ಮಡಿಕೇರಿ, ಜು. 9: ಹಿರಿಯರು ಹಾಗೂ ಕಿರಿಯರ ಸಲಹೆ - ಸಹಕಾರದೊಂದಿಗೆ ಪಕ್ಷ ಸಂಘಟನೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಾದ್ಯಂತ ಬಲಿಷ್ಠಗೊಳಿಸಿ ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸಲು ಕಾರ್ಯಕರ್ತರಲ್ಲಿ ಸ್ಥೈರ್ಯ ತುಂಬುವ ಕೆಲಸಕ್ಕೆ ಮೊದಲು ಆದ್ಯತೆ ನೀಡುವದಾಗಿ ಜಿಲ್ಲಾ ಕಾಂಗ್ರೆಸ್‍ನ ನೂತನ ಅಧ್ಯಕ್ಷ ಮುಕ್ಕಾಟಿರ ಶಿವುಮಾದಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್‍ನ ನೂತನ ಜಿಲ್ಲಾಧ್ಯಕ್ಷರಾದ ಬಳಿಕ ‘ಶಕ್ತಿ’ ಸಂದರ್ಶನದಲ್ಲಿ ಮಾತ ನಾಡಿದ ಶಿವುಮಾದಪ್ಪ ಅವರು ಕಾಂಗ್ರೆಸ್ ಪಕ್ಷ ಜಾತ್ಯತೀತ ನೆಲೆಗಟ್ಟಿನಲ್ಲಿ ಕಾರ್ಯಾಚರಿಸುತ್ತಿದ್ದು, ಬಡವರ ಪರವಾಗಿರುವ ಪಕ್ಷವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲಾ ವರ್ಗದ ಜನತೆಯ ಅಭಿವೃದ್ಧಿಗೆ ಸ್ಪಂದಿಸುತ್ತಿದ್ದು, ಬಡವರು ಸೇರಿದಂತೆ ಎಲ್ಲಾ ವರ್ಗದ ಜನತೆಯ ಅಭಿವೃದ್ಧಿಗೆ ಅನೇಕ ಯೋಜನೆಗಳ್ನು ಜಾರಿಗೆ ತಂದಿದೆ. ವಿವಿಧ ವರ್ಗದ ಜನತೆ ರಾಜ್ಯ ಸರ್ಕಾರದ ಅನೇಕ ಯೋಜನೆಗಳ ಫಲಾನುಭವಿಗಳಾಗಿ ದ್ದಾರೆ. ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ಮನದಟ್ಟು ಮಾಡುವ ಮೂಲಕ ಪಕ್ಷವನ್ನು ಗ್ರಾಮೀಣ ಮಟ್ಟದಲ್ಲಿ ಸಂಘಟಿಸಿ ಮುಂದಿನ ಚುನಾವಣೆ ಯಲ್ಲಿ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಗುರಿ

(ಮೊದಲ ಪುಟದಿಂದ) ಹೊಂದಲಾಗಿದೆ ಎಂದು ಪತ್ರಿಕೆಯೊಂದಿಗೆ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು.

‘ಶಕ್ತಿ’: ಪಕ್ಷ ಸಂಘಟನೆ ಯಾವ ರೀತಿ ಮಾಡುತ್ತೀರ?

ಶಿವು ಮಾದಪ್ಪ : ಜಿಲ್ಲೆಯಲ್ಲಿ 5 ಬ್ಲಾಕ್‍ಗಳಿವೆ. ಇವುಗಳ ಪೈಕಿ ಮಡಿಕೇರಿ ಬ್ಲಾಕ್ ಸಮಿತಿಯನ್ನು ಬದಲಾಯಿಸುವ ಯೋಜನೆಯಿದೆ. ಸದ್ಯದಲ್ಲಿಯೇ ಬದಲಾವಣೆ ಮಾಡಲಾಗುವದು. ಉಳಿದಂತೆ ಎಲ್ಲಾ ಬ್ಲಾಕ್‍ಗಳಿಂದ ತಲಾ ಒಬ್ಬರನ್ನು ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳಲಾಗುವದು. ಜನರ ಸಮಸ್ಯೆ ಅಥವಾ ಕಾರ್ಯಕರ್ತರ ಸಮಸ್ಯೆಗಳು ಕಂಡು ಬಂದಲ್ಲಿ ಬ್ಲಾಕ್ ಮಟ್ಟದಲ್ಲಿಯೇ ಪರಿಹರಿಸಲು ಯತ್ನಿಸಲಾಗುವದು.

