ಮಡಿಕೇರಿ, ಜು. 8: ಮಡಿಕೇರಿ ಅಶ್ವಿನಿ ಆಸ್ಪತ್ರೆಯ ಸ್ಥಾಪಕ ಟ್ರಸ್ಟಿಯಾಗಿ, ಮಾಜಿ ಕಾರ್ಯದರ್ಶಿಯಾಗಿದ್ದ ಬಿ.ಜಿ. ವಸಂತ್ (86) ಅವರು ಇಂದು ಬೆ. 9 ಗಂಟೆ ವೇಳೆ ಹೃದಯ ಸ್ತಂಭನದಿಂದ ಇಹಲೋಕ ತ್ಯಜಿಸಿದರು. ಮಡಿಕೇರಿ ಆಟೋ ಸರ್ವಿಸ್ ಸಂಸ್ಥೆಯ ಸಂಸ್ಥಾಪಕರಾದ ವಸಂತ್ ಅವರು ತಮ್ಮ ಬಹುತೇಕ ಸಮಯವನ್ನು ಅಶ್ವಿನಿ ಆಸ್ಪತ್ರೆಯ ಬೆಳವಣಿಗೆಗಾಗಿ ವಿನಿಯೋಗಿಸಿದರು. ತಮ್ಮ ಇಳಿವಯಸ್ಸಿನಲ್ಲೂ ನಿನ್ನೆಯವರೆಗೂ ಅವರು ಆಸ್ಪತ್ರೆಗೆ ಭೇಟಿ ನೀಡಿ ಆಗು ಹೋಗುಗಳನ್ನು ಪರಿಶೀಲಿಸುವಲ್ಲಿ ಆಸಕ್ತಿ ವಹಿಸಿದ್ದರು. ಈ ಹಿಂದೆ ರೊಟೇರಿಯನ್ ಆಗಿದ್ದ ವಸಂತ್ ಅವರು ರೋಟರಿ ಭವನ ನಿರ್ಮಾಣಕ್ಕೂ ತಮ್ಮ ನಿವೇಶನವನ್ನು ಉದಾರವಾಗಿ ನೀಡಿದ್ದರು. ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಏಳಿಗೆಗೂ ಈ ಹಿಂದೆ ಶ್ರಮಿಸಿದ್ದರು. ಮೃತರ ನೇತ್ರಗಳನ್ನು ಅವರ ಕುಟುಂಬ ವರ್ಗ ಇಂದು ಕೊಡಗು ಜಿಲ್ಲಾ ಆಸ್ಪತ್ರೆಯ ಮೂಲಕ ದಾನ ಮಾಡಿದರು.

ಇಂದು ಮಧ್ಯಾಹ್ನದವರೆÀಗೂ ಅಶ್ವಿನಿ ಆಸ್ಪತ್ರೆ ಆವರಣದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು, ಅನೇಕ ಅಭಿಮಾನಿಗಳು, ಹಿತೈಷಿಗಳು ಆಗಮಿಸಿ ನಮನ ಸಲ್ಲಿಸಿದರು. ಬಳಿಕ ಪಾರ್ಥಿವ ಶರೀರವನ್ನು ಕೆಲ ಕಾಲ ಮನೆಯಲ್ಲಿರಿಸಿ ಕೆದಕಲ್‍ನಲ್ಲಿರುವ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ದಿವಂಗತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಶ್ರೀಯುತರ ನಿಧನಕ್ಕೆ ಶಾಸಕ ಕೆ.ಜಿ. ಬೋಪಯ್ಯ, ವಿಶ್ವ ಹಿಂದೂ ಪರಿಷತ್‍ನ ರಾಜ್ಯ ಸಮಿತಿ ಮಾಜಿ ಉಪಾಧ್ಯಕ್ಷ ಹಾಗೂ ಪ್ರಸಕ್ತ ಅಖಿಲ ಭಾರತ ಸಲಹಾ ಸಮಿತಿ ಸದಸ್ಯ ವೈ.ಕೆ ರಾಘವೇಂದ್ರ ರಾವ್, ಜಿಲ್ಲಾ ವಿಶ್ವ ಹಿಂದೂ ಪÀರಿಷತ್ ಪ್ರಮುಖರು, ಭಜರಂಗದಳ ಪ್ರಮುಖರು, ಅಶ್ವಿನಿ ಆಸ್ಪತ್ರೆ ವಿಶ್ವಸ್ಥ ಮಂಡಳಿ ಪ್ರಮುಖರು, ವೈದ್ಯರುಗಳು ಹಾಗೂ ಸಿಬ್ಬಂದಿ, ಮಡಿಕೇರಿ ರೋಟರಿ ಕ್ಲಬ್, ಮಿಸ್ಟಿ ಹಿಲ್ಸ್, ಲಯನ್ಸ್ ಕ್ಲಬ್ ಪ್ರಮುಖರು ಹಾಗೂ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.