ಮಡಿಕೇರಿ, ಜು. 10 : ರಾಜ್ಯ ಸರಕಾರದಿಂದ ಕಾಲೇಜು ಶಿಕ್ಷಣ ಮಂಡಳಿ ಆಯುಕ್ತರು ಹೊರಡಿಸಿದ್ದ ಆದೇಶ ಅನ್ವಯ ಇಂದಿನಿಂದ ಬೆಳಿಗ್ಗೆ 8 ಗಂಟೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸಬೇಕೆಂಬ ಕರೆಗೆ ಕೊಡಗು ಜಿಲ್ಲೆಯ ವಿದ್ಯಾರ್ಥಿ ಸಮೂಹ ಓಗೊಡದೆ ನಿರಾಕರಿಸಿದ ಕುರಿತು ತಿಳಿದು ಬಂದಿದೆ.ಜಿಲ್ಲೆಯಲ್ಲಿ ಆರು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಕಾಲೇಜು ಶಿಕ್ಷಣ ಆಯುಕ್ತರ ಆದೇಶದಂತೆ ಇಂದು ಜಿಲ್ಲೆಯ ಕಾಲೇಜುಗಳಲ್ಲಿ ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜು ಹೊರತುಪಡಿಸಿ, ಪ್ರಾಂಶುಪಾಲರ ಸಹಿತ ಬೋಧಕ ವರ್ಗ ಹಾಗೂ ಕಚೇರಿ ಸಿಬ್ಬಂದಿ ಬೆಳಿಗ್ಗೆ 8 ಗಂಟೆಗೆ ಆಗಮಿಸಿದ್ದರು.

ಜಿಲ್ಲೆಯ ಕಾಲೇಜುಗಳ ಪ್ರಾಂಶುಪಾಲರ ಸಹಿತ ಉಪನ್ಯಾಸಕ ವರ್ಗ ಆಗಮಿಸಿತ್ತಾದರೂ, ವಿದ್ಯಾರ್ಥಿಗಳು ಎಂದಿನಂತೆ ಕಾಲೇಜಿನ ಈ ಹಿಂದಿನ ಸಮಯಕ್ಕೆ ಹಾಜರಾಗುತ್ತಿದ್ದ ದೃಶ್ಯ ಎದುರಾಯಿತು. ಅಲ್ಲದೆ, ಬೆಳಿಗ್ಗೆ 8 ಗಂಟೆಯಿಂದ ತರಗತಿಗಳಿಗೆ ಹಾಜರಾಗಲು ಸಾಧ್ಯವಿಲ್ಲವೆಂಬದಾಗಿ ವಿದ್ಯಾರ್ಥಿಗಳೇ ಉಪನ್ಯಾಸಕ ವರ್ಗಕ್ಕೆ ಪ್ರಕ್ರಿಯೆ ನೀಡಿದ್ದಾರೆ.

ನಗರದ ಜೂನಿಯರ್ ಕಾಲೇಜು ಆವರಣದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ವೈ. ಚಿತ್ರ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಬೆಳಿಗ್ಗೆ ಎಂಟು ಗಂಟೆಗೆ ಸರಿಯಾಗಿ ಕಾಲೇಜಿಗೆ ಬಂದು ಕೊಠಡಿಯಲ್ಲಿ ಆಸೀನರಾಗಿದ್ದರೂ ಕೂಡ, ವಿದ್ಯಾರ್ಥಿಗಳು ಕಾಲೇಜಿನತ್ತ ಆ ಬಳಿಕವೂ ಸುಳಿಯಲೇ ಇಲ್ಲ.

ಬದಲಾಗಿ ಎಂದಿನಂತೆ ಒಂಬತ್ತು ಗಂಟೆ ಬಳಿಕ ಒಬ್ಬೊಬ್ಬರಾಗಿ ಶಿಕ್ಷಣ ಸಂಸ್ಥೆಯೆಡೆಗೆ ಆಗಮಿಸುತ್ತಿದ್ದದ್ದು ಗೋಚರಿಸಿತು.

