ಸುಂಟಿಕೊಪ್ಪ, ಜು.11: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಮಗಾರಿಯ ಸಾಮಾಜಿಕ ಪರಿಶೋಧನೆಯ ಪಟ್ಟಿಯಲ್ಲಿ ಗ್ರಾ.ಪಂ.ಅಧ್ಯಕ್ಷರ ಅಧಿಕಾರಿಗಳ ಸಹಿ ಇಲ್ಲದೆ ಇರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯ 2016-17ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ವಿಶೇಷ ಗ್ರಾಮಸಭೆಯು ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಉದ್ಯೋಗ ಖಾತ್ರಿ ಯೋಜನೆಯಡಿ ಸುಂಟಿಕೊಪ್ಪ ಗ್ರಾ.ಪಂ.ನಿಂದ 16-04-2016 ರಿಂದ 2017 ರವರೆಗೆ ಪೂರ್ಣಗೊಂಡ ಕಾಮಗಾರಿ ಆದಕ್ಕೆ ತಗುಲಿದ ವೆಚ್ಚ ಇನ್ನು ಪ್ರಗತಿಯಲ್ಲಿರುವ ಕಾಮಗಾರಿ ಬಗ್ಗೆ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನಾ ಪಟ್ಟಿಯಲ್ಲಿ ಅಧಿಕಾರಿಗಳ, ಅಧ್ಯಕ್ಷರ ಸಹಿ ಸೀಲು ಇಲ್ಲ. ಕಳೆದ ಗ್ರಾಮ ಸಭೆಯಲ್ಲಿನ ನೀಡಿದ ಪಟ್ಟಿಯಲ್ಲಿ ರೂ. 1 ಲಕ್ಷ 13 ಸಾವಿರಗಳ ವ್ಯತ್ಯಯ ಕಂಡು ಬಂದಿತ್ತು. ಅದನ್ನು ಸರಿಪಡಿಸುವದಾಗಿ ಹೇಳಿದ್ದು ಏನಾಯಿತು? ಗ್ರಾಮಸ್ಥರಾದ ನಮಗೆ ಸರಿಯಾದ ಕಾಮಗಾರಿಯ ಪ್ರತಿ ನೀಡಿ ಎಂದು ಎಂ.ಎ. ವಸಂತ, ಮಂಜುನಾಥ್, ರಜಾಕ್, ವಾಸು ಇಬ್ರಾಹಿಂ ಒತ್ತಾಯಿಸಿದರು.

ಸುಶೀಲ ಎಂಬವರ ಮನೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ರೂ. 18,360 ಆಂದಾಜು ಮೊತ್ತ ನಿಗದಿಪಡಿಸಿದ್ದರೂ, ರೂ. 8312 ಮಾತ್ರ ಪಾವತಿಸಿರುವದಾಗಿ ನಮೂದಿಸಲಾಗಿದೆ. ಇದು ಹೇಗೆ ಸಾಧ್ಯ ಎಂದು ಎಂ.ಎ. ವಸಂತ ಪ್ರಶ್ನಿಸಿದರು. ಮನೆ ಕಾಮಗಾರಿಗೆ ಉದ್ಯೋಗ ಖಾತ್ರಿಯಡಿ ಕೂಲಿ, ಕೆಲಸ ಮಾಡಿದ ವೇತನ ಪಾವತಿಸಲಾಗಿದೆ ಎಂಬ ಉತ್ತರ ಬಂತು.

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆ ಸಹಕಾರಿಯಾಗಲಿದೆ ರಸ್ತೆ, ತಡೆಗೋಡೆ,ಕೊಟ್ಟಿಗೆ ನಿರ್ಮಿಸಲು ಅನುದಾನ ಲಭ್ಯವಿದೆ ವೈಯಕ್ತಿಕ ಬಾವಿ ನಿರ್ಮಿಸಲು 82,000 ರೂ ಸಾಮಾಗ್ರಿ ವೆಚ್ಚ ಸೇರಿದಂತೆ ನೀಡಲಾಗುವದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಉದ್ಯೋಗ ಖಾತ್ರಿ ಸಾಮಾಜಿಕ ಲೆಕ್ಕ ಪರಿಶೋಧನಾ ಅಧಿಕಾರಿ ಸಂಪತ್ ಹೇಳಿದರು. ಈ ಸಭೆಯಲ್ಲಿ ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ, ತಾ.ಪಂ.ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾ.ಪಂ. ಉಪಾಧ್ಯಕ್ಷರಾದ ಪಿ.ಆರ್.ಸುಕುಮಾರ್, ನೋಡಲ್ ಅಧಿಕಾರಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಹೇಮಂತ್‍ಕುಮಾರ್, ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಮೇದಪ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೆ.ಇ.ಕರೀಂ, ಎ.ಶ್ರೀಧರ್ ಕುಮಾರ್, ಸಿ.ಚಂದ್ರ, ಎಂ.ಸೋಮಯ್ಯ, ನಾಗರತ್ನ, ಗಿರೀಜಾ ಉದಯ್ ಕುಮಾರ್, ರತ್ನಾ ಜಯನ್, ಶಿವಮ್ಮ, ಜ್ಯೋತಿ ಭಾಸ್ಕರ್, ಶೋಭಾ ರವಿ, ಕಾರ್ಯದರ್ಶಿ ನಿತ್ಯಾ ಉಪಸ್ಥಿತರಿದ್ದರು.