ಸುಂಟಿಕೊಪ್ಪ, ಜೂ. 10: ಸುಂಟಿಕೊಪ್ಪ ಪಟ್ಟಣದಲ್ಲಿದ್ದ 5 ಬ್ರಾಂದಿ ಅಂಗಡಿಗಳು ಮುಚ್ಚಿದ್ದರಿಂದ ದಿನಸಿ ಹಾಗೂ ಇತರ ವರ್ತಕರಿಗೆ ಬಿಸಿ ತಟ್ಟಿದೆ.

ಸಂತೆ ದಿನ ಕೂಡ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಸಂಜೆಯಾಗುತ್ತಿದ್ದಂತೆ ಪಟ್ಟಣದ ಮುಖ್ಯ ರಸ್ತೆ ಉಲುಗುಲಿ ರಸ್ತೆಯಲ್ಲಿ ಸಾರ್ವಜನಿಕರಿಂದ ಗಿಜಿಗುಡುತ್ತಿದ್ದ ರಸ್ತೆಯಲ್ಲಿ ಜನರ ಸುಳಿವೇ ಕಾಣುತ್ತಿಲ್ಲ. ಮದ್ಯದಂಗಡಿ ಇರುವಾಗ ರಾತ್ರಿ 10 ಗಂಟೆವರೆಗೂ ಪಟ್ಟಣದಲ್ಲಿ ಜನದಟ್ಟಣೆ ಇರುತ್ತಿತ್ತು. ದಿನಸಿ, ತರಕಾರಿ ಇತರ ವ್ಯಾಪಾರಸ್ಥರಿಗೆ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಈಗ ಹಗಲು ಹಾಗೂ ಸಂಜೆ ನಂತರವೂ ಪಟ್ಟಣಕ್ಕೆ ಬರುವ ಜನರು ಕಡಿಮೆಯಾಗಿದ್ದಾರೆ. ಮತ್ತೊಂದೆಡೆ ಮದ್ಯಪ್ರಿಯರು ಸುಂಟಿಕೊಪ್ಪಕ್ಕೆ ಬಂದಾಗ ಎಲ್ಲಿ ಮದ್ಯ ಸಿಗುತ್ತದೆ ಎಂದು ಎಲ್ಲೆಂದರಲ್ಲಿ ವಿಚಾರಿಸುವದು ಮಾಮೂಲಿಯಾಗಿದೆ.

ಅಕ್ರಮ ಮದ್ಯ ಮಾರಾಟಗಾರರಿಗೆ ಸುಗ್ಗಿ: ಕೆಲ ಹೊಟೇಲ್, ಬ್ರಾಂದಿ ಅಂಗಡಿ ಪಕ್ಕದಲ್ಲಿ ಕೆಲವರು ಕದ್ದುಮುಚ್ಚಿ ಮದ್ಯ ಮಾರಾಟ ಮಾಡುತ್ತಿದ್ದು, ದುಪ್ಪಟ್ಟು ಹಣಕೊಟ್ಟು ಖರೀದಿಸುವ ಮದ್ಯ ಪ್ರಿಯರನ್ನು ಕಾಣಬಹುದಾಗಿದೆ.

ಮದ್ಯದಂಗಡಿ ಬಾಗಿಲು ಮುಚ್ಚಿರುವದರಿಂದ ಮಳೆಗಾಲದಲ್ಲಿ ಮದ್ಯ ಪ್ರಿಯರಿಗೆ ಚಳಿತಟ್ಟಿದ್ದು ಹಿಡಿಶಾಪ ಹಾಕುತ್ತಿದ್ದಾರೆ.