ಮಡಿಕೇರಿ, ಜು. 9: ಮಂಗಳೂರು ಯೆಯ್ಯಾಡಿ ಶಾಖೆಯ ಆ್ಯಕ್ಸಿಸ್ ಬ್ಯಾಂಕ್‍ನಿಂದ ಬೆಂಗಳೂರು ಕೋರಮಂಗಲ ಶಾಖೆಗೆ ಜಮೆ ಮಾಡಲೆಂದು ರೂ. 7.50 ಕೋಟಿ ಹಣ ಸಾಗಿಸುತ್ತಿದ್ದ ವೇಳೆ, ಮಡಿಕೇರಿಯಲ್ಲಿ ವಾಹನದ ದಿಕ್ಕು ಬದಲಾಯಿಸಿ ಕಸ್ಟೋಡಿಯನ್ ಪರಶುರಾಮ್ ಮೇಲೆ ಹಲ್ಲೆ ನಡೆಸಿ, ಹಣ ದರೋಡೆ ಗೈದಿದ್ದ ಪ್ರಕರಣದ ಮೂವರು ಪ್ರಮುಖ ಆರೋಪಿಗಳು ಇನ್ನು ಕೂಡ ತಲೆಮರೆಸಿಕೊಂಡಿದ್ದಾರೆ.ಈ ಘಟನೆ ಸಂದರ್ಭ ಪ್ರಮುಖ ಆರೋಪಿಗಳಿಗೆ ಸಹಕಾರ ನೀಡಿದ್ದ ಐವರು ಮಾತ್ರ ಮಂಗಳೂರು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದು, ಹಣ ದರೋಡೆ ಸೂತ್ರಧಾರಿ ಟಿ.ಎ. ಭೀಮಯ್ಯ ಹಾಗೂ ಈತನ ತಮ್ಮ ಟಿ.ಎ. ಉತ್ತಪ್ಪ ಮತ್ತು ಸೋದರ ಸಂಬಂಧಿ ಟಿ.ಪಿ. ಬಸಪ್ಪ ಇನ್ನು ಕೂಡ ತಲೆಮರೆಸಿಕೊಂಡಿದ್ದಾರೆ ಎಂದು ಮಂಗಳೂರು ಪೊಲೀಸ್ ಮೂಲಗಳು ಖಚಿತಪಡಿಸಿವೆ.

ಕಳೆದ ಮೇ 11 ರಂದು ಮಧ್ಯಾಹ್ನ ನಗರದಲ್ಲಿ ಎಟಿಎಂ ವಾಹನವನ್ನು ಈಗಾಗಲೇ ಜೈಲು ಪಾಲಾಗಿರುವ ಟಿ.ಎ. ಪೂವಣ್ಣನ ಸಹೋದರ ನಾಗಿರುವ, ಇಡೀ ಹಗರಣದ ಮುಖ್ಯ ಆರೋಪಿ ಟಿ.ಎ. ಭೀಮಯ್ಯ ಸೋಮವಾರಪೇಟೆ ಮಾರ್ಗವಾಗಿ ಈತನ ಹುಟ್ಟೂರು ಕುಂಬಾರಗಡಿಗೆ ಗ್ರಾಮಕ್ಕೆ ಕೊಂಡೊಯ್ದಿದ್ದಾಗಿ ಈಗಾಗಲೇ ಬಂಧಿತ ಆರೋಪಿಗಳು ಖಚಿತಪಡಿಸಿರುವದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಪೊಲೀಸ್ ಕಾರ್ಯಾಚರಣೆ ಸಂದರ್ಭ ಆರೋಪಿಗಳಿಗೆ

(ಮೊದಲ ಪುಟದಿಂದ) ಸಹಕರಿಸಿದ್ದ ಕೆ.ಎಸ್. ಕಾಶಿಕಾರ್ಯಪ್ಪ ಹಾಗೂ ಮನುಕುಮಾರ್ ತಲಾ ರೂ. 2 ಲಕ್ಷ ನಗದು ಸಹಿತ ಸೆರೆಯಾಗುವದರೊಂದಿಗೆ ತಂಬುಗುತ್ತಿ ಎಂಬಲ್ಲಿನ ಕಾಡಿನಿಂದ ರೂ. 6,32,46000 ನಗದು ವಶಪಡಿಸಿಕೊಳ್ಳಲಾಗಿದೆ.

ಈ ವೇಳೆ ಕಾಶಿ ಕಾರ್ಯಪ್ಪ ಹಾಗೂ ಮನುಕುಮಾರ್ ನೀಡಿದ ಸುಳಿವಿನ ಮೇರೆಗೆ ಆರೋಪಿಗಳು ಕಟ್ಟಿಹಾಕಿ ಹಲ್ಲೆ ನಡೆಸಿದ್ದ ಕಸ್ಟೋಡಿಯನ್ ಪರಶುರಾಮನನ್ನು ಬಂಧಮುಕ್ತಗೊಳಿಸಿ, ಈತ ನೀಡಿದ ದೂರಿನ ಮೇರೆಗೆ ದರೋಡೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನು ಟಿ.ಎ. ಪೂವಣ್ಣ, ಕರಿಬಸಪ್ಪನನ್ನು ವಿಚಾರಣೆಗೆ ಒಳಪಡಿಸಲಾಗಿ, ಈ ವೇಳೆ ದೊರೆತ ಸುಳಿವಿನ ಮೇರೆಗೆ ಸೋಮವಾರಪೇಟೆ ಗಣಗೂರು ಬಳಿಯ ಉಂಜಿಗನಹಳ್ಳಿ ನಿವಾಸಿ ಹೆಚ್.ಎ. ಗಿರೀಶ್ ಎಂಬಾತನನ್ನು ಬಂಧಿಸಿ ಆತನ ವಶವಿದ್ದ ರೂ. 20 ಲಕ್ಷದ ಐವತ್ತಾರು ಸಾವಿರ ಮೊತ್ತವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ರೂ. 92.98 ಲಕ್ಷ ಬಾಕಿ