(ಮೊದಲ ಪುಟದಿಂದ) ಈ ನಡುವೆ ಗ್ರಾಮೀಣ ವಿದ್ಯಾರ್ಥಿಗಳು ನಿತ್ಯ ಎಂಟು ಗಂಟೆಗೆ ಕಾಲೇಜಿಗೆ ಬರಲು ಯಾವದೇ ಸೌಲಭ್ಯ ಇಲ್ಲವೆಂದು, ತಮಗೆ ಬಸ್ ವ್ಯವಸ್ಥೆ ಲಭ್ಯವಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.

ಕುಶಾನಗರ : ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೂಡ ಪ್ರಾಂಶುಪಾಲ ಪಿ.ಎಂ. ಸುಬ್ರಮಣಿ ಹಾಗೂ ಬೋಧಕ ಸಿಬ್ಬಂದಿ 8 ಗಂಟೆಗೆ ಕಾಲೇಜಿಗೆ ಆಗಮಿಸಿದರಾದರೂ, ಸುಮಾರು ಒಂದು ಸಾವಿರದಷ್ಟು ವಿದ್ಯಾರ್ಥಿ ಸಮೂಹದಲ್ಲಿ ಪಟ್ಟಣದಿಂದ ಬೆರಳೆಣಿಕೆಯಷ್ಟು ಮಂದಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ತರಗತಿಗಳನ್ನು ಆರಂಭಿಸಲು ಸಮಸ್ಯೆಯಾಗಿದೆ. ಈ ಕಾಲೇಜಿಗೆ ಬರುವ ಹಳ್ಳಿಗಾಡಿನ ವಿದ್ಯಾರ್ಥಿಗಳು ತಮಗೆ 8 ಗಂಟೆಗೆ ಕಾಲೇಜು ತಲಪುವದು ಸಾಧ್ಯವಿಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ನಿರಾಕರಿಸಿದ್ದಾರೆ.

ವೀರಾಜಪೇಟೆ : ಅತ್ತ ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಮೂರು ದಿನ ಹಿಂದೆ ಸರಕಾರದ ಸುತ್ತೋಲೆ ಬಗ್ಗೆ ಪ್ರಾಂಶುಪಾಲರು ಗಮನ ಸೆಳೆದ ಬೆನ್ನಲ್ಲೇ ಲಿಖಿತವಾಗಿ ತಮಗೆ 8 ಗಂಟೆಗೆ ತರಗತಿಗಳಿಗೆ ಬರಲು ಸಾಧ್ಯವಾಗುವದಿಲ್ಲವೆಂದು ಹೇಳಿದ್ದಾರೆ ಎಂದು ಗೊತ್ತಾಗಿದೆ. ಹೀಗಾಗಿ ಪ್ರಾಂಶುಪಾಲ ಟಿ.ಕೆ. ಬೋಪಯ್ಯ ಸರಕಾರದ ಆದೇಶವನ್ನು ಗೌರವಿಸುವಂತೆ ಕೋರಿದ್ದರೂ, ಇಂದು ಸ್ಪಂದÀನ ಲಭಿಸಿಲ್ಲ.

ಸೋಮವಾರಪೇಟೆ : ಸೋಮವಾರಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನವರು ಗ್ರಾಮೀಣ ಭಾಗದವರಾಗಿದ್ದು, ಸರಕಾರದ ಆದೇಶದಂತೆ ನಿತ್ಯ ಬೆಳಿಗ್ಗೆ 8 ಗಂಟೆಯಿಂದ ಕಾಲೇಜಿನಲ್ಲಿ ತರಗತಿಗಳಿಗೆ ಬರಲು ಅಸಾಧ್ಯವೆಂದು ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ.

