ಸೋಮವಾರಪೇಟೆ,ಜು.10: ಅವ್ಯವಸ್ಥೆಗಳ ಆಗರವಾಗಿರುವ ಇಲ್ಲಿನ ತಾಲೂಕು ಕಚೇರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದು ಆಲಿಸಿದ ಶಾಸಕರು, ತಕ್ಷಣ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಬೇಕೆಂದು ತಹಶೀಲ್ದಾರ್‍ಗೆ ಸೂಚಿಸಿದರು.ತಾಲೂಕು ಕಚೇರಿಯಲ್ಲಿನ ಅವ್ಯವಸ್ಥೆ ಹಾಗೂ ಭ್ರಷ್ಟಾಚಾರದ ಬಗ್ಗೆ ಶಾಸಕರು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಕಾಫಿ ಬೆಳೆಗಾರರ ಹೋರಾಟ ಸಮಿತಿ ಮನವಿ ಮಾಡಿದ ಮೇರೆಗೆ ಶಾಸಕರು ತಾಲೂಕು ಕಚೇರಿಗೆ ಭೇಟಿ ನೀಡಿ ಕ್ರಮಕ್ಕೆ ಸೂಚಿಸಿದರು.

ಶಾಸಕರು ತಾಲೂಕು ಕಚೇರಿ ಪ್ರವೇಶಿಸುತ್ತಿದ್ದಂತೆ ಆರ್‍ಟಿಸಿಗಾಗಿ ಮಹಿಳೆಯರು, ವೃದ್ಧರೆನ್ನದೆ ನೂರಾರು ಮಂದಿ ಬೆಳೆಗಾರರು ಸರತಿ ಸಾಲಿನಲ್ಲಿ ನಿಂತಿದ್ದರು. ಶಾಸಕರ ಆಗಮನವನ್ನು ಕಂಡ ಹಲವಾರು ತಮಗೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗುವದಿಲ್ಲ. ಆಯಾಸವಾದಾಗ ಕುಳಿತುಕೊಳ್ಳಲೂ ಸಹ ಇಲ್ಲಿ ಯಾವದೇ ಬೆಂಚುಗಳಿಲ್ಲ. ತಕ್ಷಣ ಆರ್‍ಟಿಸಿ ಪತ್ರ ನೀಡುವಂತೆ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿಕೊಂಡರು.

ಇದಕ್ಕೆ ಸ್ಪಂದಿಸಿದ ಶಾಸಕರು ಕೂಡಲೇ ತಹಶೀಲ್ದಾರ್‍ರವರನ್ನು ಸ್ಥಳಕ್ಕೆ ಕರೆಸಿ, ತಕ್ಷಣದಿಂದಲೇ ಆರ್‍ಟಿಸಿ ವಿತರಣೆಗಾಗಿ ಇನ್ನೊಂದು ಕೌಂಟರ್ ಅನ್ನು ಆರಂಭಿಸುವಂತೆ ಸೂಚಿಸಿದರಲ್ಲದೆ, ಸಂತೆ ದಿನ ಆರ್‍ಟಿಸಿಗಾಗಿ ಬರುವವರ ಸಂಖ್ಯೆ ಹೆಚ್ಚಿದ್ದು, ಬರುವವರಿಗೆ ಟೋಕನ್‍ಗಳನ್ನು ವಿತರಿಸಲು ಕ್ರಮ ಕೈಗೊಳ್ಳಿ ಎಂದರು.

ನಂತರ ಆರ್‍ಟಿಸಿ ವಿತರಣಾ ಕೇಂದ್ರದೊಳಗೆ ಪರಿಶೀಲನೆ ನಡೆಸಿದ ಶಾಸಕರು, ನೆಮ್ಮದಿ ಕೇಂದ್ರದತ್ತ ತೆರಳಿದ ಸಂದರ್ಭ ಅಲ್ಲಿಯೂ ಕೂಡ ಸರತಿ ಸಾಲಿನಲ್ಲಿ ಸಾರ್ವಜನಿಕರು ನಿಂತಿದ್ದನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದರು. ಕೆಲವೊಮ್ಮೆ ಸರ್ವರ್ ನಿಧಾನವಾದಾಗ ಸಮಸ್ಯೆ ಉಲ್ಬಣಿಸುತ್ತದೆ ಎಂದು ತಹಶೀಲ್ದಾರ್ ಮನವರಿಕೆ ಮಾಡಿಕೊಟ್ಟರು.

ನಂತರ ಆಹಾರ ಮತ್ತು ನಾಗರಿಕ ಸರಬರಾಜು ವಿಭಾಗದ ಕಚೇರಿಗೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು. ಒಟ್ಟಿನಲ್ಲಿ ತಾಲೂಕು ಕಚೇರಿಗೆ ಬರುವ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಶೀಘ್ರಗತಿಯಲ್ಲಿ ಮಾಡಿಕೊಡುವಂತೆ ತಹಶೀಲ್ದಾರ್ ಮಹೇಶ್‍ರವರಿಗೆ ಸೂಚಿಸಿದರು.

ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಂ.ಸಿ. ಮುದ್ದಪ್ಪ, ಇಲ್ಲಿನ ಕಚೇರಿಯಲ್ಲಿ ಕಾಫಿ ಬೆಳೆಗಾರರಿಗೆ ಸಂಬಂಧಿಸಿದ ಕಡತಗಳ ಶೀಘ್ರ ವಿಲೇವಾರಿ, ಭೂಮಾಪನಾ ಇಲಾಖೆಯಲ್ಲಿನ ಸರ್ವೆ, ದುರಸ್ತಿ ಕಡತಗಳ ಶೀಘ್ರ ವಿಲೇವಾರಿ ಮಾಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭ ಕಾಫಿ ಬೆಳೆಗಾರರ ಹೋರಾಟ ಸಮಿತಿ ಉಪಾಧ್ಯಕ್ಷರುಗಳಾದ ಜಲಾ ಹೂವಯ್ಯ, ಶ್ರೀಕೇಶ್, ಕಾರ್ಯದರ್ಶಿ ಬಿ.ಎಸ್. ಸುದೀಪ್, ವಕ್ತಾರ ಎಂಎ. ಶ್ಯಾಮ್‍ಪ್ರಸಾದ್, ಖಜಾಂಚಿ ಕೆ.ಎಂ.ದಿನೇಶ್, ಜಿಲ್ಲಾ ಏಲಕ್ಕಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಈ. ಬೋಪಯ್ಯ, ಬಿಜೆಪಿ ಪ್ರಮುಖ ಟಿ.ಕೆ. ರಮೇಶ್ ಸೇರಿದಂತೆ ಬೆಳೆಗಾರರ ಸಂಘದ ನಿರ್ದೇಶಕರು ಹಾಜರಿದ್ದರು.