ಚೆಟ್ಟಳ್ಳಿ, ಜು. 9 : ಕಂಪೆನಿ ವ್ಯಾಪಾರಸ್ಥರೆಂದು ಮನೆಮನೆಗಳಿಗೆ ತೆರಳಿ ಮಾತಿನ ಮೋಡಿಯಿಂದ ಹಲವರಿಗೆ ನಕಲಿ ವಸ್ತುವನ್ನು ನೀಡಿ ಮೋಸಮಾಡುತ್ತಿರುವ ಬಗ್ಗೆ ನಿತ್ಯವೂ ಕೇಳುತಿದ್ದೇವೆ. ಅದರಂತೆಯೇ ಚೆಟ್ಟಳ್ಳಿಯಲ್ಲೂ ಇಂತ ನಕಲಿ ವ್ಯಾಪಾರಸ್ಥ ತಮ್ಮ ಕೈಚಳಕವನ್ನು ತೋರಿ ಹಲವು ಗ್ರಾಹಕರಿಗೆ ನಕಲಿ ಗ್ಯಾಸ್ ರೆಗ್ಯುಲೇಟರನ್ನು ನೀಡಿ ಮೋಸ ಮಾಡಿದ ಘಟನೆ ನಡೆದಿದೆ..
ಚೆಟ್ಟಳ್ಳಿಯಲ್ಲಿ ಹೈದರಾಬಾದಿನ ಹಾಗು ಬೆಂಗಳೂರಿನ ಐಎಂ ಎಂಟರ್ ಪ್ರೈಸಸ್ ಯೂನಿವರ್‍ಸಲ್ ಗ್ಯಾಸ್ ಸೇಫ್ಟಿ ಎಂಬ ಹೆಸರಿನ ಕಂಪೆನಿಯವನೆಂದುಕೊಂಡು 1800 ರೂಪಾಯಿಗೆ ನಕಲಿ ಗ್ಯಾಸ್ ರೆಗ್ಯುಲೇಟರನ್ನು ಹಲವರಿಗೆ ತಾ 3.5.2017ರಂದು ಮಾರಾಟ ಮಾಡಲಾಗಿ ಇದರ ಜೊತೆ ಖರೀಸಿದವರಿಗೆಲ್ಲ ಕಂಪನಿಯ ಕಡೆಯಿಂದ 3 ಗಿಫ್ಟ್ ನಂತರದಲ್ಲಿ ಬರುವದಾಗಿ ನಂಬಿಸಲಾಗಿದೆ. ಇವರು ನೀಡಿರುವ ಬಿಲ್ಲಿನಲ್ಲಿ ಇಂಡಿಯನ್, ಹೆಚ್‍ಪಿ ಹಾಗೂ ಭಾರತ್ ಗ್ಯಾಸಿನ ಚಿಹ್ನೆಯನ್ನು ಹಾಕಲಾಗಿದೆ. ಇದನ್ನು ನಂಬಿದ ಹಲವರು ಖರೀದಿಸಿ ಅದರ ಬಗ್ಗೆಗಿನ ಮಾಹಿತಿಗಾಗಿ ಬಿಲ್ಲಿನಲ್ಲಿರುವ ಹೆಲ್ಪ್ ಲೈನ್ ನಂಬರ್ ಹಾಗೂ ಕಸ್ಟಮರ್ ಕೇರ್ ಸಂಖ್ಯೆಗೆ ಕರೆಮಾಡಿದರೂ ಸ್ಪಿಚ್ ಆಫ್ ಎಂದೇ ಬರುತ್ತಿದೆಯೆಂದು ಗ್ರಾಹಕರು ದೂರಿದ್ದಾರೆ.
ಚೆಟ್ಟಳ್ಳಿ ಭಗವತಿ ದೇವಾಲಯದ ಅರ್ಚಕರಾದ ನಾಗೇಶಯ್ಯ ಎಂಬವರು ಮಾರಾಟಗಾರನ ಮಾತಿನ ಮೋಡಿಗೆ ಮರುಳಾಗಿ ರೆಗ್ಯೂಲೆಟರನ್ನು ಖರೀದಿಸಿದ್ದಾರೆ. ರೂ.1800 ಜೊತೆಗೆ ಉಚಿತ ಗಿಫ್ಟನ್ನು ಮನೆಗೆ ತಲುಪಿಸಲು ರೂ.100 ನ್ನು ಕೂಡ ಹೆಚ್ಚಿಗೆ ಪಡೆದಿದ್ದಾರೆ. ಈ ವರೆಗೆ ಯಾವದೇ ಗಿಫ್ಟ್ ಬಂದಿಲ್ಲ ಜೊತೆಗೆ ಕೆಲವೇ ದಿನಗಳಲ್ಲಿ ಗ್ಯಾಸ್ ರೆಗ್ಯೂಲೇಟರ್ ರಿಪೇರಿಗೊಂಡಿದ್ದರಿಂದ ಕಂಪನಿಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ತಾವು ಖರೀದಿಸಿದ್ದು ನಕಲಿ ಎಂದು ತಿಳಿಯಿತೆಂದು ಗ್ರಾಹಕರು ಹೇಳುತ್ತಾರೆ.
ಇನ್ನು ಮುಂದೆ ಈ ತರ ನಕಲಿ ಮಾರಾಟಗಾರರಿಂದ ವಸ್ತುವನ್ನು ಖರೀದಿಸಿ ಮೋಸ ಹೋಗದೆ ಎಚ್ಚರದಿಂದಿರಬೇಕೆಂದು ಅರ್ಚಕ ನಾಗೇಶಯ್ಯ ಹೇಳುತ್ತಾರೆ.
-ಕರುಣ್ ಕಾಳಯ್ಯ, ಲೂಹಿಸ್