ಜವಾಬ್ದಾರಿಗಳನ್ನು 5 ಬ್ಲಾಕ್ ಮಟ್ಟದಲ್ಲಿ ಹಂಚಿಕೆ ಮಾಡುವ ಮೂಲಕ ಎರಡನೇ ತಲೆಮಾರಿನ ನಾಯಕರನ್ನು ಬೆಳೆಸುವದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವದು. ತಟಸ್ಥರಾಗಿರುವವರನ್ನು ಸಕ್ರೀಯಗೊಳಿಸುವದರೊಂದಿಗೆ ಜನರಿಗೆ ಒಳ್ಳೆಯ ಅಭಿಪ್ರಾಯವಿ ರುವವರನ್ನು ವಿವಿಧ ಘಟಕಗಳಿಗೆ ಅಧ್ಯಕ್ಷರಾಗಿ ನೇಮಕ ಗೊಳಿಸಲಾಗುವದು. ಹಿರಿಯರನ್ನು ಭೇಟಿಯಾಗಿ ಸಲಹೆ ಸಹಕಾರ ಕೋರುತ್ತೇನೆ.

‘ಶಕ್ತಿ’: ಕೊಡಗು ಜಿಲ್ಲೆ ಬಿಜೆಪಿಯ ಭದ್ರಕೋಟೆ ಬಿಜೆಪಿಯಿಂದ ಯಾರು ನಿಂತರೂ ಗೆಲ್ಲುತ್ತಾರೆ ಅನ್ನುವ ಮಾತಿದೆಯಲ್ಲ?

ಶಿವುಮಾದಪ್ಪ : ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಮತಗಳಿವೆ. ಸ್ಥಳೀಯ ಆಡಳಿತ ಸೇರಿದಂತೆ ವಿವಿಧ ಹಂತದ ಚುನಾವಣೆ ಸಂದರ್ಭ ಅಭ್ಯರ್ಥಿಗಳ ಆಯ್ಕೆ, ತಂತ್ರಗಾರಿಕೆಯಲ್ಲಿ ಪಕ್ಷ ಎಡವಿರುವದು ಚುನಾವಣೆಯಲ್ಲಿ ಸೋಲಾಗಿರಬಹುದು. ನಾಯಕರಲ್ಲಿಯೂ ಅಭಿಪ್ರಾಯ ಬೇಧ ಕಂಡು ಬಂದಿರಬಹುದು. ಆದರೂ ಪಕ್ಷದ ಅಭ್ಯರ್ಥಿಗಳು ಅನೇಕ ಕಡೆಗಳಲ್ಲಿ ಅಲ್ಪಮತದ ಅಂತರದಿಂದ ಸೋತಿದ್ದಾರೆ. ಸರಿಯಾದ ತಂತ್ರಗಾರಿಕೆ ಮಾಡಿದ್ದರೆ ಗೆಲ್ಲಬಹುದಿತ್ತು.

‘ಶಕ್ತಿ’: ಕಾಂಗ್ರೆಸ್ ಮುಕ್ತ ಕೊಡಗು ಮಾಡಿದ್ದೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ?

ಶಿವುಮಾದಪ್ಪ : ಈ ವಾದ ಸರಿಯಲ್ಲ. ಆನೆ ನಡೆದಾಡಿದ್ದೇ ದಾರಿ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಬಿಜೆಪಿಯವರ ಭದ್ರಕೋಟೆಯನ್ನು ತಾನು ಮುರಿದಿದ್ದೇನೆ. ಶ್ರೀಮಂಗಲ ಹಾಗೂ ಟಿ.ಶೆಟ್ಟಿಗೇರಿ ಗ್ರಾ.ಪಂ.ಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದರೂ ಜಿ.ಪಂ. ಚುನಾವಣೆಯಲ್ಲಿ ಈ ಎರಡೂ ಗ್ರಾ.ಪಂ.ಗಳಲ್ಲಿ ನಾನು ಜಯಗಳಿಸಿದ್ದೇನೆ. ಅತೀ ಹೆಚ್ಚಿನ ಮತ ಈ ಎರಡು ಗ್ರಾ.ಪಂ.ಗಳಲ್ಲಿ ದೊರೆತಿದೆ.

‘ಶಕ್ತಿ’: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಿರಿಯರು ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದರೂ ನಿಮ್ಮ ನೇಮಕ ಹೇಗಾಯಿತು?