ನಾಪೋಕ್ಲು : ಇನ್ನು ನಾಪೋಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಸ್ಯೆ ಕೇಳುವವರೇ ಇಲ್ಲ. ಇಲ್ಲಿ ನಿತ್ಯವೂ 8 ಗಂಟೆಗೆ ವಿದ್ಯಾರ್ಥಿಗಳು ಬರುವದಿರಲಿ, ಬರುವ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡಲು ಉಪನ್ಯಾಸಕರೇ ಇಲ್ಲವಂತೆ. ಕಾಲೇಜಿನ ಪ್ರಬಾರ ಪ್ರಾಂಶುಪಾಲೆ ಡಾ. ಎನ್.ಪಿ. ಕಾವೇರಿ ಅವರೇ ಇಲ್ಲಿ ಕಸ ಗುಡಿಸುವದು ಸೇರಿದಂತೆ ಕಚೇರಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕಾಡು ಕಡಿಸಿದರು : ಇಂದು ನಾಪೋಕ್ಲು ಕಾಲೇಜಿಗೆ ಪಾಠ ಮಾಡಲು ಉಪನ್ಯಾಸಕರಿಲ್ಲದೆ ಪ್ರಾಂಶುಪಾಲರು ಮಾತ್ರ ಇದ್ದ ಕಾರಣ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಗಳಿಂದ ಕಾಡು ಕಡಿಸುವ ಮೂಲಕ ಆವರಣ ಸ್ವಚ್ಛಗೊಳಿಸಿದ್ದಾಗಿ ತಿಳಿದುಬಂದಿದೆ.

ಬಾಗಿಲು ತೆರೆಯಲ್ಲೇ ಇಲ್ಲ ! : ಇನ್ನೊಂದೆಡೆ ಜಿಲ್ಲಾ ಕೇಂದ್ರದಲ್ಲಿರುವ ಹೆಣ್ಣು ಮಕ್ಕಳ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಾತ್ರ ನಿಗದಿತ 8 ಗಂಟೆ ಕಳೆದರೂ ಬಾಗಿಲೇ ತೆರೆಯಲಿಲ್ಲ. ಬದಲಾಗಿ ಎಂದಿನಂತೆ ಈ ಕಾಲೇಜು ಮಾಮೂಲಿ ಸಮಯಕ್ಕೆ ಶುರುವಾಯಿತು. ಕಾಲೇಜು ಪ್ರಾಂಶುಪಾಲೆ ಜೆನಿಫರ್ ಲೊಲಿಟ ಅವರು ಪ್ರತಿಕ್ರಿಯಿಸಿ ಕೊಡಗಿನ ಮಳೆ, ಗುಡ್ಡಗಾಡುವಿಗೆ ಈ ವೇಳೆಯಲ್ಲಿ ಮಕ್ಕಳು ಬರಲು ಸಾಧ್ಯವಿಲ್ಲವೆಂದು ತಿಳಿಸಿದ್ದಾಗಿ ಸಮಜಾಯಿಸಿಕೆ ನೀಡಿದರು.

ಅಲ್ಲದೆ ಕರ್ನಾಟಕ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಒಕ್ಕೂಟದಿಂದ ಎಲ್ಲ 411 ಕಾಲೇಜು ಮುಖ್ಯಸ್ಥರು ಸೇರಿದಂತೆ ಸರಕಾರದ ಆದೇಶ ಹಿಂಪಡೆಯಲು ಬೇಡಿಕೆ ಸಲ್ಲಿಸಲಾಗಿದ್ದು, ಉನ್ನತ ಶಿಕ್ಷಣ ಸಚಿವರು ಲಂಡನ್ ಪ್ರವಾಸದಿಂದ ಭಾರತಕ್ಕೆ ಹಿಂತಿರುಗಿದ ಸಂದರ್ಭ ಸಮಸ್ಯೆ ಬಗೆಹರಿಸುವ ಆಶ್ವಾಸನೆ ಲಭಿಸಿರುವದಾಗಿ ಸುಳಿವು ನೀಡಿದರು.