ಸೋಮವಾರಪೇಟೆ, ಜು. 9: ಭಾರತದ ಮೇಲೆ ಯುದ್ಧದ ಪರಿಸ್ಥಿತಿಯನ್ನು ತಂದೊಡ್ಡಲು ಯತ್ನಿಸುತ್ತಿರುವ ನೆರೆಯ ಚೀನಾ ದೇಶದ ವಸ್ತುಗಳು ಇಲ್ಲಿನ ಪ್ರತಿಯೊಂದು ಮನೆಯಲ್ಲೂ ಬಳಕೆಯಾಗುತ್ತಲೇ ಇದೆ. ನಮ್ಮ ದೇಶದಲ್ಲಿ ವ್ಯಾಪಾರ ನಡೆಸಿ ನಮ್ಮ ದೇಶದ ಮೇಲೆಯೇ ಯುದ್ಧ ಮಾಡಲು ಹವಣಿಸುತ್ತಿರುವ ಚೀನಾ ನಿರ್ಮಿತ ವಸ್ತುಗಳನ್ನು ಖರೀದಿಸುವ ಮುನ್ನ ಭಾರತೀಯರೆಲ್ಲರೂ ಒಂದು ಕ್ಷಣ ಆಲೋಚಿಸಬೇಕಿದೆ ಎಂದು ಆರ್‍ಎಸ್‍ಎಸ್ ಮಂಗಳೂರು ವಿಭಾಗ ಕಾರ್ಯಕಾರಿಣಿ ಸದಸ್ಯ ಗಜಾನನ ಪೈ ಕಿವಿಮಾತು ಹೇಳಿದರು.

ಸೋಮವಾರಪೇಟೆ ನಗರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಶ್ರೀಗುರುಪೂಜಾ ಉತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತದ ಪ್ರತಿಯೊಂದು ಮನೆಯಲ್ಲೂ ಚೀನಾ ನಿರ್ಮಿತ ವಸ್ತುಗಳು ಇವೆ. ಚೀನಾ ನಿರ್ಮಿತ ವಸ್ತುಗಳಿಗೆ ಭಾರತ ಬೃಹತ್ ಮಾರುಕಟ್ಟೆಯನ್ನು ಒದಗಿಸಿದ್ದು, ನಮ್ಮ ಹಣವನ್ನು ಪಡೆದು ನಮ್ಮ ದೇಶದ ಮೇಲೆಯೇ ಯುದ್ಧ ಮಾಡುವ ಮನಸ್ಥಿತಿಯನ್ನು ಚೀನಾ ತೋರುತ್ತಿದೆ. ಈ ಬಗ್ಗೆ ರಾಷ್ಟ್ರಭಕ್ತ ಭಾರತೀಯ ರೆಲ್ಲರೂ ಅವಲೋಕಿಸ ಬೇಕಾದ ಕಾಲ ಸನ್ನಿಹಿತವಾಗಿದೆ ಎಂದರು.

ಭಾರತವನ್ನು ವಿಶ್ವದಲ್ಲಿಯೇ ಸದೃಢ ರಾಷ್ಟ್ರವಾಗಿಸಲು ಆರ್‍ಎಸ್‍ಎಸ್ ಪಣತೊಟ್ಟಿದೆ. ದೇಶದ ಪರಮ ವೈಭವ ಸ್ಥಿತಿಯೇ ಸಂಘದ ಧ್ಯೇಯವಾಗಿದೆ ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶನಿವಾರಸಂತೆ ಶ್ರೀ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯ ಉಪನ್ಯಾಸಕ ಜಯಕುಮಾರ್ ವಹಿಸಿ ಮಾತನಾಡಿ, ಗುರುವಿಗೆ ಉನ್ನತ ಸ್ಥಾನವನ್ನು ಭಾರತೀಯ ಸಂಸ್ಕøತಿ ನೀಡಿದೆ. ಆಧ್ಯಾತ್ಮಿಕ ಶ್ರೀಮಂತಿಕೆಯಿಂದ ಭಾರತ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ನಗರ ಸೇರಿದಂತೆ ಸುತ್ತಮುತ್ತಲಿನ ಸಂಘದ ಸ್ವಯಂ ಸೇವಕರು, ಮಾತೆಯರು ಭಾಗವಹಿಸಿದ್ದರು. ಆರ್‍ಎಸ್‍ಎಸ್ ತಾಲೂಕು ಕಾರ್ಯವಾಹ ಪದ್ಮನಾಭ್, ಪ್ರಮುಖರಾದ ಸೂರ್ಯಕುಮಾರ್, ರಾಘವೇಂದ್ರ, ದಾಮೋದರ್, ಶಶಿಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.