ಗೋಣಿಕೊಪ್ಪಲು, ಜು. 10: ಕಳೆದ ವರ್ಷದಂತೆಯೇ ಈ ಬಾರಿಯೂ ದುರ್ಬಲ ಮುಂಗಾರು ಎಲ್ಲೆಡೆ ಆತಂಕಕ್ಕೆ ಕಾರಣವಾಗಿದೆ. ಕೊಡಗು ಜಿಲ್ಲೆಯ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಹಲವು ಪ್ರಜ್ಞಾವಂತ ರೈತರು ಇಂಗು ಗುಂಡಿಯಂತೆ ಕೆಲಸ ಮಾಡುವ ಭತ್ತದ ಗದ್ದೆಯ ಪುನಶ್ಚೇತನಕ್ಕೆ ಮತ್ತೆ ಮನಸು ಮಾಡಿದ್ದಾರೆ. ಕಳೆದ ಸಾಲಿನಲ್ಲಿ ಭೀಕರ ಬರದ ಹಿನ್ನೆಲೆ ಹಲವು ರೈತರು ಭತ್ತದ ಉತ್ಪಾದನೆ ಕುಸಿತಗೊಂಡು ಕಂಗಾಲಾಗಿದ್ದರು. ಈ ಬಾರಿ ಮತ್ತೆ ವರುಣ ಮುನಿಸಿ ಕೊಂಡಿದ್ದು ದಕ್ಷಿಣ ಕೊಡಗಿನಾದ್ಯಂತ ಬಿಸಿಲಿನ ವಾತಾವರಣ ಇದೆ. ಆಗೊಮ್ಮೆ ಈಗೊಮ್ಮೆ ಮೋಡ ಕವಿದು ಮಳೆಯಾಗಬಹುದೆನ್ನುವ ನಿರೀಕ್ಷೆ ಇದ್ದರೂ ಚದುರಿದಂತೆ ಮಳೆಯಾಗು ತ್ತಿದ್ದು, ನೆಲಕಚ್ಚಿ ಜಲಉಕ್ಕಿಸುವ ಗತಕಾಲದ ಮಳೆಯ ವೈಭವ ಎಲ್ಲಿಯೂ ಕಂಡು ಬಂದಿಲ್ಲ. ಹೀಗಿದ್ದೂ ರೈತರು ಆಶಾವಾದ ದೊಂದಿಗೆ ಭೂಮಿ ಉಳುಮೆ ಮಾಡಿ, ಭತ್ತದ ಬಿತ್ತನೆಯೊಂದಿಗೆ ಸಸಿ ಮಡಿ ಮಾಡಿ ವರುಣನಿಗಾಗಿ ಕಾಯುತ್ತಿದ್ದಾರೆ.

ನಾಟಿ ಸಂದರ್ಭ ಭತ್ತದ ಗದ್ದೆಯಲ್ಲಿ ನೀರು ನಿಂತಲ್ಲಿ ಮಾತ್ರ ಪೈರುಗಳು ಚೆನ್ನಾಗಿ ಬೆಳೆಯಲು ಸಾಧ್ಯ. ಇಲ್ಲವೇ ಬೆಂಕಿರೋಗ, ಕ್ರಿಮಿಕೀಟಗಳ ಬಾಧೆಗೆ ಪೈರುಗಳು ಸಿಲುಕುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಇದೀಗ ತಾಲೂಕಿ ನಾದ್ಯಂತ ರೈತರು ಉತ್ಸಾಹದಿಂದಲೇ ಬಿತ್ತನೆ ಬೀಜವನ್ನು ಖರೀದಿಸಿ, ಸಸಿ ಮಡಿಯನ್ನು ಸಿದ್ಧ ಮಾಡುತ್ತಿದ್ದಾರೆ. ಸುಮಾರು 14,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಉತ್ಪಾದನೆ ಗುರಿ ಹೊಂದಲಾಗಿದ್ದು, ವೀರಾಜಪೇಟೆ ಕೃಷಿ ಇಲಾಖೆ ಇದೀಗ ಯಾಂತ್ರಿಕ ನಾಟಿ ಪದ್ಧತಿಯ ಸಹಾಯಧನವನ್ನು ರೂ.600 ರಿಂದ ಎಕರೆಗೆ ರೂ.1600ಕ್ಕೆ ಹೆಚ್ಚಳ ಮಾಡಿದೆ. ಗರಿಷ್ಟ 5 ಎಕರೆವರೆಗೆ ರೂ.8000 ಪೆÇ್ರೀತ್ಸಾಹಧನವನ್ನು ಹೆಚ್ಚಳ ಮಾಡಿರುವದರಿಂದ ಶೇ 10 ರಷ್ಟು ಉತ್ಪಾದನೆ ಹೆಚ್ಚಳವಾಗುವ ನಿರೀಕ್ಷೆಯನ್ನು ಕೃಷಿ ಇಲಾಖೆ ಹೊಂದಿದೆ. ಯುಕೋ ಸಂಘಟನೆ, ರೈತ ಸಂಘಗಳು ‘ನಾಡ ಮಣ್ಣೇ ನಾಡ ಕೂಳು’ ಮಾದರಿ ರೈತರಲ್ಲಿ ಭತ್ತ ಬೆಳೆಯಲು ಉತ್ತೇಜನ ನೀಡುತ್ತಿರುವದೂ ಭತ್ತದ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಬಹುದು. ಆದರೆ, ಇದೆಲ್ಲದಕ್ಕೂ ವರುಣ ಕೃಪೆ ಅಗತ್ಯ. ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆಯಾದಲ್ಲಿ ನಾಟಿ ಕಾರ್ಯ ಬಿರುಸುಗೊಳ್ಳುವ ಸಾಧ್ಯತೆ ಇದೆ.