ಈ ರೀತಿ ಕಾರ್ಯಾಚರಣೆ ವೇಳೆ ಇದುವರೆಗೆ ಒಟ್ಟು ರೂ. 6,57,02000 ಮೊತ್ತವನ್ನು ವಶಪಡಿಸಿಕೊಂಡು, ಕಾಶಿ ಸಹೋದರ ರವಿ ಆಲಿಯಾಸ್ ರವೀಂದ್ರನನ್ನು ಕೂಡ ಬಂಧಿಸಲಾಗಿದೆ. ಬಂಧಿತ ಐವರು ಕೂಡ ಈಗ ತಲೆಮರೆಸಿ ಕೊಂಡಿರುವ ಮೂವರು ದರೋಡೆಕೋರರಿಗೆ ಸಹಕಾರ ನೀಡಿದವರೆಂದು ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ಬಂಧಿತ ಆರೋಪಿಗಳ ಸಹಿತ ಪರಶುರಾಮನ ಹೇಳಿಕೆ ಮೇರೆಗೆ ಅಪರಾಧ ಪ್ರಕರಣಣ ಕಾಯ್ದೆ 406, 420, 341, 342, 363 ಹಾಗೂ 395 ಆರ್/ಡಬ್ಲ್ಯು - 34 ಐಪಿಸಿ ಕಾನೂನಿನ್ವಯ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಮೂವರು ಕೂಡ ಎಷ್ಟೇ ಸಮಯ ತಲೆಮರೆಸಿಕೊಂಡರೂ ದರೋಡೆ ಪ್ರಕರಣದಿಂದ ತಪ್ಪಿಸಿಕೊಳ್ಳುವದು ಸಾಧ್ಯವಿಲ್ಲವೆಂದು ತನಿಖಾಧಿಕಾರಿ ಎಸಿಪಿ ಶೃತಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಹಗರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಈ ಮೂವರ ಬಂಧನಕ್ಕೆ ಪೊಲೀಸ್ ತಂಡ ಪ್ರಯತ್ನ ಮುಂದುವರಿಸಿರುವದಾಗಿಯೂ ಸುಳಿವು ನೀಡಿದ್ದಾರೆ.

ಹೊಗೆಯಾಡುತ್ತಿರುವ ಅಸಮಾಧಾನ : ದುಷ್ಕøತ್ಯದ ಪ್ರಾರಂಭದಲ್ಲಿ ಆರೋಪಿಗಳಿಗೆ ಸಹಕಾರ ನೀಡಿದ ತಪ್ಪಿಗಾಗಿ ಬಂಧನಕ್ಕೊಳಗಾಗಿರುವ ಕಾಶಿ ಕಾರ್ಯಪ್ಪ, ರವೀಂದ್ರ, ಮನುಕುಮಾರ್ ಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳ ನಡುವೆ ಅಸಮಾಧಾನ ಹೊಗೆಯಾಡುವಂತಾಗಿದ್ದು, ಹಗರಣ ಸಂಬಂಧ ಗ್ರಾಮಗಳಲ್ಲಿ ಪೊಲೀಸರು ನಿರಂತರ ಸುಳಿದಾಡುತ್ತಿರುವ ಹಿನ್ನೆಲೆ ಸೂರ್ಲಬ್ಬಿ, ಕುಂಬಾರಗಡಿಗೆ, ಮುಟ್ಲುವಿನಲ್ಲಿರುವ ಆರೋಪಿಗಳ ನೆಂಟರಿಷ್ಟರಿಗೆ ಕಿರಿ ಕಿರಿ ಶುರುವಾಗಿದೆ.

ಇನ್ನು ಜೈಲು ಪಾಲಾಗಿರುವ ಹಾಗೂ ತಲೆಮರೆಸಿಕೊಂಡಿರುವ ಮಂದಿಯಿಂದ ಹಣ ಪಡೆದಿರುವ ಕೆಲವರು ಪೊಲೀಸರ ಬಲೆಗೆ ಸಿಲುಕುವ ಆತಂಕದಿಂದ ಊರು ಬಿಟ್ಟಿರುವದಾಗಿ ಪೊಲೀಸ್ ತನಿಖಾ ತಂಡ ಸುಳಿವು ನೀಡಿದೆ. ರೂ. 92.98 ಲಕ್ಷ ನಗದು ಸಹಿತ ಮೂವರು ಸೆರೆಸಿಕ್ಕುವ ತನಕ ಬಂಧಿತ ಐವರಿಗೆ ಜೈಲುವಾಸ ಖಾತರಿ.

- ಶ್ರೀಸುತ