ಭಾಗಮಂಡಲ, ಜು. 10 : ಪಾಣತ್ತೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಗೆ ಟೆಂಡರ್ ಪ್ರಕ್ರಿಯೆ ತಾ. 23 ಕ್ಕೆ ಮುಕ್ತಾಯಗೊಳ್ಳಲಿದ್ದು, ಮುಂದೆ ಉತ್ತಮ ರಸ್ತೆ ಆಗಲಿದೆ ಅಲ್ಲದೆ ಹುಣಸೂರಿನಿಂದ ಮಡಿಕೇರಿಗೆ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ. ಕಸ್ತೂರಿ ರಂಗನ್ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ಷ್ಮಪರಿಸರ ತಾಣವೆಂದು ಘೋಷಣೆಯಾಗಿರುವ ಪ್ರದೇಶವು ಸೂಕ್ಷ್ಮ ತಾಣವಾಗಿಯೇ ಇರಲಿದೆ. ಇದರಿಂದ ಕೃಷಿಕರಿಗೆ ಯಾವುದೇ ತೊಂದರೆ ಇಲ್ಲ. ಕಸ್ತೂರಿ ರಂಗನ್ ವರದಿ ಇನ್ನೂ ಅನುಷ್ಠಾನಗೊಂಡಿಲ್ಲ. ಹತ್ತು ತಿಂಗಳ ಬಳಿಕ ಈ ವರದಿಯನ್ನು ಇತ್ಯರ್ಥ ಮಾಡಲಾಗುವದು ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ಭಾಗಮಂಡಲದಲ್ಲಿ ಭಾರತೀಯ ಜನತಾಪಾರ್ಟಿಯ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೂತನ ರಸ್ತೆ ಅಭಿವೃದ್ದಿಗೆ ರಾಜ್ಯ ಸರ್ಕಾರ ಯಾವುದೇ ಹಣ ನೀಡಿಲ್ಲ. ರಸ್ತೆ ಅಭಿವೃದ್ದಿಗೆ ನೀಡಿರುವ ಹಣವು ರಸ್ತೆ ತೇಪೆಗೆ ಕೂಡ ಸಾಕಾಗುವದಿಲ್ಲ. ಹಿಂದಿನ ನಾಲ್ಕುವರ್ಷಗಳಲ್ಲಿ ಏಕೆ ಅಭಿವೃದ್ದಿಯೇ ಆಗಿಲ್ಲ ಎಂಬುದರ ಬಗ್ಗೆ ನಿಮಗೆ

(ಮೊದಲ ಪುಟದಿಂದ) ಅರಿವಿದೆಯೇ? ಮುಂದಿನ ಬಾರಿ ಚುನಾವಣೆಯಲ್ಲಿ ಕೆ.ಜಿ. ಬೋಪಯ್ಯ ಸ್ಪರ್ಧಿಸಲಿದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭ ಇವರು ಸಹ ಪ್ರಮುಖ ಸ್ಥಾನ ಅಲಂಕರಿಸಲಿದ್ದಾರೆ ಎಂದರು.

ಕಸ್ತೂರಿ ರಂಗನ್ ವರದಿ ಬಗ್ಗೆ ಒಂದು ಉತ್ತಮ ಸಂದೇಶ ನೀಡುತ್ತೇವೆ. ನಮ್ಮ ಪಕ್ಷದ ಸಿದ್ದಾಂತ ಒಪ್ಪದ ಕೆಲವು ವ್ಯಕ್ತಿಗಳು ಕಮ್ಯುನಿಸ್ಟ್ ಪಕ್ಷದಲ್ಲಿದ್ದು ನಾಡ ದ್ರೋಹದ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಖರೀದಿ ಮಾಡಿದ ಅಕ್ಕಿಗೆ ರಾಜ್ಯ ಸರ್ಕಾರ ಅನ್ನಭಾಗ್ಯ ಎಂಬ ಹೆಸರಿಟ್ಟ ಇಲ್ಲಿ ಕೇಂದ್ರ ಸರ್ಕಾರದ ಪಾಲು ಇದ್ದರೂ ಸಿದ್ದರಾಮಯ್ಯ ತಮ್ಮ ಫೋಟೊ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ ಎಂದು ಟೀಕಿಸಿದ ಸಂಸದರು, ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಮೋದಿ ಹಣಕ್ಕೆ ಸಿದ್ದರಾಮಯ್ಯನ ಜಾತ್ರೆ ನಡೆಯುತ್ತಿದೆ ಎಂದರು. ಕೊಡಗಿನ ಕಾಂಗ್ರೆಸಿಗರು ಏನೇ ಬೊಬ್ಬೆ ಹಾಕಿದರೂ ಕೂಡ ಕೊಡಗು ಮುಂದೆ ಕಾಂಗ್ರೆಸ್ ಮುಕ್ತವಾಗಿ ಉಳಿಯುತ್ತದೆ ಎಂದು ಸಂಸದರು ಸಮರ್ಥಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆ ಏನು ಎಂಬುದರ ಬಗ್ಗೆ ಮತದಾರರ ಮನೆಮನೆಗೆ ಕರಪತ್ರದೊಂದಿಗೆ ತೆರಳುವ ಕಾರ್ಯಕ್ಕೆ ಚಾಲನೆ ದೊರೆತಿದ್ದು ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಲಿದ್ದಾರೆ ಎಂದರು. ಒಂದು ಕಾನೂನು ಒಂದು ತೆರಿಗೆಯಿಂದಾಗಿ ಮುಖ್ಯವಾಗಿ ಬೇಡಿಕೆ ಇರುವ ವಸ್ತುಗಳಿಗೆ ಇಂದು ಬೆಲೆ ಕಡಿಮೆಯಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 14ನೇ ಹಣಕಾಸು ಯೋಜನೆಯಲ್ಲಿ ಜಿಲ್ಲಾಪಂಚಾಯಿತಿ ಮತ್ತು ಗ್ರಾಮಪಂಚಾಯಿತಿಗಳಿಗೆ ಕೋಟ್ಯಾಂತರ ರೂ. ಹಣ ಒದಗಿಸಿದರೆ ಇಂದಿನ ರಾಜ್ಯಸರ್ಕಾರ ಏನನ್ನು ನೀಡಿದೆ ಎಂದು ಪ್ರಶ್ನಿಸಿದರಲ್ಲದೆ, ಕೇಂದ್ರ ಸರ್ಕಾರ ಇನ್ನು ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡಿಲ್ಲ. ಅರಣ್ಯ ರಕ್ಷಣೆ ಮಾಡುವವರೆ ಇಂದು ಭಕ್ಷಕರಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಜನಸಾಮಾನ್ಯರ ಮೇಲೆ ಸವಾರಿ ಮಾಡುತ್ತಿದ್ದು ಇದಕ್ಕೆ ಈಗಿನ ಕಾಂಗ್ರೆಸ್ ಸರ್ಕಾರದ ನಾಯಕರೇ ಕಾರಣ ಎಂದು ಆರೊಪಿಸಿದರು.