ಜೂನ್ ತಿಂಗಳಲ್ಲಿ ಸುರಿದ ಆಶಾದಾಯಕ ಮಳೆ ಇದೀಗ ಮಾಯವಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಸುಮಾರು ರೂ.30 ಕೋಟಿ ವೆಚ್ಚದಲ್ಲಿ ಮೋಡಬಿತ್ತನೆಗೆ ಮುಂದಾಗಿದ್ದು, ಈ ಒಂದು ಅಸ್ವಾಭಾವಿಕ ಪ್ರಕ್ರಿಯೆಗೆ ಜಿಲ್ಲೆಯ ಹಲವರ ವಿರೋಧವೂ ಇದೆ. ಆದರೆ, ರಾಜ್ಯ ಸರ್ಕಾರದ ದೃಷ್ಟಿ ಮಾತ್ರ ಕೆ.ಆರ್.ಎಸ್.ಮುಂತಾದ ಆಣೆಕಟು ್ಟಗಳನ್ನು ಭರ್ತಿ ಮಾಡಲು ಮೋಡ ಬಿತ್ತನೆಗೆ ಮುಂದಾಗಿರುವದು ಸ್ಪಷ್ಟ. ಏಕೆಂದರೆ ಕಳೆದ ಬಾರಿ ಭೀಕರ ಬರಗಾಲದಿಂದ ಸುಮಾರು 173 ತಾಲೂಕುಗಳ ರೈತರು ನಷ್ಟ ಅನುಭವಿಸಿದ್ದರೂ ಅವರ ಸಂಕಷ್ಟಕ್ಕೆ ಸರ್ಕಾರ ಇನ್ನೂ ಸ್ಪಂದಿಸಿಲ್ಲ. ಈ ನಿಟ್ಟಿನಲ್ಲಿ ರೈತರು ಉತ್ತಮ ಮಳೆಗಾಗಿ ಪ್ರಾರ್ಥಿಸುತ್ತಾ ಆಕಾಶದೆಡೆಗೆ ಮುಖಮಾಡಿದ್ದಾರೆ.

