ಮಡಿಕೇರಿ, ಜು. 10: ರೈತರು ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಮಾಡಿರುವ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರೂ. 500 ಹಾಗೂ 1000 ನೋಟುಗಳನ್ನು ಅಮಾನ್ಯ ಮಾಡಿದ್ದರಿಂದ ರೈತರು ತೊಂದರೆಗೀಡಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 50 ದಿನಗಳಲ್ಲಿ ಕಪ್ಪು ಹಣವನ್ನು ಹೊರತಂದು ಜನತೆಯ ಖಾತೆಗೆ ಹಂಚುವದಾಗಿ ಹೇಳಿಕೆ ನೀಡಿ 8 ತಿಂಗಳು ಕಳೆದರೂ ಭರವಸೆ ಈಡೇರಿಸುವ ಯಾವದೇ ಲಕ್ಷಣ ಕಾಣುತ್ತಿಲ್ಲ.

ಜನರನ್ನು ಸಂಕಷ್ಟಕ್ಕೆ ತಳ್ಳಲಾಗಿದೆ. ಪ್ರಸ್ತುತ ಬರಗಾಲದ ಪರಿಸ್ಥಿತಿಯಿದ್ದು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ರೈತರ ಸಹಕಾರ ಬ್ಯಾಂಕಿನಿಂದ ಪಡೆದ ರೂ. 50 ಸಾವಿರ ಮೊತ್ತದಷ್ಟು ಸಾಲವನ್ನು ಮನ್ನಾ ಮಾಡಿದೆ. ಆದರೆ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿರುವ ಸಾಲವನ್ನು ಮನ್ನಾ ಮಾಡದೆ ರೈತ ವಿರೋಧಿ ಧೋರಣೆ ತಳೆದಿದೆ.

ಈ ನಿಟ್ಟಿನಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡಲು ಒತ್ತಡ ಹೇರುವಂತೆ ಮನವಿ ಸಲ್ಲಿಸಲಾಯಿತು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಹನೀಫ್, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.