ಸೋಮವಾರಪೇಟೆ, ಜು.10 : ಕರ್ನಾಟಕ ವಿಧಾನ ಸಭೆಯ ಅರ್ಜಿಗಳ ಸಮಿತಿ ಅಧ್ಯಕ್ಷರೂ ಸೇರಿದಂತೆ ಇತರ ಸದಸ್ಯರುಗಳು ತಾ. 12ರಂದು (ನಾಳೆ) ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಜನತೆಯಿಂದ ಮನವಿ ಸ್ವೀಕರಿಸಲಿದ್ದಾರೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರೂ ಆಗಿರುವ ರಾಜ್ಯ ಅರ್ಜಿ ಸಮಿತಿ ಸದಸ್ಯ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ತಾ. 12ರಂದು ಪೂರ್ವಾಹ್ನ 11 ಗಂಟೆಗೆ ಹಾರಂಗಿಯಲ್ಲಿರುವ ಪರಿವೀಕ್ಷಣಾ ಮಂದಿರದಲ್ಲಿ ರಾಜ್ಯ ಅರ್ಜಿಗಳ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನ ಸಭಾ ಉಪಸಭಾಧ್ಯಕ್ಷರಾದ ಎನ್.ಡಿ. ಶಿವಶಂಕರ ರೆಡ್ಡಿ ನೇತೃತ್ವದ ತಂಡ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭ ಕಳೆದ ಅನೇಕ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯಡವನಾಡು ಮತ್ತು ಅತ್ತೂರು ಗ್ರಾಮಸ್ಥರಿಗೆ ಆರ್‍ಟಿಸಿ ವಿತರಿಸಲಿದ್ದಾರೆ ಎಂದರು.

ಶಿವಶಂಕರ ರೆಡ್ಡಿ ಅವರೊಂದಿಗೆ ಸಮಿತಿಯ ಸದಸ್ಯರುಗಳಾದ ಕಾಂಗ್ರೆಸ್‍ನ ಕೆ.ಎಸ್. ಮಂಜುನಾಥ್ ಗೌಡ, ಹೆಚ್.ಪಿ. ರಾಜೇಶ್, ಅರಬೈಲ್ ಶಿವರಾಂ ಹೆಬ್ಬಾರ್, ರಹೀಂ ಖಾನ್, ಜಿ.ಹೆಚ್. ಶ್ರೀನಿವಾಸ್,

(ಮೊದಲ ಪುಟದಿಂದ) ಬಿಜೆಪಿ ಶಾಸಕರುಗಳಾದ ಎಸ್. ಸುರೇಶ್‍ಕುಮಾರ್, ಅಪ್ಪಚ್ಚು ರಂಜನ್, ವಿಶ್ವನಾಥ್ ಪಾಟೀಲ್, ನಾರಾಯಣ ಸ್ವಾಮಿ, ಜಾತ್ಯತೀತ ಜನತಾದಳದ ನಾಗರಾಜಯ್ಯ, ನಾರಾಯಣಗೌಡ, ಗೋಪಾಲಯ್ಯ, ಪಕ್ಷೇತರ ಶಾಸಕರಾದ ಹೆಚ್.ಎಸ್. ಪ್ರಕಾಶ್, ಅಶೋಕ್ ಖೇಣಿ, ವರ್ತೂರು ಪ್ರಕಾಶ್ ಅವರುಗಳು ಆಗಮಿಸಲಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದರು.

ಹಾರಂಗಿ ಅಣೆಕಟ್ಟು ನಿರ್ಮಾಣ ಸಂದರ್ಭ ಭೂಮಿ ಹಾಗೂ ವಸತಿಯನ್ನು ಕಳೆದುಕೊಂಡು ಅನೇಕ ದಶಕಗಳ ಹಿಂದೆ ಯಡವನಾಡು ಮತ್ತು ಅತ್ತೂರು ಭಾಗದ ಅರಣ್ಯ ಭೂಮಿಯಲ್ಲಿ ನೆಲೆನಿಂತ ಮಂದಿಗೆ ಇದುವರೆಗೂ ಹಕ್ಕುಪತ್ರ ದೊರಕದೇ ಇದ್ದುದರಿಂದ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದರು. 1980ರಲ್ಲಿ ಸರ್ಕಾರದ ಕೆಲಸಗಳಿಗೆ ಬಳಸಿಕೊಳ್ಳುವ ಜಾಗಕ್ಕೆ ಪ್ರತಿಯಾಗಿ ಎರಡು ಪಟ್ಟು ಜಾಗವನ್ನು ಫಲಾನುಭವಿಗಳಿಗೆ ನೀಡಬೇಕು ಎಂಬ ಸರ್ಕಾರಿ ಕಾಯ್ದೆ ಜಾರಿಗೆ ಬಂದರೂ ಸಹ ಅರಣ್ಯ ಇಲಾಖೆ ಈ ಬಗ್ಗೆ ಯಾವದೇ ಕ್ರಮ ಕೈಗೊಂಡಿರಲಿಲ್ಲ ಎಂದು ಶಾಸಕ ಅಪ್ಪಚ್ಚುರಂಜನ್ ಮಾಹಿತಿ ನೀಡಿದರು.

ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಸಂದರ್ಭ ತಾನು ಅರ್ಜಿ ಸಮಿತಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು, ತಕ್ಷಣ ಯಡವನಾಡು ಮತ್ತು ಅತ್ತೂರು ಗ್ರಾಮಗಳನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸುವ ಅರ್ಜಿಯನ್ನು ವಿಲೇವಾರಿ ಮಾಡಲು ಸೂಚಿಸಿ ಸುಮಾರು 15 ಸಭೆಗಳನ್ನು ನಡೆಸಿದ್ದೆ. ಅಂತಿಮವಾಗಿ ಉದ್ದೇಶಿತ ಗ್ರಾಮಗಳನ್ನು ಈಗಿನ ಸರ್ಕಾರ ನೋಟಿಫಿಕೇಷನ್ ಮಾಡಿ ಕ್ಯಾಬಿನೆಟ್ ಸಭೆಯಲ್ಲಿ ಡಿನೋಟಿಫೈ ಮಾಡಿದ ಮೇರೆ ಅರಣ್ಯ ಭೂಮಿಯ ಬದಲಾಗಿ ಕಂದಾಯ ಭೂಮಿಯನ್ನಾಗಿ ಪರಿವರ್ತಿಸಲಾಗಿದೆ ಎಂದರು.

ತಾನು ಶಾಸಕನಾಗಿ ಆಯ್ಕೆಯಾದಾಗಿನಿಂದಲೂ ಈ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಬಗ್ಗೆ ಆಸಕ್ತಿ ವಹಿಸಿದ್ದು, ಅಂತಿಮವಾಗಿ ಯಶ ಕಾಣಲಾಗಿದೆ. ಇದರೊಂದಿಗೆ ತಾನು ಅರ್ಜಿ ಸಮಿತಿ ಅಧ್ಯಕ್ಷನಾಗಿದ್ದ ಸಂದರ್ಭ ರಾಜ್ಯ ಒಕ್ಕಲಿಗರ ಸಂಘಕ್ಕೆ ಸೇರಿದ ಸುಮಾರು 800ಕೋಟಿ ಮೌಲ್ಯದ ಆಸ್ತಿಯನ್ನು ಸಂಘಕ್ಕೆ ಉಳಿಸಿಕೊಟ್ಟ ತೃಪ್ತಿ ಇದೆ. ಇದಕ್ಕೆಲ್ಲಾ ಕ್ಷೇತ್ರದ ಮತದಾರರೇ ಕಾರಣರಾಗಿದ್ದಾರೆ ಎಂದು ರಂಜನ್ ಸ್ಮರಿಸಿದರು.

ತಾ. 12ರಂದು ಹಾರಂಗಿ ಪರಿವೀಕ್ಷಣಾ ಮಂದಿರಲ್ಲಿ ಸಾಂಕೇತಿಕವಾಗಿ 25 ಮಂದಿಗೆ ಹಕ್ಕುಪತ್ರ ನೀಡಲಾಗುವದು. ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಮಕ್ಷಮ ಕಾರ್ಯಕ್ರಮ ಆಯೋಜಿಸಿ ಹಕ್ಕುಪತ್ರಗಳನ್ನು ವಿತರಿಸಲಾಗುವದು ಎಂದು ಶಾಸಕರು ತಿಳಿಸಿದರು.

ತಾ. 13ರಂದು ಅರ್ಜಿ ಸಮಿತಿಯ ಸದಸ್ಯರುಗಳು ಮಡಿಕೇರಿಯಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ನಂತರ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ-ಜನಾರ್ಧನಹಳ್ಳಿಗೆ ಭೇಟಿ ನೀಡಲಿದ್ದಾರೆ. ಹಾಸನ-ಕೊಡಗು ಸಂಪರ್ಕಿಸುವ ಸೇತುವೆ ಕಾಮಗಾರಿಯನ್ನು ಪರಿಶೀಲಿಸಲಿದ್ದು, ನಂತರ ಹಿರಿಸಾವೆಯಲ್ಲಿನ ರಸ್ತೆ ಸಮಸ್ಯೆಯನ್ನು ವೀಕ್ಷಿಸಲಿದ್ದಾರೆ ಎಂದರು.

ಅರ್ಜಿ ಸಮಿತಿಯ ಪ್ರಮುಖರು ಆಗಮಿಸುವ ಸಂದರ್ಭ ಜಿಲ್ಲೆಯ ಯಾವದೇ ಭಾಗದಲ್ಲಿನ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಜನತೆ ಅರ್ಜಿ ಸಲ್ಲಿಸಬಹುದು. ಸೂಕ್ತ ದಾಖಲಾತಿಗಳೊಂದಿಗೆ ಸಾರ್ವಜನಿಕರು ಅರ್ಜಿ ಸಲ್ಲಿಸಬೇಕೆಂದು ರಂಜನ್ ಮನವಿ ಮಾಡಿದರು. ಗೋಷ್ಠಿಯಲ್ಲಿ ಯಡವನಾಡು ಗ್ರಾಮಸ್ಥರುಗಳಾದ ಟಿ.ಕೆ. ರಮೇಶ್, ಕೆ.ಕೆ. ರಘುಪತಿ, ಯು.ಸಿ. ಲಕ್ಷ್ಮಣ, ಕೆ.ಎಸ್. ಪ್ರಕಾಶ್, ದೇವರಾಜ್ ಅವರುಗಳು ಉಪಸ್ಥಿತರಿದ್ದರು.