ಗೋಣಿಕೊಪ್ಪಲು, ಜು. 9: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಗುರುಪೂರ್ಣಿಮೆಯನ್ನು ವನಮಹೋತ್ಸವ ದಿನಾಚರಣೆಯಾಗಿ ಆಚರಿಸಲು ಉದ್ದೇಶೀಸಿರುವ ಲಕ್ಷ್ಮಣತೀರ್ಥ ನದಿ ಪುನಶ್ಚೇತನ ಯೋಜನೆಗೆ ಹೊಳೆ ದಂಡೆಯಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು.

ನಿಟ್ಟೂರು ಗ್ರಾಮದ ಲಕ್ಷ್ಮಣತೀರ್ಥ ಹೊಳೆ ದಂಡೆಯಲ್ಲಿ ಅರಣ್ಯ ಕಾಲೇಜು ಅಂತಿಮ ತರಗತಿಯ ವಿದ್ಯಾರ್ಥಿಗಳು ಬಿದಿರು, ಹೊಂಗೆ, ಸುರ ಹೊನ್ನೆ, ಸಾಲುದೂಪ, ಕಾಡುಮಾವು, ಹೊಳೆಮತ್ತಿ, ಹೊಳೆಹಿಪ್ಪೆ ಇಂತಹ ಗಿಡಗಳನ್ನು ನೆಟ್ಟರು.

ಸಾಂಕೇತಿಕ ಚಾಲನೆಯನ್ನು ಗ್ರಾಮದ ಹಿರಿಯರಾದ ಅಳಮೇಂಗಡ ಪೊನ್ನಪ್ಪ, ಅರಣ್ಯ ಮಹಾ ವಿದ್ಯಾಲಯ ಡೀನ್ ಚೆಪ್ಪುಡೀರ ಕುಶಾಲಪ್ಪ, ಆರ್ಟ್ ಆಫ್ ಲಿವಿಂಗ್ ಶಿಕ್ಷಕರ ಸಮಿತಿ ಸಂಘಟಕ ಅಳಮೇಂಗಡ ಡಾನ್ ರಾಜಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಬಾನಂಡ ಪ್ರತ್ಯು, ನಿಟ್ಟೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಪವನ್ ಚಿಟ್ಯಪ್ಪ, ಆರ್ಟ್ ಆಫ್ ಲಿವಿಂಗ್ ಅಭಿವೃದ್ಧಿ ಸಮಿತಿ ಜಿಲ್ಲಾ ಸದಸ್ಯ ಕಾಕಮಾಡ ಚೆಂಗಪ್ಪ, ಅರಣ್ಯ ಮಹಾ ವಿದ್ಯಾಲಯ ಸಿಲ್ವಿಕಲ್ಚರ್ ವಿಭಾಗ ಮುಖ್ಯಸ್ತ ಡಾ. ರಾಮಕೃಷ್ಣ ಹೆಗಡೆ, ಬಾಳೆಲೆ ಕೊಡವ ಸಮಾಜ ಅಧ್ಯಕ್ಷ ಬೋಸ್ ಇವರುಗಳು ನೀಡಿದರು.

ಯೋಜನೆಗೆ ಚಾಲನೆ ಕೊಡುವ ಮುನ್ನ ಬಾಳೆಲೆ ಕೊಡವ ಸಮಾಜ ಸಭಾಂಗಣದಲ್ಲಿ ಸ್ಥಳಿಯರು ಹಾಗೂ ತಜ್ಞರೊಂದಿಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಆರ್ಟ್ ಆಫ್ ಲಿವಿಂಗ್ ಶಿಕ್ಷಕರ ಸಮಿತಿ ಸಂಘಟಕ ಅಳಮೇಂಗಡ ಡಾನ್ ರಾಜಪ್ಪ, ಶ್ರೀ ರವಿಂಶಂಕರ್ ಗುರೂಜಿ ಅವರ ಚಿಂತನೆಯಂತೆ ಯೋಜನೆ ನಡೆಯುತ್ತಿದೆ. 5 ವರ್ಷಗಳಲ್ಲಿ 3 ಲಕ್ಷ ಗಿಡ ನೆಟ್ಟು ಸಂರಕ್ಷಿಸುವ ಯೋಜನೆ ಇದಾಗಿದೆ. ಮಣ್ಣು ಸವೆಯದಂತೆ ಗಿಡ ನೆಟ್ಟು ಸಂರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸುಮಾರು 4 ರಿಂದ 5 ಲಕ್ಷ ಹಣ ವ್ಯಯಿಸುತ್ತಿದೆ. ಸ್ಥಳೀಯರಿಂದ ಗಿಡಗಳ ಸಂರಕ್ಷಣೆಗೆ ಒತ್ತು ನೀಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದರು.

ಅರಣ್ಯ ಮಹಾ ವಿದ್ಯಾಲಯ ಡೀನ್ ಚೆಪ್ಪುಡೀರ ಕುಶಾಲಪ್ಪ, ಅರಣ್ಯ ಮಹಾ ವಿದ್ಯಾಲಯದ ಡಾ. ದೇವಗಿರಿ, ಆರ್ಟ್ ಆಫ್ ಲಿವಿಂಗ್ ಅಭಿವೃದ್ಧಿ ಸಮಿತಿ ಜಿಲ್ಲಾ ಸದಸ್ಯ ಕಾಕಮಾಡ ಚೆಂಗಪ್ಪ, ಬಾಳೆಲೆ ಕೊಡವ ಸಮಾಜ ಅಧ್ಯಕ್ಷ ಬೋಸ್ ಮಾತನಾಡಿದರು.

ಈ ಸಂದರ್ಭ ಬಾಳೆಲೆ ಗ್ರಾ ಪಂ ಉಪಾಧ್ಯಕ್ಷ ಕೊಕ್ಕೇಂಗಡ ರಂಜನ್, ಬಾಳೆಲೆ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಪಾಲ್ಗೊಂಡಿದ್ದರು.