ಮಡಿಕೇರಿ, ಜು. 9: ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭಗೊಂಡು ಒಂದು ತಿಂಗಳು ಕಳೆದು ಹೋಗಿದ್ದರೂ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇನ್ನು ಪ್ರಮುಖ ವಿಷಯಗಳ ಪಠ್ಯಪುಸ್ತಕಗಳೇ ಲಭಿಸಿಲ್ಲ. ಪ್ರೌಢಶಾಲೆಯ 8ನೇ ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ದೈಹಿಕ ಶಿಕ್ಷಣ ಪಠ್ಯಗಳು ಕೈ ಸೇರಿಲ್ಲ.

ಇದರೊಂದಿಗೆ ಮುಖ್ಯವಾಗಿ 10ನೇ ತರಗತಿ ಮಕ್ಕಳಿಗೆ ಗಣಿತ ಪಠ್ಯ ಪುಸ್ತಕ ಲಭಿಸದಿರುವದು ಮಕ್ಕಳಲ್ಲಿ ನಿರಾಶೆಯೊಂದಿಗೆ, ಶಿಕ್ಷಕರನ್ನು ಕಂಗೆಡಿಸಿದೆ. ಕಾರಣ ಸರಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿ ಹಾಗೂ ಫಲಿತಾಂಶ ಕುರಿತು ಪರೀಕ್ಷಾ ವೇಳೆಯಲ್ಲಿ ಕಿಡಿಕಾರುವ ಅಧಿಕಾರಿಗಳು ಪ್ರಾರಂಭಿಕ ಹಂತದಲ್ಲಿ ಯಾವದೇ ಕಾಳಜಿ ತೋರುತ್ತಿಲ್ಲ. ಈಗಾಗಲೇ ರಾಜ್ಯ ಸರಕಾರ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮುದ್ರಿಸಿರುವ ಕೆಲವು ಪಠ್ಯಪುಸ್ತಕಗಳಲ್ಲಿ ದೋಷ ಕಂಡು ಬಂದಿದ್ದು, ಗೌಪ್ಯವಾಗಿ ಅಂತಹ ಪಠ್ಯಪುಸ್ತಕಗಳನ್ನು ತಡೆಹಿಡಿದು ಮರು ಮುದ್ರಣದಲ್ಲಿ ತೊಡಗಿರುವ ದೋಷಾರೋಪವಿದೆ.

ಇನ್ನೊಂದೆಡೆ ಗಣಿತದಂತಹ ಪಠ್ಯದಲ್ಲೇ ಪರೀಕ್ಷೆ ಸಂದರ್ಭ ಹೆಚ್ಚಿನ ವಿದ್ಯಾರ್ಥಿಗಳು ಕಠಿಣವೆಂದು ತಿಳಿದು ಹಿನ್ನಡೆಯನ್ನು ಅನುಭವಿಸುತ್ತಿರುವಾಗ, ಅದೇ ವಿಷಯದ ಪುಸ್ತಕಗಳು ವಿದ್ಯಾರ್ಥಿ ಮತ್ತು ಅಧ್ಯಾಪಕರಿಗೆ ಸಕಾಲದಲ್ಲಿ ಕೈ ಸೇರದಿರುವಾಗ ಪರಿಣಾಮಕಾರಿ ಕಲಿಕೆಗೆ ಒತ್ತು ನೀಡುವದು ಹೇಗೆಂದು ಮಕ್ಕಳ ಪೋಷಕರ ಆಕ್ರೋಶವಾಗಿದೆ. ಹೀಗಾಗಿ ಗ್ರಾಮೀಣ ಶಾಲೆಗಳಿಂದ ಸಂಬಂಧಿಸಿದ ಶಿಕ್ಷಕರು ಕಳೆದ ಒಂದು ತಿಂಗಳಿನಿಂದ ಜಿಲ್ಲಾ ಹಾಗೂ ತಾಲೂಕಿನ ಪಠ್ಯಪುಸ್ತಕಗಳ ವಿತರಣಾ ಕೇಂದ್ರಕ್ಕೆ ಅಲೆಯುತ್ತಿದ್ದಾರೆ. ಈ ಶಿಕ್ಷಕರುಗಳಿಗೆ ಅಲ್ಲಿನ ಸಿಬ್ಬಂದಿ ಇಂದು, ನಾಳೆ ಎಂದು ಸಬೂಬು ಹೇಳುತ್ತಾ ದಿನಗಳನ್ನು ಮುಂದೂಡುತ್ತಾ ತಿಂಗಳು ಕಳೆದು ಹೋಗಿದೆ.

