ಮಡಿಕೇರಿ, ಜು. 9: ಕೊಡಗಿನ ಪ್ರಕೃತಿ ರಮಣೀಯ ಪ್ರವಾಸಿ ತಾಣ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಮಾಂದಲಪಟ್ಟಿಗೆ ಇಂದು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಮಾರ್ಗ ಸಂಪರ್ಕ ಪಡೆದುಕೊಂಡು ಗ್ರಾಮವಾಸಿಗಳ ಸಹಿತ ಪ್ರವಾಸಿಗರು ಸಂಭ್ರಮಿಸಿದ ಕ್ಷಣ ಎದುರಾಯಿತು. ಮೋಡ ಮುಸುಕಿದ ಬೆಟ್ಟ ತಪ್ಪಲಿನ ನಡುಗೆ ಏರು ರಸ್ತೆ ಮಾರ್ಗದಲ್ಲಿ ಸರಕಾರಿ ಬಸ್ ಬರುತ್ತಿದ್ದಂತೆ ಮುಕ್ಕೋಡ್ಲು, ಕಾಲೂರು, ದೇವಸ್ತೂರು, ಹಚ್ಚಿನಾಡು ಮುಂತಾದ ಗ್ರಾಮಸ್ಥರೊಂದಿಗೆ ಪ್ರವಾಸಿಗರು ಸಂಭ್ರಮಿಸಿದ್ದು ಕಂಡುಬಂತು.ಶತಮಾನಗಳಿಂದ ಕುಗ್ರಾಮಗಳಲ್ಲಿ ತಮ್ಮ ಹಿರಿಯರು ಕಷ್ಟಕರ ಬದುಕಿನೊಂದಿಗೆ ರಸ್ತೆ, ವಿದ್ಯುತ್, ಸಾರಿಗೆ ವ್ಯವಸ್ಥೆಯಿಲ್ಲದೆ ಜೀವನ ಹೋರಾಟ ನಡೆಸಿದ ದಿನಗಳನ್ನು ಶಾಸಕ ಕೆ.ಜಿ. ಬೋಪಯ್ಯ ಹಾಗೂ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಸ್ಮರಿಸಿಕೊಂಡು, ಜನತೆಯ ಏಳಿಗೆಗಾಗಿ ತಾವುಗಳು ರಾಜಕೀಯ ಭೇದವಿಲ್ಲದೆ ಶ್ರಮಿಸುವದಾಗಿ ಭರವಸೆ ನೀಡಿದರು.

ಮಾಂದಲ್ ಪಟ್ಟಿ-ದೇವಸ್ತೂರು- ಮಡಿಕೇರಿ ಮಾರ್ಗದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರಕ್ಕೆ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಅವರುಗಳು ಗಣ್ಯರೊಂದಿಗೆ ಭಾನುವಾರ ಚಾಲನೆ ನೀಡಿದರು.

ಮಾಂದಲ್‍ಪಟ್ಟಿಯಲ್ಲಿ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಗಾಳಿಬೀಡು ಗ್ರಾ.ಪಂ.ವ್ಯಾಪ್ತಿಯ ಕಾಲೂರು, ಮಾಂದಲ್‍ಪಟ್ಟಿ ಗ್ರಾಮಗಳು ಹಿಂದೆ ಕುಗ್ರಾಮವಾಗಿತ್ತು,

(ಮೊದಲ ಪುಟದಿಂದ) ಈಗ ರಸ್ತೆ, ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಲಭ್ಯ ಪಡೆದು ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿವೆ. ಆ ದಿಸೆಯಲ್ಲಿ ನೂತನವಾಗಿ ಬಸ್ ಸಂಪರ್ಕವನ್ನು ಮಾಂದಲ್‍ಪಟ್ಟಿಗೆ ಕಲ್ಪಿಸಲಾಗಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರಯೋಜನವಾಗಲಿ ಎಂದು ಆಶಿಸಿದರು.

ಹಿಂದೆ ಬಸ್ ಸಂಪರ್ಕವಿಲ್ಲದೆ ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ನಡೆದೇ ತಲೆಯಲ್ಲಿ ಹೊತ್ತು ತರುತ್ತಿದ್ದರು, ಮಕ್ಕಳು ಶಾಲೆಗೆ ನಡೆದುಕೊಂಡು ಹೋಗಬೇಕಿತ್ತು, ಸುರಕ್ಷಿತ ರಸ್ತೆ ಹಾಗೂ ವಿದ್ಯುತ್ ಸಂಪರ್ಕವಿಲ್ಲದೆ, ಇಲ್ಲಿನ ನಾಗರಿಕರು ಮತ್ತು ಮಕ್ಕಳು ತುಂಬಾ ತೊಂದರೆ ಅನುಭವಿಸಿದ್ದಾರೆ ಎಂದು ತಮ್ಮ ಬಾಲ್ಯದÀ ದಿನಗಳನ್ನು ಕೆ.ಜಿ.ಬೋಪಯ್ಯ ಸ್ಮರಿಸಿಕೊಂಡರು.

