ಸೋಮವಾರಪೇಟೆ, ಜು. 10 : ಸದಾ ಮೊಕದ್ದಮೆಗಳ ವಿಚಾರಣೆ, ಆರೋಪಿಗಳ ಬಂಧನ, ತನಿಖೆಯ ಒತ್ತಡದಲ್ಲೇ ಇರುವ ಪೊಲೀಸರು ಒಂದು ಸಂಜೆ ಕರ್ತವ್ಯದ ಜಂಜಾಟ ಗಳನ್ನು ಬದಿಗೊತ್ತಿ ಕುಟುಂಬ ಸದಸ್ಯರೊಂದಿಗೆ ಸಂಭ್ರಮದ ಕ್ಷಣಗಳನ್ನು ಕಳೆದರು.

ಸದಾ ಸಾರ್ವಜನಿಕರ ರಕ್ಷಣೆ ಯೊಂದಿಗೆ, ದಿನದ 24 ಗಂಟೆಯೂ ಕಾನೂನು ಸುವ್ಯವಸ್ಥೆ ಪರಿಪಾಲಿಸುವ ಪೊಲೀಸರು ಸದಾ ಒತ್ತಡದಲ್ಲೇ ಇರುತ್ತಾರೆ. ಇಂತಹ ಒತ್ತಡಗಳ ಮಧ್ಯೆ ಕುಟುಂಬ ಸದಸ್ಯರನ್ನೂ ಗಮನಿಸುವದು ಕಷ್ಟಕರ. ಇದನ್ನು ಮನಗಂಡ ಪೊಲೀಸ್ ಮಹಾ ನಿರೀಕ್ಷಕರು ಪೊಲೀಸರೂ ಸಹ ಕುಟುಂಬ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯಬೇಕು ಎಂದು ಆಲೋಚಿಸಿ ಅನುಷ್ಠಾನಕ್ಕೆ ತಂದ ಸಂತೋಷಕೂಟ ಕಾರ್ಯಕ್ರಮವನ್ನು ಇಲ್ಲಿನ ಠಾಣಾಧಿಕಾರಿ ಶಿವಣ್ಣ ಅವರು ಅನುಷ್ಠಾನಕ್ಕೆ ಹೊಸ ಸಂಪ್ರದಾಯಕ್ಕೆ ನಾಂದಿಹಾಡಿದರು.

ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಪೊಲೀಸ್ ಕುಟುಂಬ ಗಳ ನಡುವಿನ ಸಂತೋಷ ಕೂಟ ಹಬ್ಬದ ವಾತಾವರಣವನ್ನು ಮೂಡಿಸಿತ್ತು. ಗತ್ತು ಗಾಂಭೀರ್ಯ ದಿಂದ ಸಮಾಜದಲ್ಲಿ ಓಡಾಡುವ ಪೊಲೀಸರು ಮಾಮೂಲಿ ನಾಗರಿಕರಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಟುಂಬ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆದರು.

ಕಾರ್ಯಕ್ರಮದಲ್ಲಿ ಪೊಲೀಸ್ ಕುಟುಂಬ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಾಂಸ್ಕøತಿಕ ಚಟುವಟಿಕೆಯಲ್ಲೂ ಪೊಲೀಸರು ಭಾಗವಹಿಸಿ ನಕ್ಕುನಲಿದರು. ನಂತರ ಆಯೋಜಿಸಿದ್ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಸಮಾಜದ ರಕ್ಷಣೆಯ ಜವಾಬ್ದಾರಿ ನಿರ್ವಹಿ ಸುತ್ತಿರುವ ಪೊಲೀಸರ ಕುಟುಂಬ ಗಳಿಗೂ ಭದ್ರತೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಿಸಿದರು.

ದಿನದ 24 ಗಂಟೆಯೂ ಒತ್ತಡದ ಬದುಕನ್ನು ನಡೆಸುತ್ತಿರುವ ಪೋಲಿಸ್ ಸಿಬ್ಬಂದಿಗಳಿಗೆ ಅವರ ಆರೋಗ್ಯ ರಕ್ಷಣೆಯೂ ಮುಖ್ಯ. ಈ ನಿಟ್ಟಿನಲ್ಲಿ ಇಲಾಖೆ ಪೊಲೀಸ್ ಕುಟುಂಬಗಳಿಗೆ ವಿವಿಧ ರೀತಿಯ ಸವಲತ್ತುಗಳು ಮತ್ತು ಭದ್ರತೆಯನ್ನು ಒದಗಿಸಬೇಕಾಗುತ್ತದೆ. ಪ್ರತಿ ತಿಂಗಳ ಒಂದು ದಿನವಾದರೂ ಪೋಲಿಸ್ ಕುಟುಂಬಗಳು ಒಂದೆಡೆ ಸೇರಿ, ಸಂತೋಷ ಕೂಟದಲ್ಲಿ ಪಾಲ್ಗೊಳ್ಳುವದರಿಂದ ಮನಸ್ಸಿಗೆ ತೃಪ್ತಿಯಾಗುವದರೊಂದಿಗೆ ಒಗ್ಗಟ್ಟು ಬೆಳೆಯಲು ಸಹಕಾರವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಸಬ್‍ಇನ್ಸ್‍ಪೆಕ್ಟರ್ ಶಿವಣ್ಣ, ಅಪರಾಧ ವಿಭಾಗದ ಮಂಚಯ್ಯ,ಸಹಾಯಕ ಉಪನಿರೀಕ್ಷಕರುಗಳು ಮತ್ತು ಸಿಬ್ಬಂದಿಗಳು, ಉದ್ಯಮಿ ಪ್ರಭುದೇವ್ ಪಾಲ್ಗೊಂಡಿದ್ದರು.

ಅನಾಥ ಮತ್ತು ನೀರಿಗೆ ಬಿದ್ದ ವ್ಯಕ್ತಿಗಳ ಶವ ಸಾಗಾಟದ ಸಂದರ್ಭ ಪೊಲೀಸರಿಗೆ ಅಗತ್ಯ ನೆರವು ಒದಗಿಸುವ ಇಲ್ಲಿನ ಆಟೋ ಚಾಲಕ ಹಸನಬ್ಬ ಅವರನ್ನು ಇಲಾಖೆಯ ವತಿಯಿಂದ ಪೊಲೀಸ್ ಮಿತ್ರ ಎಂದು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿಗಳ ಕುಟುಂಬದವರಿಗೆ ಬಹುಮಾನ ವಿತರಿಸಲಾಯಿತು.