ಕೂಡಿಗೆ, ಜು. 10 : ಜಿಲ್ಲೆಯಲ್ಲಿ ಕಳೆದ ಸಾಲಿಗಿಂತಲೂ ಈ ಸಾಲಿನಲ್ಲಿ ಮಳೆ ಕ್ಷೀಣಗೊಂಡಿದ್ದು, ಹಾರಂಗಿ ಜಲಾಶಯ ಅಚ್ಚುಕಟ್ಟ್ಟು ವ್ಯಾಪ್ತಿಯಲ್ಲಿಯೂ ಮಳೆ ಕಡಿಮೆಯಾಗಿರುವದರಿಂದ ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ತೀರಾ ಕಡಿಮೆಯಾಗಿದೆ.

ಕಳೆದ ಸಾಲಿನ ಈ ಅವಧಿಯಲ್ಲಿ ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ಹಾರಂಗಿ ಜಲಾಶಯವು ಭರ್ತಿಯಾಗಿದ್ದ ಹಿನ್ನೆಲೆಯಲ್ಲಿ ಜುಲೈ ಮೊದಲನೇ ವಾರದಲ್ಲಿ ಅಣೆಕಟ್ಟೆಯ ಸಾಮಥ್ರ್ಯಗನುಗುಣವಾಗಿ ನೀರನ್ನು ಸಂಗ್ರಹಿಸಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿತ್ತು. ಆದರೆ, ಈ ಸಾಲಿನಲ್ಲಿ ಹಾರಂಗಿ ಅಣೆಕಟ್ಟೆಯ ಸಾಮಥ್ರ್ಯದ ಅರ್ಧದಷ್ಟು ನೀರು ತುಂಬಿಲ್ಲ. ಇದೀಗ ಅಣೆಕಟ್ಟೆಯಲ್ಲಿ ಮೂರು ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ.

ಜಲಾಶಯದ ಇಂದಿನ ಒಳಹರಿವು 384 ಕ್ಯೂಸೆಕ್ ಇದ್ದು, ಕಳೆದ ಸಾಲಿನಲ್ಲಿ ಇದೇ ಸಂದರ್ಭ 3000 ಕ್ಯೂಸೆಕ್ ನೀರು ಒಳಹರಿವಿತ್ತು. ಅಣೆಕಟ್ಟೆ ಭರ್ತಿಯಾಗಲು ಇನ್ನೂ 20 ಅಡಿಯಷ್ಟು ನೀರು ಬೇಕಾಗಿದೆ. ಕಳೆದ ಸಾಲಿನಲ್ಲಿ ಇದೇ ಸಂದರ್ಭ ಅಣೆಕಟ್ಟೆಯ ಮಟ್ಟ 2854.68 ಇತ್ತು. ಇಂದು 2832.92 ಇದೆ.

ರೈತರು ಅತಂತ್ರ : ವರ್ಷಂಪ್ರತಿಯಂತೆ ಜುಲೈ ತಿಂಗಳಲ್ಲಿ ಹಾರಂಗಿ ಜಲಾಶಯದ ನೀರಿನ ಮಟ್ಟವು ಮುಕ್ಕಾಲು ಭಾಗದಷ್ಟು ತುಂಬುತ್ತಿದ್ದ ಕಾರಣ ಜಿಲ್ಲೆಯ ಗಡಿಭಾಗದ ಸಾವಿರಾರು ಎಕರೆ ಪ್ರದೇಶದ ರೈತರು ಜಲಾಶಯದ ನೀರನ್ನು ಅವಲಂಬಿಸಿ ಸಸಿ ಮಡಿಗಳ ಬಿತ್ತನೆ ಕಾರ್ಯದಲ್ಲಿ ತೊಡಗುತ್ತಿದ್ದರು. ಆದರೆ ಈ ಸಾಲಿನಲ್ಲಿ ಇದುವರೆಗೂ ಮಳೆ ಸರಿಯಾಗಿ ಬಾರದೆ ಜಲಾಶಯವು ಭರ್ತಿಯಾಗಿಲ್ಲ. ಇದರ ಜೊತೆಗೆ ರೈತರು ಸಹಕಾರ ಸಂಘಗಳಲ್ಲಿ ವಿವಿಧ ತಳಿಯ ಭತ್ತ ಬಿತ್ತನೆ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡುವದೋ ಬೇಡವೋ ಎನ್ನುವ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.

ಜುಲೈ ಮೊದಲ ವಾರದಲ್ಲಿ ಭತ್ತದ ಸಸಿ ಮಡಿಗಳನ್ನು ಬಿತ್ತನೆ ಮಾಡಿ ಸಸಿಗಳನ್ನು ಆಗಸ್ಟ್ ಮೊದಲ ವಾರದಲ್ಲಿ ನಾಟಿ ಪೂರೈಸಿದ್ದಲ್ಲಿ ಈ ವ್ಯಾಪ್ತಿಯ ಹವಮಾನಕ್ಕನುಗುಣವಾಗಿ ಉತ್ತಮ ಮಟ್ಟದ ಭತ್ತದ ಇಳುವರಿಯನ್ನು ರೈತರು ಪಡೆಯುತ್ತಾರೆ. ಆದರೆ ಇದೀಗ ನೀರಿನ ಅಭಾವವಿರುವದರಿಂದ ಇನ್ನೂ ಬಿತ್ತನೆ ಕಾರ್ಯದಲ್ಲಿ ತೊಡಗಲು ಸಾಧ್ಯವಿಲ್ಲದಂತಾಗಿದೆ. ಸರ್ಕಾರದ ಸುತ್ತೋಲೆ: ಹಾರಂಗಿ ಜಲಾಶಯದಲ್ಲಿ ಈಗಿರುವ ನೀರನ್ನು ಯಾವದೇ ರೀತಿಯಲ್ಲಿ ನಾಲೆಗಳಿಗೆ ಹರಿಸಬಾರದು. ಸಂಗ್ರಹವಿರುವ ನೀರನ್ನು ಕುಡಿಯುವ ನೀರಿಗಾಗಿ ಬಳಸಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ಹಾರಂಗಿ ಜಲಾಶಯದ ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ ತಿಳಿಸಿದರು.

ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2832.92 ಅಡಿಗಳು, ಕಳೆದ ವರ್ಷ ಇದೇ ದಿನ 2854.68 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 0.00 ಮಿ.ಮೀ. ಕಳೆದ ವರ್ಷ ಇದೇ ದಿನ 17.2 ಮಿ.ಮೀ., ಇಂದಿನ ನೀರಿನ ಒಳ ಹರಿವು 530 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 4693 ಕ್ಯೂಸೆಕ್. - ಕೆ.ಕೆ.ನಾಗರಾಜಶೆಟ್ಟಿ.