ಬಿಜೆಪಿ ಚುನಾಯಿತ ಪ್ರತಿನಿಧಿಗಳ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ನಾವು ಎಡವಿದ್ದೆಲ್ಲಿ ಎಂಬುದನ್ನು ಮನವರಿಕೆ ಮಾಡಿಕೊಡಲಿ ಎಂದು ಸವಾಲು ಹಾಕಿದರು. ಅಂದು ಕಾಂಗ್ರೆಸ್ ಸರ್ಕಾರ ಹೇಳಿದ ಭ್ರಷ್ಟ ರಹಿತ ಸ್ವಚ್ಛ ಭಾರತ ಇಂದು ಏನಾಗಿದೆ? ಇಂದು ಕಾಂಗ್ರೆಸ್ ನಾಯಕರೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಕಾಂಗ್ರೆಸಿನ ಹಲವು ನಾಯಕರ ಮೇಲೆ ತೆರಿಗೆದಾಳಿ ಮಾಡಲಾಗಿದೆ ಎಂದು ಬೊಟ್ಟು ಮಾಡಿದರು.

ಕೇಂದ್ರಸರ್ಕಾರವು ಕೊಡಗಿಗೆ ರೈಲು ಸಂಪರ್ಕಕ್ಕೆ ಒಪ್ಪಿಗೆ ನೀಡಿ ಒಂದೂವರೆ ವರ್ಷವಾದರೂ ಮುಖ್ಯ ಮಂತ್ರಿ ತಮ್ಮ ನೆರೆಯ ಜಿಲ್ಲೆ ಕೊಡಗಿಗೆ ರೈಲು ಸಂಪರ್ಕ ನೀಡುವಲ್ಲಿ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಬಿಜೆಪಿ ಪ್ರಮುಖ ನಾರಾಯಣಾಚಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸ್ಥಾನೀಯ ಸಮಿತಿ ಅಧ್ಯಕ್ಷ ಸೂರ್ತಲೆ ಕಾಶಿ ವಹಿಸಿದ್ದರು. ಈ ಸಂದರ್ಭ ಕಾಂಗ್ರೆಸ್ ಪಕ್ಷ ತೊರೆದು ನಮಿತಾ ಕಾಂತಿಲ, ಪುರುಷೋತ್ತಮ, ಹಾಗೂ ಜೆಡಿಎಸ್ ತೊರೆದು ರಂಜಿತ್ ಮಿಟ್ಟು ತಮ್ಮ ಬೆಂಬಲಿಗರೊಡನೆ ಬಿಜೆಪಿ ಸೇರ್ಪಡೆಗೊಂಡರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾಮೋಹನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾಪ್ರಭಾಕರ್, ಕುಮಾರ್, ಯುವಮೋರ್ಚಾ ಅಧ್ಯಕ್ಷ ಕಾಳನ ರವಿ, ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್‍ಕುಮಾರ್, ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಗ್ರಾಮಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ಸದಸ್ಯರಾದ ರಾಜುರೈ, ಪುರುಷೋತ್ತಮ, ಭಾಸ್ಕರ, ಹಾಗೂ ಕಾರ್ಯದರ್ಶಿ ವೇಣು ಉಪಸ್ಥಿತರಿದ್ದರು.

-ಕೆ.ಡಿ. ಸುನಿಲ್