ಶಿವುಮಾದಪ್ಪ : ನನ್ನ ತಂದೆ ಮುಕ್ಕಾಟಿರ ಬಾಲಸುಬ್ರಮಣ್ಯ ಅವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದರು. ನಾನು ಕೂಡ ಬಾಲ್ಯದಿಂದಲೇ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದೆ. ಗ್ರಾ.ಪಂ. ಸದಸ್ಯನಾಗಿ, ಅಧ್ಯಕ್ಷನಾಗಿ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷದ ಪರ ಕೆಲಸ ಮಾಡಿದ ಅನುಭವವಿದೆ. ಈ ಹಿನ್ನಲೆಯಲ್ಲಿ ತನ್ನನ್ನು ಕೆಪಿಸಿಸಿ ವರಿಷ್ಠರು ಆಯ್ಕೆ ಮಾಡಿರಬಹುದು. ವರಿಷ್ಠರು ಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ.

‘ಶಕ್ತಿ’: ಚುನಾವಣಾ ವರ್ಷವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ತಂತ್ರಗಾರಿಕೆ ಏನು?

ಶಿವುಮಾದಪ್ಪ : ಸೂಕ್ತ ಹಾಗೂ ಜನಮನ್ನಣೆಗಳಿಸಿರುವ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವದು. ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ. ಈ ಮೂಲಕ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಾಗುವದು. ಎರಡು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಆಶಾಭಾವನೆಯಿದೆ.

‘ಶಕ್ತಿ’: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸದೇ ಹಲವು ಅವಧಿಗಳೇ ಕಳೆದಿವೆಯಲ್ಲ?

ಶಿವು ಮಾದಪ್ಪ : ಹೌದು. ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸದೇ 3-4 ಅವಧಿಗಳೇ ಕಳೆದಿವೆ. ಹಿಂದೆ ಒಬ್ಬರನ್ನೊಬ್ಬರು ಕಾಲೆಳೆಯುವ ಕಾಲವಿತ್ತು. ಈ ಬಾರಿ ಎಲ್ಲವನ್ನು ಸರಿಪಡಿಸಿಕೊಂಡು ಒಂದೇ ವೇದಿಕೆಯಡಿ ಚುನಾವಣಾ ತಂತ್ರಗಾರಿಕೆಯನ್ನು ರಚಿಸಿ ಕೆಲಸ ಮಾಡುವ ಯೋಜನೆ ತಯಾರಿಸಲಾಗುವದು.

‘ಶಕ್ತಿ’: ಕಾಂಗ್ರೆಸ್ ಹಿಂದೂಗಳ ಬಗ್ಗೆ ಕಠಿಣ ಹಾಗೂ ಅಲ್ಪಸಂಖ್ಯಾತರ ಬಗ್ಗೆ ಮೃದುಧೋರಣೆ ಅನುಸರಿಸುತ್ತಿದೆ ಎಂಬ ಆರೋಪಕ್ಕೆ ಏನನ್ನುತ್ತೀರಿ?

ಶಿವುಮಾದಪ್ಪ : ಖಂಡಿತಾ ಇಲ್ಲ ಕಾಂಗ್ರೆಸ್ ಜಾತ್ಯತೀತ ಪಕ್ಷವಾಗಿದೆ. ಬಡವರಿಗೆ, ಅಶಕ್ತರಿಗೆ ರಕ್ಷಣೆ ಅಗತ್ಯವಾಗಿದೆ. ಕಾಂಗ್ರೆಸ್ ಪಕ್ಷ ಯಾರ ಪರವೂ ಇಲ್ಲ. ವಿರೋಧವೂ ಇಲ್ಲ.

‘ಶಕ್ತಿ’: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜಿಲ್ಲೆಗೆ ಅನುದಾನ ಕಡಿಮೆಯಿದೆ ಎಂಬ ಆರೋಪವಿದೆಯಲ್ಲ?

ಶಿವುಮಾದಪ್ಪ : ಬಿಜೆಪಿ ಸರ್ಕಾರವಿದ್ದಾಗ ಬಂದಿದ್ದ ಅನುದಾನ ಈ ಬಾರಿ ಬಂದಿಲ್ಲ. ಆದರೆ ಬಿಜೆಪಿ ಅವಧಿಯಲ್ಲಿ ಕೆಲಸಗಳೇ ಆಗಿಲ್ಲ. ಬಿಜೆಪಿ ಅವಧಿಯಲ್ಲಾದ ಕಾಂಕ್ರಿಟ್ ರಸ್ತೆಗಳ ಕಿತ್ತು ಹೋಗಿವೆ. ಕಾಂಕ್ರಿಟ್ ರಸ್ತೆ ಇಲ್ಲಿಗೆ ಅವಶ್ಯಕತೆ ಇರಲಿಲ್ಲ. ನೀರಿನ ಪ್ರದೇಶದಲ್ಲಿ ಕಾಂಕ್ರಿಟ್ ಅವಶ್ಯಕ ಆದರೂ ಬಿಜೆಪಿ ಅವಧಿಯಲ್ಲಿ ಹೊಸತೇನಿರಲಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನೇ ಅನುಷ್ಠಾನಕ್ಕೆ ತಂದಿದ್ದಾರೆ.

