ಮೂರ್ನಾಡು, ಜು. 10: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮೂರ್ನಾಡು ವಲಯ ಸಮಿತಿ ವಾರ್ಷಿಕ ಮಹಾಸಭೆಯು ವಲಯ ಸಮಿತಿ ಅಧ್ಯಕ್ಷ ಬಿ.ಎನ್. ಜಯರಾಂ ಅಧ್ಯಕ್ಷತೆಯಲ್ಲಿ ನಡೆಯಿತು.

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾದ ಮಹಾಸಭೆಯನ್ನು ಕೆಎಸ್‍ಟಿಎ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಎನ್. ಮಂಜುನಾಥ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜೀವನ ನಿರ್ವಹಣೆಗೆ ಟೈಲರ್ ವೃತ್ತಿ ಇಂದು ಅನೇಕ ಮಂದಿಗೆ ಸಹಕಾರಿಯಾಗುತ್ತಿದೆ. ಇತ್ತಿಚೀನ ದಿನಗಳಲ್ಲಿ ಪುರುಷರು ಟೈಲರ್ ವೃತ್ತಿಯಲ್ಲಿ ತೊಡಗಿಸಿಕೊಳ್ಳುವದು ಅತಿ ವಿರಳವಾಗಿ ಕಂಡುಬರುತ್ತಿದೆ. ಸಂಘಟನೆ ಬೆಳೆಯಲು ಹಾಗೂ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟನೆ ಸದಸ್ಯತ್ವ ಅತೀ ಮುಖ್ಯವಾಗಿದೆ. ಪ್ರತಿಯೊಬ್ಬರು ಸಂಘಟನೆಯಲ್ಲಿ ಸದಸ್ಯತ್ವ ಪಡೆದು ಪ್ರತಿ ವರ್ಷಕ್ಕೆ ನವೀಕರಿಸಿಕೊಂಡರೆ ಸಂಘಟನೆ ಬಲಗೊಳ್ಳುತ್ತದೆ ಎಂದು ತಿಳಿಸಿದರು.

ಕೆಎಸ್‍ಟಿಎ ರಾಜ್ಯ ಸಮಿತಿ ಸಹಕಾರ್ಯದರ್ಶಿ ಕೆ.ಹೆಚ್. ಶೇಕ್ ಅಹಮದ್, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಶಂಕರ್, ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಕೆ.ಎಸ್. ಮಮತ, ಮಡಿಕೇರಿ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಬಿ.ಎ. ವಿಠಲ, ಮಡಿಕೇರಿ ಕ್ಷೇತ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಎ.ಪಿ. ತುಳಸಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವೇದಿಕೆಯಲ್ಲಿ ಮೂರ್ನಾಡು ವಲಯ ಸಮಿತಿ ಸಲಹೆಗಾರ ಚೌರೀರ ತಿಮ್ಮಯ್ಯ ಉಪಸ್ಥಿತರಿದ್ದರು.

ಸಭೆಯಲ್ಲಿ ಕಳೆದ ಸಾಲಿನ ವಾರ್ಷಿಕ ವರದಿಯನ್ನು ಹನೀಶ್ ವಾಚಿಸಿ ಕಳೆದ ಸಾಲಿನ ಖರ್ಚು ವೆಚ್ಚಗಳನ್ನು ಗೋಪಾಲ್ ಮಂಡಿಸಿದರು.