ಸೋಮವಾರಪೇಟೆ, ಜು. 9: ಸಾಲ ಬಾಧೆ ತಾಳಲಾರದೇ ರೈತರೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ತಾಕೇರಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ತಾಕೇರಿ ಅರಳುಗೌಡನ ಮನೆ ನಿವಾಸಿ ಎ.ಎಂ. ಮಂಜುನಾಥ್ (53) ಎಂಬವರೇ ಆತ್ಮಹತ್ಯೆಗೆ ಶರಣಾದವರಾಗಿದ್ದು, ಲಕ್ಷಾಂತರ ರೂಪಾಯಿ ಕೃಷಿ ಸೇರಿದಂತೆ ಕೈ ಸಾಲ ಮಾಡಿದ್ದರು ಎನ್ನಲಾಗಿದೆ.

ಮಂಜುನಾಥ್ ಅವರಿಗೆ ತಾಕೇರಿ ಗ್ರಾಮದಲ್ಲಿ ಗದ್ದೆ ಸೇರಿದಂತೆ ಒಟ್ಟು 12 ಏಕರೆ ಕಾಫಿ ತೋಟವಿದ್ದು, ಮಡಿಕೇರಿಯ ಎಸ್‍ಬಿಎಂ ಶಾಖೆಯಲ್ಲಿ 12 ಲಕ್ಷ, ಐಗೂರಿನ ವಿಎಸ್‍ಎಸ್‍ಎನ್ ಬ್ಯಾಂಕ್‍ನಲ್ಲಿ 5 ಲಕ್ಷ, ಕೆನರಾ ಬ್ಯಾಂಕ್, ಪಿಎಲ್‍ಡಿ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್‍ನಲ್ಲೂ ಸಾಲ ಮಾಡಿದ್ದರು. ಇದರೊಂದಿಗೆ 10 ಲಕ್ಷಕ್ಕೂ ಅಧಿಕ ಕೈ ಸಾಲ ಮಾಡಿಕೊಂಡಿದ್ದು, ಈ ಮಧ್ಯೆ 2.50 ಲಕ್ಷ ಸಾಲಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನೂ ಎದುರಿಸುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸಾಲದ ಬಗ್ಗೆ ಆಗಾಗ್ಗೆ ಮನೆಯವರೊಂದಿಗೆ ಮಾತನಾಡುತ್ತಿದ್ದ ಕುಶಾಲಪ್ಪ ಅವರು ಇಂದು ಮುಂಜಾನೆ ಮನೆ ಪಕ್ಕದ ದನದ ಕೊಟ್ಟಿಗೆಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ ಲಲಿತಾ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಪುತ್ರ ಲಾಸಿತ್ ನೀಡಿದ ದೂರಿನ ಮೇರೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.