‘ಶಕ್ತಿ’: ಕೇಂದ್ರ ಸರ್ಕಾರದ ನೀತಿ ಬಗ್ಗೆ ತಮ್ಮ ನಿಲುವೇನು?

ಶಿವುಮಾದಪ್ಪ : ಕೇಂದ್ರ ಸರ್ಕಾರ ಜಾರಿಗೆ ತಂದ ಜಿಎಸ್‍ಟಿ ಕಾಂಗ್ರೆಸ್‍ನ ಯೋಜನೆಯಾಗಿತ್ತು. ಆಗ ಜಾರಿಗೆ ತರಲು ವಿರೋಧ ಪಕ್ಷಗಳು ಬಿಡಲಿಲ್ಲ. ಜಾರಿಗೆ ಬಂದಿದ್ದರೆ ಇನ್ನು ಕಡಿಮೆ ತೆರಿಗೆ ಇರುತ್ತಿತ್ತು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ ವಿಧೇಯಕ ತರಲು ಯೋಜಿಸುತ್ತಿದೆ. ನೋಟ್ ನಿಷೇಧದಿಂದಲೂ ಬಡವರಿಗೆ ಸಮಸ್ಯೆಯಾಯಿತು. ತಪ್ಪು ಮಾಡಿದವರಿಗೆ ಶಿಕ್ಷೆ ಅಗತ್ಯ. ಆದರೆ ಯಾವದೇ ತಪ್ಪು ಮಾಡದ ಬಡವರಿಗೆ ಏಕೆ ಶಿಕ್ಷೆ ಎಂದು ಪ್ರಶ್ನಿಸಿದ ಶಿವು ಮಾದಪ್ಪ ಕೇಂದ್ರದ ನೀತಿಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಹೇಳಿದರು.

‘ಶಕ್ತಿ’: ಮಡಿಕೇರಿ ಬ್ಲಾಕ್ ಅಧ್ಯಕ್ಷ ಕೆ.ಎಂ. ಗಣೇಶ್ ನಿಲುವಿನ ಬಗ್ಗೆ ತಮ್ಮ ಅಭಿಪ್ರಾಯವೇನು?

ಶಿವುಮಾದಪ್ಪ : ಕಾಂಗ್ರೆಸ್ ಪಕ್ಷ ಸಮುದ್ರ ಇದ್ದ ಹಾಗೆ. ಪಕ್ಷದ ವಿರುದ್ಧ ನಿಲ್ಲುವವರೊಂದಿಗೆ ಯಾವದೇ ಭಾವನೆ ಹೊಂದಿಲ್ಲ. ತಟಸ್ಥರಾದವರನ್ನು ಸಕ್ರಿಯಗೊಳಿಸುವ ಮೂಲಕ ಸಂಘಟನೆ ಮಾಡುತ್ತೇನೆ.

‘ಶಕ್ತಿ’: ನಗರಸಭಾ ಸದಸ್ಯರಾದ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಅವರ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವೇನು?

ಶಿವುಮಾದಪ್ಪ : ಈ ಬಗ್ಗೆ ತನಗೆ ಸರಿಯಾದ ಮಾಹಿತಿಯಿಲ್ಲ. ತಾ. 10 ರಂದು ಮಡಿಕೇರಿ ನಗರಕ್ಕೆ ಆಗಮಿಸುತ್ತಿದ್ದು, ಪಕ್ಷದ ಕಚೇರಿಯಲ್ಲಿ ಪಕ್ಷದ ಹಿರಿಯರು, ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದ ಬಳಿಕ ತೀರ್ಮಾನಿಸುತ್ತೇವೆ.

‘ಶಕ್ತಿ’: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಿರಾ?

ಶಿವುಮಾದಪ್ಪ : ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಜನತೆ ತೀರ್ಮಾನಿಸಬೇಕಾಗಿದೆ. ಜನ ಮತ್ತು ಪಕ್ಷದ ವರಿಷ್ಠರು ತೀರ್ಮಾನಿಸಿದಲ್ಲಿ ಖಂಡಿತಾ ಸ್ಪರ್ಧಿಸುತ್ತೇನೆ.

-ಚಂದ್ರ ಉಡೋತ್