ಕಳೆದ ಬೇಸಿಗೆಯಲ್ಲಿ ಮಡಿಕೇರಿಯ ಪಠ್ಯಪುಸ್ತಕ ಗೋದಾಮುವಿನಿಂದ ಭಾರೀ ಸಂಖ್ಯೆಯ ಪುಸ್ತಕಗಳು ಕಳ್ಳತನವಾಗಿ, ಗೋದಾಮಿನಲ್ಲಿ ಗುಜರಿ ವ್ಯಾಪಾರಿಗಳು ಪಠ್ಯಪುಸ್ತಕಗಳನ್ನು ಕದ್ದೊಯ್ಯುವ ವೇಳೆ ಸಾರ್ವಜನಿಕರು ಹಿಡಿದು ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದರು.

ಈ ವೇಳೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ, ಏನೂ ನಡೆದೇ ಇಲ್ಲವೆಂಬಂತೆ ನಿರ್ಲಕ್ಷ್ಯ ತಳೆದಿದ್ದಾಗಿ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತಗೊಂಡಿದೆ. ಪ್ರಸಕ್ತ ದಿನಕ್ಕೊಂದು ರೀತಿ ಸಬೂಬು ಹೇಳಿ ನುಣುಚಿ ಕೊಳ್ಳುತ್ತಿರುವ ಅಧಿಕಾರಿಗಳಿಂದಾಗಿ, ಶಿಕ್ಷಕರು ಮಾತ್ರ ವಿದ್ಯಾರ್ಥಿ

(ಮೊದಲ ಪುಟದಿಂದ) ಸಮೂಹ ಮತ್ತು ಪೋಷಕರ ಅಸಮಾಧಾನಕ್ಕೆ ಗುರಿಯಾಗುತ್ತಿದ್ದಾರೆ.

ಈಗಲಾದರೂ ಸರಕಾರಿ ಶಾಲೆಗಳ ಶೈಕ್ಷಣಿಕ ಸಾಧನೆಗೆ ಒತ್ತು ನೀಡಬೇಕೆನ್ನುವ ಅಧಿಕಾರಿಗಳು, ಜಿಲ್ಲಾಡಳಿತ, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಕು ಆಗದಂತೆ, ಪಠ್ಯಕ್ರಮಗಳನ್ನು ಹೊಂದಿಸಿ ವಿದ್ಯಾರ್ಥಿ ಸಮೂಹದೊಂದಿಗೆ ಶಿಕ್ಷಕರು ನೆಮ್ಮದಿಯಿಂದ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಬೇಕಿದೆ.

ಮಾತ್ರವಲ್ಲದೆ, ವರ್ಷವಿಡೀ ಶೈಕ್ಷಣಿಕ ಯೋಜನೆಯತ್ತ ಪೂರ್ವ ತಯಾರಿ ನಡೆಸುತ್ತಾ, ಶಾಲೆಗಳು ಪ್ರಾರಂಭಗೊಳ್ಳುವ ವೇಳೆ ಮಕ್ಕಳ ಬೇಕು ಬೇಡಿಕೆಗೆ ಸ್ಪಂದಿಸದೆ ನಿರ್ಲಕ್ಷ್ಯ ತಳಿಯುವವರ ವಿರುದ್ಧ ಉನ್ನತ ಹಂತದಲ್ಲಿ ಕಾನೂನು ಕ್ರಮ ಕೈಗೊಂಡು ಭವಿಷ್ಯದಲ್ಲಿ ಇಂತಹ ಲೋಪಗಳು ಎದುರಾಗದಂತೆ ಕಾಳಜಿವಹಿಸಬೇಕಿದೆ.

-ಶ್ರೀಸುತ