ಮಾಂದಲ್ ಪಟ್ಟಿಯಿಂದ ಹಮ್ಮಿಯಾಲ 6 ಕಿ.ಮೀ ವರೆಗೂ ಬಸ್ ಸಂಪರ್ಕ ಕಲ್ಪಿಸಬೇಕಿದೆ. ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಕೆ.ಜಿ.ಬೋಪಯ್ಯ ಸಲಹೆ ನೀಡಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಈ ರಸ್ತೆ ನಿರ್ಮಾಣ ಮಾಡಲಾಗಿದೆ. ಹಲವು ರಸ್ತೆ ಗುಂಡಿ ಬಿದ್ದಿದ್ದು, ಇದನ್ನು ಸರಿಪಡಿಸಲು ಸಂಬಂಧಪಟ್ಟವರ ಜೊತೆ ಚರ್ಚಿಸಲಾಗುವದು, ಜೊತೆಗೆ ವಿವಿಧ ಯೋಜನೆಯಡಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವದು ಎಂದು ಶಾಸಕರು ಭರವಸೆ ನೀಡಿದರು.

ಮಾಂದಲ್‍ಪಟ್ಟಿ ಮಾರ್ಗದಲ್ಲಿ ಸಂಚರಿಸುವ ಜೀಪುಗಳ ವಾಹನ ಚಾಲಕರು ನಿಧಾನವಾಗಿ ಚಾಲನೆ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು. ಆ ಮೂಲಕ ಪ್ರವಾಸಿಗರು, ಗ್ರಾಮಸ್ಥರು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕಾಳಜಿ ತೋರಬೇಕೆಂದು ಕಿವಿಮಾತು ಹೇಳಿದರು.

ವಿಧಾನ ಪರಿಷತ್ ಸದಸೆÀ್ಯ ವೀಣಾ ಅಚ್ಚಯ್ಯ ಅವರು ಮಾತನಾಡಿ ಕಾಲೂರು, ಮುಕ್ಕೋಡ್ಲು, ಹಮ್ಮಿಯಾಲ ಭಾಗದ ಮಕ್ಕಳು ಮತ್ತು ಸಾರ್ವಜನಿಕರ ಅನುಕೂಲಕ್ಕೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಇದರ ಪ್ರಯೋಜನ ಪಡೆಯಬೇಕು. ಬಸ್ ಸಂಚಾರಕ್ಕೆ ಯಾವದೇ ರೀತಿಯ ತಡೆ ಉಂಟುಮಾಡದೆ ಕೆಎಸ್‍ಆರ್‍ಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ಸಲಹೆ ಮಾಡಿದರು.

ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಮಾತನಾಡಿ ಇಲ್ಲಿನ ಜನರ ಅನುಕೂಲಕ್ಕಾಗಿ ಬಸ್ ಸಂಪರ್ಕ ಕಲ್ಪಿಸಲಾಗಿದೆ. ಗ್ರಾಮಸ್ಥರು, ಜನಪ್ರತಿನಿಧಿಗಳು ಎಲ್ಲರ ಸಹಕಾರದಿಂದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಈ ಮಾರ್ಗವಾಗಿ ಮತ್ತೊಂದು ಬಸ್ ಕಲ್ಪಿಸುವಂತೆಯೂ ಅವರು ಗಮನ ಸೆಳೆದರು. ಕೆ.ಎಸ್.ಆರ್.ಟಿ.ಸಿ ಮಡಿಕೇರಿ ಘಟಕದ ಇನ್ಸ್‍ಪೆಕ್ಟರ್ ಈರಸಪ್ಪ ಅವರು ಮಾತನಾಡಿ ಮಾಂದಲ್‍ಪಟ್ಟಿಗೆ ಬಸ್ ಸಂಪರ್ಕವು ಪ್ರತಿನಿತ್ಯ ಮಡಿಕೇರಿಯಿಂದ ಬೆಳಗ್ಗೆ 7 ಗಂಟೆಗೆ ಹೊರಟು, ಬೆಳಗ್ಗೆ 8.15 ಗಂಟೆಗೆ ಮಾಂದಲ್ ಪಟ್ಟಿ ತಲುಪಲಿದೆ. ಬಳಿಕ ಬೆಳಗ್ಗೆ 8.30 ಗಂಟೆಗೆ ಮಾಂದಲ್‍ಪಟ್ಟಿಯಿಂದ ಮಡಿಕೇರಿಗೆ ತೆರಳಲಿದೆ. ಹಾಗೆಯೇ ಸಂಜೆ 4 ಗಂಟೆಗೆ ಮಡಿಕೇರಿಯಿಂದ ಹೊರಟು ಸಂಜೆ 5.30 ಗಂಟೆಗೆ ಮಾಂದಲ್ ಪಟ್ಟಿ ತಲುಪಿ ವಾಪಸ್ ಮಡಿಕೇರಿಗೆ ಹೋಗಲಿದೆ ಎಂದು ಮಾಹಿತಿ ನೀಡಿದರು.

ಜಿ.ಪಂ.ಸದಸೆÀ್ಯ ಯಾಲದಾಳು ಪದ್ಮಾವತಿ, ತಾ.ಪಂ.ಸದಸ್ಯ ಮುದ್ದಂಡ ರಾಯ್ ತಮ್ಮಯ್ಯ, ಗಾಳಿಬೀಡು ಗ್ರಾ.ಪಂ.ಅಧ್ಯಕ್ಷ ಸುಭಾಷ್ ಸೋಮಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ, ಎ.ಟಿ.ಮಾದಪ್ಪ, ಸಿ.ಎಂ.ತಿಮ್ಮಯ್ಯ, ಪುಷ್ಪ ಪೂಣಚ್ಚ, ಕನ್ನಂಡ ಪೆಮ್ಮಯ್ಯ, ಕಾಲೂರು ನಾಗೇಶ್, ಗ್ರಾಮಸ್ಥರು ಇತರರು ಇದ್ದರು.