ಮಡಿಕೇರಿ, ಜು. 10: ರಾಜ್ಯದಲ್ಲಿ ಕೋಮುದ್ವೇಷ ಮತೀಯ ಹತ್ಯೆಗಳಿಗೆ ಪ್ರೇರೇಪಣೆ ನೀಡುತ್ತಿರುವ ಪಿಎಫ್‍ಐ, ಎಸ್‍ಡಿಪಿಐ, ಕೆಎಫ್‍ಡಿಗಳಂತಹ ಸಂಘಟನೆಗಳ ಪ್ರಮುಖರನ್ನು ರಾಷ್ಟ್ರೀಯ ತನಿಖಾ ದಳದ ಮೂಲಕ ಬಂಧಿಸಿ, ತನಿಖೆಗೊಳ ಪಡಿಸಬೇಕೆಂದು ಆಗ್ರಹಿಸಿ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ದಕ್ಷಿಣ ಕನ್ನಡ, ಕೊಡಗು, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಕೋಮುಗಲಭೆ, ಮತೀಯ ಹತ್ಯೆಗಳು ನಡೆಯುತ್ತಿವೆ. ಪ್ರಕರಣದಲ್ಲಿ ಕೇರಳ ಮೂಲ ಸಂಘಟನೆಗಳಾದ ಪಿಎಫ್‍ಐ, ಎಸ್‍ಡಿಪಿಐ, ಕೆಎಫ್‍ಡಿ ಕಾರ್ಯಕರ್ತರೇ ಆರೋಪಿ ಗಳಾಗಿದ್ದು, ಈ ಸಂಘಟನೆಗಳು ಅಮಾಯಕ ಮುಸ್ಲಿಂ ಯುವಕರಲ್ಲಿ ಮತೀಯ ದ್ವೇಷÀ ಬಿತ್ತುವ ಮೂಲಕ ಮತಾಂಧರನ್ನಾಗಿಸಿ ಹಿಂದೂ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಿಸಲಾಗುತ್ತಿದೆ.

ಆದರೆ ಆರೋಪಿಗಳ ವಿರುದ್ಧ ಯಾವದೇ ಕ್ರಮ ಜರುಗಿಸಲಾಗುತ್ತಿಲ್ಲ. ಕಾಂಗ್ರೆಸ್ ನೇತೃತ್ವದ ರಾಜ್ಯಸರಕಾರ ಮತಬ್ಯಾಂಕ್‍ಗಾಗಿ ಯಾವದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಈ ನಿಟ್ಟಿನಲ್ಲಿ ಅಮಾಯಕರ ಹತ್ಯೆ ತಡೆಗಟ್ಟಲು ಸಂಘಟನೆಗಳ ಪ್ರಮುಖರನ್ನು ಬಂಧಿಸಿ ತನಿಖೆಗೊಳಪಡಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಇದಕ್ಕೂ ಮುನ್ನ ಜ. ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಮಾನವ ಸರಪಳಿ ರಚಿಸಿ ಸಂಘಟನೆಗಳ ವಿರುದ್ಧ, ರಾಜ್ಯ ಸರಕಾರದ ವಿರುದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ, ಸಚಿವ ರಮಾನಾಥ್ ರೈ, ಯು.ಟಿ. ಖಾದರ್ ವಿರುದ್ಧ ಘೋಟಣೆಗಳನ್ನು ಕೂಗಿದರು. ಹಿಂದೂ ಜಾಗರಣಾ ವೇದಿಕೆ, ವಿಶ್ವಹಿಂದೂ ಪರಿಷತ್, ಭಜರಂಗದಳ, ಬಿ.ಎಂ.ಎಸ್.ನ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.