ಮಡಿಕೇರಿ, ಜು. 10: ಕೊಡಗಿನ ಕೃಷಿಗೆ ಮಾರಕವಾಗಿರುವ ಆಫ್ರಿಕನ್ ದೈತ್ಯ ಶಂಕುಹುಳುವಿನ ನಿಗ್ರಹಕ್ಕೆ ಜಿಲ್ಲಾಡಳಿತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಆಗ್ರಹಿಸಿದೆ.

ಸೋಮವಾರಪೇಟೆ ತಾಲೂಕಿನ ಹಂಡ್ಲಿ ಗ್ರಾ.ಪಂ. ಹಾಗೂ ಶನಿವಾರಸಂತೆ ವ್ಯಾಪ್ತಿಯ ಬೆಳ್ಳಾರಳ್ಳಿ ಪ್ರದೇಶದಲ್ಲಿ ಸುಮಾರು 250ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ದೈತ್ಯ ಹುಳು ಬೀಡುಬಿಟ್ಟಿದ್ದು, ಕ್ರಮೇಣ ಜಿಲ್ಲೆಯಾದ್ಯಂತ ವ್ಯಾಪಿಸುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಖುದ್ದು ಹುಳು ಬಾಧೆಗೊಳಪಟ್ಟ ಬೆಳೆಗಾರರ ತೋಟಗಳನ್ನು ಪರಿಶೀಲಿಸಿ ಶಂಕುಹುಳುವಿನ ಸಂಪೂರ್ಣ ನಿರ್ಮೂಲನೆಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಕಾಫಿ ಮಂಡಳಿಯ ಸಂಶೋಧಕ ಡಾ. ಕೊರಿಯನ್ ಪವರ್ ಪಾಯಿಂಟ್ ಮೂಲಕ ಶಂಕುಹುಳುವಿನಿಂದಾಗುವ ಅನಾಹುತ, ಕೃಷಿಯ ನಾಶದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಇದನ್ನು ಆಲಿಸಿದ ಬಳಿಕ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ತೋಟಗಾರಿಕಾ ಇಲಾಖಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ ನಂತರ ಒಂದು ವಾರದಲ್ಲಿ ಹುಳುವಿನ ಬಾಧೆಗೊಳಪಟ್ಟ ತೋಟವನ್ನು ಪರಿಶೀಲಿಸುವದಾಗಿ ಭರವಸೆ ನೀಡಿದರು. ಈ ಸಂದರ್ಭ ಕಾಫಿ ಮಂಡಳಿ ಸದಸ್ಯ ಜಿ.ಎಲ್. ನಾಗರಾಜ್, ಶಂಕುಹುಳುವಿನ ಬಾಧೆಗೊಳಪಟ್ಟ ತೋಟದ ಮಾಲೀಕರಾದ ಪ್ರದೀಪ್ ಸೇರಿದಂತೆ ಇನ್ನಿತರರು ಇದ್ದರು.