪೋಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅವಶ್ಯಕತೆ ಇದೆ. ಪೋಷಣೆಯಲ್ಲಿ ಸಿಗುವ ಅನುಭವದಿಂದ ಆನಂದಿಸು ವಂತಾದರೆ ಪರಿಸರ ಕಾಳಜಿ ಹೆಚ್ಚುತ್ತದೆ ಎಂದರು.

ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಮಾತನಾಡಿ, ಪರಿಸರ ಕಾಳಜಿ ಮೈಗೂಡಿಸಿಕೊಂಡರೆ ಜಾಗತಿಕ ತಾಪಮಾನವನ್ನು ತಗ್ಗಿಸುವ ಕೆಲಸ ಜನರಿಂದ ಆಗಲಿದೆ. ಭವಿಷ್ಯದಲ್ಲಿ ತಾಪಮಾನದಿಂದಾಗುವ ದುಷ್ಪರಿಣಾಮವನ್ನು ಅರಿತುಕೊಂಡು ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ವನಿತ್ ಕುಮಾರ್ ಮಾತನಾಡಿ, ಒಂದು ಗಿಡ ನೆಡುವ ಮೂಲಕ ಒಂದು ಮರವನ್ನು ಬೆಳೆಸುವ ಉದ್ದೇಶದಿಂದ ಯೋಜನೆ ರೂಪಿಸ ಲಾಗಿದೆ. ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸುವ ಉದ್ದೇಶಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ನಿರೀಕ್ಷೆ ಹೊಂದಲಾಗಿದೆ ಎಂದರು.

ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆವರಣದಲ್ಲಿ ಕಾಡು ಮರಗಳಾದ ಜಮ್ಮು ನೇರಳೆ, ಮಹಾಗನಿ, ನೇರಳೆ, ನೆಲ್ಲಿಕಾಯಿ ಹಾಗೂ ಹಲಸು ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸಲಾಯಿತು.

ಈ ಸಂದರ್ಭ ಯೋಜನಾಧಿಕಾರಿ ನೀತಾ ಉಪಸ್ಥಿತರಿದ್ದರು.