ಕುಶಾಲನಗರ, ಜು 10: ಮುಳ್ಳುಸೋಗೆ ಗ್ರಾಮದ ಜನತಾ ಕಾಲನಿಯಲ್ಲಿ ತೆರೆದಿರುವ ಮದ್ಯದಂಗಡಿಯನ್ನು ಕೂಡಲೇ ಮುಚ್ಚಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟಿಸಿದ ಘಟನೆ ನಡೆಯಿತು.ಜನತಾ ಕಾಲನಿಯ ಬಡಾವಣೆಯೊಂದಲ್ಲಿ ನೂತನವಾಗಿ ಮದ್ಯದಂಗಡಿ ಆರಂಭಿಸಿದ್ದು ಇದರಿಂದ ಸ್ಥಳೀಯ ನಿವಾಸಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ಅನಾನುಕೂಲ ಉಂಟಾಗಿದೆ. ಮದ್ಯದಂಗಡಿ ಆರಂಭಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರ ಬಗ್ಗೆ ಪಂಚಾಯಿತಿ ಸದಸ್ಯರೊಬ್ಬರು ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿಸಿದ್ದಾರೆ. ಕೂಡಲೇ ಅವರು ಕ್ಷಮೆಯಾಚಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜನತಾ ಕಾಲನಿ ನಿವಾಸಿ ಸುನೀಲ್ ಎಂಬವರು, ದೇವಾಲಯ, ಅಂಗನವಾಡಿ ಸಮೀಪದಲ್ಲಿಯೇ ಮದ್ಯದಂಗಡಿ ತೆರೆಯಲಾಗಿದೆ. ಮದ್ಯದಂಗಡಿ ಪ್ರಾರಂಭಿಸುವ ಮುನ್ನ ಬಡಾವಣೆಯ ನಿವಾಸಿಗಳ ಸಮ್ಮತಿ ಪಡೆದುಕೊಂಡಿಲ್ಲ. ಈ ಮಾರ್ಗದ ಮೂಲಕ ಶಾಲಾ ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ತೆರಳುತ್ತಿದ್ದು ಮದ್ಯದಂಗಡಿಯಿಂದ ತೀವ್ರ ಅನಾನುಕೂಲ ಉಂಟಾಗಿದೆ. ಕೂಡಲೇ ಪಂಚಾಯಿತಿ ಆಡಳಿತ ಮಂಡಳಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮದ್ಯದಂಗಡಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಅವರು ಎಚ್ಚರಿಸಿದರು.

ಈ ಸಂದರ್ಭ ಮಾತನಾಡಿದ ಪಂಚಾಯಿತಿ ಅಧ್ಯಕ್ಷೆ ಭವ್ಯ, ಮದ್ಯದಂಗಡಿ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು. ಈ ಸಂದರ್ಭ ಜನತಾ ಕಾಲನಿ ನಿವಾಸಿಗಳಾದ ಮಣಿ, ಕಮಲ, ಸಚಿನ್ ಮತ್ತಿತರರು ಇದ್ದರು.