ಜೂನ್ ತಿಂಗಳಿನಲ್ಲಿ ಮಳೆಯಾಗದಿದ್ದಲ್ಲಿ ಜುಲೈ ತಿಂಗಳ ಕೊನೆ ವಾರ ಅಥವಾ ಆಗಸ್ಟ್‍ನಲ್ಲಿ ಅಧಿಕ ಮಳೆಯಾಗುತ್ತದೆ ಅನ್ನುವದು ಹಿರಿಯ ತಲೆಮಾರಿನ ಲೆಕ್ಕಾಚಾರ. ಆದರೆ, ಈ ಲೆಕ್ಕಾಚಾರ ತಪ್ಪಿದ್ದಲ್ಲಿ ಮತ್ತೆ ಜಿಲ್ಲೆಯ ರೈತರು ಭತ್ತದ ಉತ್ಪಾದನೆಯಲ್ಲಿ ನಿರಾಶೆ ಅನುಭವಿಸಬೇಕಾಗುತ್ತದೆ. ಸರ್ಕಾರ ಇಲ್ಲಿನ ಭತ್ತದ ಕೃಷಿಕರಿಗೆ ಕೇರಳ ಮಾದರಿಯಲ್ಲಿ ಬೆಂಬಲ ಬೆಲೆ ನೀಡುವಂತಾಗಬೇಕು ಎಂಬದು ಹಲವರ ವಾದ. ಬೊಕ್ಕಸದಲ್ಲಿ ಹಣವಿಲ್ಲ ಎಂದು ಹೇಳುವ ಸರ್ಕಾರದಿಂದ ಇದು ಅಸಾಧ್ಯ. ಹಾಗೂ ಫಸಲು ಭೀಮಾ ಯೋಜನೆಯ ಬಗ್ಗೆಯೂ ರಾಜ್ಯಾದ್ಯಂತ ಅಪಸ್ವರವಿರುವದರಿಂದಾಗಿ ಭೂಮಿ ಉಳುಮೆ ಮಾಡಿ ಭತ್ತ ಕೃಷಿ ಮಾಡುವ ರೈತರಿಗೆ ಅಂತಿಮವಾಗಿ ಉತ್ಪಾದನೆ ಕುಂಠಿತವಾದಲ್ಲಿ ಯಾರ ಸಾಂತ್ವನವೂ ಸಿಗಲಾರದು. ಅತ್ತ ಸಾಲ ಕೊಟ್ಟ ಸಹಕಾರಿ ಸ್ವಾಮ್ಯದ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳು ವರ್ಷ ಮುಗಿಯುತ್ತಿದ್ದಂತೆಯೇ ಸಾಲ ವಸೂಲಾತಿಗಾಗಿ ರೈತರ ಹಿಂದೆ ಬೀಳುವದರಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳೂ ಅಧಿಕವಾಗುತ್ತಿದೆ.

ಈ ಬಾರಿ ವೀರಾಜಪೇಟೆ ತಾಲೂಕಿನಲ್ಲಿ ಸುಮಾರು 950 ಕ್ವಿಂಟಾಲ್ ಭತ್ತವನ್ನು ರೈತರು ಖರೀದಿಸಿರುವದಾಗಿ ಕೃಷಿ ಇಲಾಖೆ ಮೂಲಗಳು ತಿಳಿಸಿವೆ. 134 ದಿನಗಳಲ್ಲಿ ಕಟಾವಿಗೆ ಬರುವ ಅತಿರಾ ಭತ್ತಕ್ಕೆ ಅಧಿಕ ಬೇಡಿಕೆ ಇದ್ದು, ಇನ್ನೂ 100 ಕ್ವಿಂಟಾಲ್ ಭತ್ತದ ಬಿತ್ತನೆ ತರಿಸಲಾಗುತ್ತಿದೆ. ಅತಿರಾ ಭತ್ತ ಬೆಂಕಿ ರೋಗ ನಿರೋಧಕವಾಗಿದ್ದು ರೈತರಿಗೆ ಇಂದಿನ ಹವಾಮಾನದ ಪರಿಸ್ಥಿತಿಯಲ್ಲಿ ಉತ್ತಮ ಆಯ್ಕೆ ಎನ್ನಲಾಗಿದೆ.

ಯಾಂತ್ರೀಕರಣ ನಾಟಿ ಪದ್ಧತಿ, ಸೀಡ್ಲ್ ಡ್ರಮ್ ಕಾರ್ಯದ ಬಗ್ಗೆ ರೈತರಿಗೆ ಪರಿಚಯಿಸಲು ವೀರಾಜಪೇಟೆ ಕೃಷಿ ಇಲಾಖೆಯು ಅಲ್ಲಲ್ಲಿ ಭತ್ತದ ಗದ್ದೆಯಲ್ಲಿ ಪ್ರಾತ್ಯಕ್ಷಿಕೆಯನ್ನೂ ಆಯೋಜಿಸುವ ನಿರ್ಧಾರ ಕೈಗೊಂಡಿದೆ. ಆಗಸ್ಟ್ ತಿಂಗಳಿನಲ್ಲಿ ನಾಟಿ ಮಾಡುವ ನಿಟ್ಟಿನಲ್ಲಿಯೂ ಹಲವು ರೈತರಿಗೆ ಧೈರ್ಯನೀಡುವ ಕೆಲಸವನ್ನೂ ಇಲಾಖೆ ಮಾಡುತ್ತಿದೆ.

