ಮಡಿಕೇರಿ, ಜು. 9: ಇಂದಿನಿಂದ (ತಾ. 10) ರಾಜ್ಯದೆಲ್ಲೆಡೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭಗೊಳ್ಳಲಿದೆ. ರಾಜ್ಯ ಸರಕಾರ ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಬೆಳಿಗ್ಗೆ 8 ಗಂಟೆಯಿಂದ ಅಪರಾಹ್ನ 3.15ರ ತನಕ ಸರಕಾರಿ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸುವಂತೆ ಸೂಚಿಸಿದೆ.ಆ ಮೇರೆಗೆ ಕರ್ನಾಟಕ ರಾಜ್ಯ ಪದವಿ ಶಿಕ್ಷಣ ಮಂಡಳಿಯು ಎಲ್ಲಾ ಸರಕಾರಿ ಸ್ವಾಮ್ಯದಲ್ಲಿರುವ ಕಾಲೇಜುಗಳಿಗೆ ಸುತ್ತೋಲೆ ರವಾನಿಸಿದ್ದು, ಸರಕಾರದ ಆದೇಶದಂತೆ, ತಾ. 10 ರಿಂದ (ಇಂದು) ರಾಜ್ಯದ ಎಲ್ಲಾ ಪ್ರಥಮ ದರ್ಜೆ ಸರಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶೈಕ್ಷಣಿಕ ಗುಣಮಟ್ಟ ಕಂಡುಕೊಳ್ಳುವ ದಿಸೆಯಲ್ಲಿ ಹಾಗೂ ಶಿಕ್ಷಣ ಗುಣಮಟ್ಟ ಸಲುವಾಗಿ, ತರಗತಿಗಳ ಸಮಯವನ್ನು ಬೆಳಿಗ್ಗೆ 7.45/ 8.00 ಗಂಟೆಗೆ ಆರಂಭಿಸಬೇಕೆಂದು ಸೂಚಿಸಲಾಗಿದೆ.

ಅಲ್ಲದೆ ಅಪರಾಹ್ನ 3 ರಿಂದ 3.15ರ ತನಕ ತರಗತಿಗಳನ್ನು ನಡೆಸಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಬೋಧಿಸುವದು ಕಡ್ಡಾಯವೆಂದು ಆದೇಶಿಸಿದೆ. ಆ ಮೇರೆಗೆ ಸೋಮವಾರ (ತಾ. 10) ಬೆಳಿಗ್ಗೆ 8 ಗಂಟೆಗೆ ಸರಕಾರಿ ಪದವಿ ಕಾಲೇಜುಗಳು ಕಾರ್ಯಾರಂಭ ಮಾಡಲಿವೆ. ಇತ್ತ ಎಲ್ಲಾ ಬೋಧಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಗಮನ ಹರಿಸಿ ಸಮಯ ಪಾಲನೆಯೊಂದಿಗೆ ಕಾಲೇಜು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಆಯಾ ಕಾಲೇಜುಗಳಿಗೆ ಪ್ರಾಂಶುಪಾಲರು ಸೂಚಿಸಿದ್ದಾರೆ.