ಗೋಣಿಕೊಪ್ಪಲು, ಜು. 10: ಬಾಳೆಲೆ-ನಿಟ್ಟೂರು ಸಂಪರ್ಕ ಸೇತುವೆಯನ್ನು ಎತ್ತರಿಸಲಾಗಿದ್ದರೂ ರಸ್ತೆ ಅಗಲೀಕರಣಕ್ಕೆ ಖಾಸಗಿ ಭೂ ಮಾಲೀಕರು ಅಡ್ಡಿ ಪಡಿಸುತ್ತಿದ್ದು, ಜಿಲ್ಲಾಧಿಕಾರಿ ಡಾ. ಆರ್.ವಿ. ಡಿಸೋಜಾ ಮಧ್ಯಪ್ರವೇಶಿಸಬೇಕೆಂದು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ಒತ್ತಾಯಿಸಿದ್ದಾರೆ.

ಉದ್ಧೇಶಿತ ಬಹುಪಯೋಗಿ ಕಾಮಗಾರಿ ಸುಮಾರು ರೂ. 5.60 ಕೋಟಿ ವೆಚ್ಚದಲ್ಲಿ ಮುಕ್ತಾಯ ಹಂತದಲ್ಲಿದ್ದು, ಇದೀಗ ರಸ್ತೆ ಅಗಲೀಕರಣಕ್ಕೆ ಅಡ್ಡಿ ಎದುರಾದ ಹಿನ್ನೆಲೆ ಕಾಮಗಾರಿ ಸ್ಥಗಿತಗೊಳ್ಳುವಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಇತ್ಯರ್ಥಪಡಿಸಲು ಮನವಿ ಮಾಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆಂದು ದೂರಿದ್ದಾರೆ.

ಮೈಸೂರು ಗುತ್ತಿಗೆದಾರ ಭಾಸ್ಕರ್ ರೆಡ್ಡಿ ಕಾಮಗಾರಿಯನ್ನು ಇದೀಗ ಸ್ಥಗಿತಗೊಳಿಸಿರುವ ಹಿನ್ನೆಲೆ ಈ ವಿಭಾಗದ ನೂರಾರು ಮಂದಿ ಸಾರ್ವಜನಿಕರು ಇದೀಗ ಅಸಮಾಧಾನಗೊಂಡಿದ್ದಾರೆ. ಉದ್ದೇಶಿತ ರಸ್ತೆ ಅಗಲೀಕರಣಕ್ಕೆ ಹಲವು ಭೂ ಮಾಲೀಕರು ಉದಾರವಾಗಿ ತಮ್ಮ ಜಾಗವನ್ನು ನೀಡಿದ್ದಾರೆ. ಒಬ್ಬರು ಸರ್ಕಾರದಿಂದ ಪರಿಹಾರ ಕೇಳುತ್ತಿದ್ದಾರೆ. ಇದನ್ನು ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಪರಿಹರಿಸಲು ಸಾಧ್ಯವಿದೆ ಎಂದು ಸತೀಶ್‍ದೇವಯ್ಯ ತಿಳಿಸಿದ್ದಾರೆ.

ಬಾಳೆಲೆ ಕಂದಾಯ ಇಲಾಖೆಯ ಅವ್ಯವಸ್ಥೆ, ಕಟ್ಟಡ ದುರಸ್ತಿ ಬಗ್ಗೆಯೂ ಕಳೆದ ಬಾರಿ ಜಿಲ್ಲಾಧಿಕಾರಿಗಳು ಬಾಳೆಲೆ ಸಂಪರ್ಕ ಸಭೆ ನಡೆಸಿದಾಗ ಸಾರ್ವಜನಿಕರು ಮನವಿ ಮಾಡಿದ್ದರು. ಆದರೆ, ಶಿಥಿಲಾವಸ್ಥೆಯಲ್ಲಿರುವ ಕಂದಾಯ ನಿರೀಕ್ಷಕರ ಕಚೇರಿ, ಕಂಪ್ಯೂಟರ್ ಕಟ್ಟಡ ತೆರವು ಸಾಧ್ಯವಾಗಿಲ್ಲ. ಇದೀಗ ಶಿವಪ್ಪ ಎಂಬ ಕಂದಾಯ ನಿರೀಕ್ಷಕರು ಶ್ರೀಮಂಗಲ ಹಾಗೂ ಬಾಳೆಲೆ ಎರಡೂ ಹೋಬಳಿಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವದರಿಂದ ಇಲ್ಲಿನ ಕೃಷಿಕರ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಕೆಲಸಗಳು ಆಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ತುರ್ತು ಭೇಟಿ ನೀಡಿ ಸಮಸ್ಯೆಗೆ ಪರಿಹಾರ ನೀಡುವಂತೆಯೂ ಇಲ್ಲವೇ ಪ್ರತಿಭಟನೆ ಹಮ್ಮಿಕೊಳ್ಳುವದಾಗಿಯೂ ತಿಳಿಸಿದ್ದಾರೆ. 15 ದಿನಗಳ ಗಡುವು ನೀಡಲಾಗಿದ್ದು, ಬಾಳೆಲೆ ಕಂದಾಯ ನಿರೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಿ ಮೊದಲ ಹಂತದ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಸತೀಶ್ ದೇವಯ್ಯ ತಿಳಿಸಿದ್ದಾರೆ.

- ಟಿ.ಎಲ್.ಎಸ್.