ಕೂಲಿ ಕಾರ್ಮಿಕರ ವೇತನ ಹೆಚ್ಚಳದಿಂದ ಮುಕ್ತಿ ಹೊಂದಲು ಯಾಂತ್ರಿಕ ನಾಟಿ ಪದ್ಧತಿ, ಯಾಂತ್ರಿಕ ಭತ್ತದ ಕಟಾವಿಗೆ ಇಲಾಖೆ ಒತ್ತು ನೀಡುತ್ತಿರುವದು ಗಮನಾರ್ಹ ವಾದರೂ ಪ್ರಕೃತಿದತ್ತವಾಗಿ ಕೊಡಗಿನ ಮೇಲೆ ಸರಾಸರಿ 60 ರಿಂದ 80 ಇಂಚು ಮಳೆಯಾದರೇನೆ ಶೋಭೆ. ತಲಕಾವೇರಿ, ಬಿರುನಾಣಿ, ಬಿ.ಶೆಟ್ಟಿಗೇರಿ, ಮಾಕುಟ್ಟ ಇತ್ಯಾದಿ ಗಡಿಭಾಗದಲ್ಲಿ 240 ಇಂಚಿಗೂ ಅಧಿಕ ಮಳೆ ವಾರ್ಷಿಕವಾಗಿ ಆಗುತ್ತಿತ್ತು. ಇದೀಗ ಇಲ್ಲೆಲ್ಲಾ 100 ಇಂಚು ಮಳೆಯಾಗಬೇಕಾದ ಪ್ರದೇಶದಲ್ಲಿ 50 ರಿಂದ 70 ಇಂಚು ಮಳೆ ದಾಖಲಾಗಿದೆ. ದಿನಕ್ಕೆ ಒಂದು, ಎರಡು ಇಂಚು ಸುರಿಯಬೇಕಿದ್ದ ಮಳೆ ಇದೀಗ ಸೆಂಟ್, ಮಿ.ಮೀಟರ್ ಲೆಕ್ಕದಲ್ಲಿ ಅಲ್ಲಲ್ಲಿ ಸುರಿಯುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಕೊಡಗಿನಲ್ಲಿಯೂ, ಕಾವೇರಿ, ಲಕ್ಷ್ಮಣತೀರ್ಥ ನದಿ ಪಾತ್ರದಲ್ಲಿಯೂ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದ್ದು ಮುಂದಿನ ಸಾಲಿನಲ್ಲಿ ಕುಡಿಯುವ ನೀರಿಗೂ ಭೀಕರ ಕ್ಷಾಮ ತಲೆದೋರ ಬಹುದೆನ್ನುವ ಅಂದಾಜಿದೆ.

ಕೊಡಗಿನ ಎಲ್ಲೆಡೆ ಕಾವೇರಿ, ಲಕ್ಷ್ಮಣ ತೀರ್ಥ, ಬರಪೆÇಳೆ ಉಕ್ಕಿ ಹರಿಯಬೇಕಾದ ದಿನಗಳಲ್ಲಿ ಪ್ರವಾಹದ ಸ್ಥಿತಿಯಿಲ್ಲದೆ ಆತಂಕ ಸೃಷ್ಟಿಯಾಗಿದೆ. ಹೀಗಿದ್ದೂ ಉತ್ತಮ ವಾಡಿಕೆ ಮಳೆಗಾಗಿ ನಮ್ಮ ರೈತರು ಕಾಯುತ್ತಿದ್ದಾರೆ. ನೆತ್ತಿಯ ಮೇಲೆ ಬಿಸಿಲಿನ ಝಳವಂತೂ ಸುಡುತ್ತಿದೆ. ಹವಾಮಾನ ತಜ್ಞರ ಊಹೆ ಸುಳ್ಳಾಗಿ ಎಲ್ಲೆಡೆ ಟೀಕೆಗೆ ಗುರಿಯಾಗಿದೆ.