ಮಡಿಕೇರಿ, ಜು. 11: ಜಿಲ್ಲೆಯಲ್ಲಿರುವ ನಿರಾಶ್ರಿತರಿಗೆ ನಿವೇಶನ ಹಾಗೂ ಮನೆ ಸೌಲಭ್ಯ ಕಲ್ಪಿಸುವಂತೆ ಜೆಡಿಯು ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಉಮೇಶ್ ಆಗ್ರಹಿಸಿದ್ದಾರೆ.

ನಗರದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜಕೀಯ ಪಕ್ಷಗಳು ಬಡವರಿಂದ ಮತ ಪಡೆದು ಅವರನ್ನು ವಂಚಿಸಿವೆ ಎಂದು ಆರೋಪಿಸಿದರು. ಕೊಡಗು ಜಿಲ್ಲೆಯಲ್ಲಿ ಅನೇಕ ಮಂದಿ ಬಡವರು ಸೂರು ಇಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚುನಾವಣೆ ಸಂದರ್ಭ ಮತದಾರರಿಗೆ ಕೇವಲ ಆಶ್ವಾಸನೆಗಳನ್ನು ಮಾತ್ರ ನೀಡುತ್ತಿವೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಬಡವರನ್ನು ಮರೆತೇ ಬಿಡುತ್ತವೆ. ರಾಜಕೀಯ ವ್ಯಕ್ತಿಗಳ ಸಂಬಂಧಿಕರು ಮಾತ್ರ ಹಣ, ಅಂತಸ್ತು ಹೊಂದಿಕೊಂಡು ಮುಂದುವರೆಯುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರದ ಪಾಪ ಕರ್ಮದ ಫಲವಾಗಿ ಇಂದು ರಾಜ್ಯದಲ್ಲಿ ಮಳೆ ಬೆಳೆ ಕಡಿಮೆಯಾಗಿದೆ ಎಂದು ಆರೋಪಿಸಿದ ಅವರು ರಾಜಕಾರಣಿಗಳಲ್ಲಿ ಸೂಟ್‍ಕೇಸ್‍ನ ವ್ಯವಹಾರಗಳು ನಡೆಯುತ್ತಿವೆ ಎಂದರು.

ಧರಣಿ ಎಚ್ಚರಿಕೆ

ಬಡವರಿಗೆ ಸೂರು ಕಲ್ಪಿಸಲು ಸಾಧ್ಯವಿಲ್ಲದ ಮೇಲೆ ಅಧಿಕಾರದಲ್ಲಿ ಏಕೆ ಮುಂದುವರೆಯುತ್ತಿದ್ದೀರಿ ಎಂದು ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಂಜುಳಾ ಉಮೇಶ್ ಅವರು ಬಡವರಿಗೆ ಸೂರು ಕಲ್ಪಿಸುವ ಬೇಡಿಕೆ ಮುಂದಿಟ್ಟು ಆಗಸ್ಟ್ ತಿಂಗಳಲ್ಲಿ ವಿಧಾನಸೌಧ ಅಥವಾ ಮುಖ್ಯಮಂತ್ರಿ ನಿವಾಸದೆದುರು ಧರಣಿ ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಯು ಕೊಡಗು ಜಿಲ್ಲಾಧ್ಯಕ್ಷ ಸುನಿಲ್‍ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೋಮಸ್, ಜಿಲ್ಲಾ ಮುಖಂಡ ಅಬ್ದುಲ್ಲಾ ಉಪಸ್ಥಿತರಿದ್ದರು.