ಮಡಿಕೇರಿ, ಜು. 11: ಮಡಿಕೇರಿಯಲ್ಲಿ ಹಿರಿಯ ನಾಗರಿಕರೋರ್ವರ ಮನೆಯ ಅಡುಗೆ ಮನೆಗೆ ನುಗ್ಗಿದ್ದ ಪಟ್ಟೆ ಹಾವೊಂದು ಮನೆ ಮಂದಿಯನ್ನು ಭಯಭೀತರನ್ನಾಗಿಸಿತ್ತು. ಆದರೆ ಸಕಾಲಕ್ಕೆ ಮನೆಯವರ ನೆರವಿಗೆ ಧಾವಿಸಿದ ಮಾಧ್ಯಮದ ಮಂದಿ ಮನೆಯೊಳಗಿದ್ದ ಹಾವನ್ನು ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ಸಫಲರಾದರು.

ಮಡಿಕೇರಿಯ ಮಹದೇವಪೇಟೆ ನಿವಾಸಿ ಬನ್ನಿಮಂಟಪದ ಬಳಿ ವಾಸವಾಗಿರುವ ಬುಟ್ಟಿಯಂಡ ಬಾಗೀರಥಿ ಕೆಲವು ವರ್ಷಗಳಿಂದ ಅನಾರೋಗ್ಯಪೀಡಿತರಾಗಿದ್ದು ಆಯಾಗಳೇ ಈ ಹಿರಿಯ ಜೀವದ ಆರೈಕೆಯಲ್ಲಿ ತೊಡಗಿದ್ದಾರೆ. ಹೀಗಿರುವಾಗ ಭಾಗೀರಥಿ ಅವರ ಮನೆಯೊಳಕ್ಕೆ ಪಟ್ಟೆ ಹಾವೊಂದು ಮಧ್ಯಾಹ್ನದ ವೇಳೆ ನುಗ್ಗಿ ಆತಂಕ ಸೃಷ್ಟಿಸಿತು.

ಈ ಸಂದರ್ಭ ಕಸ್ತೂರಿ ಟಿವಿ ವಾಹಿನಿಯ ಕೊಡಗು ಪ್ರತಿನಿಧಿ ಪ್ರೇಮ್ ಅವರನ್ನು ಸಂಪರ್ಕಿಸಿದಾಗ ಹಾವು ಹಿಡಿಯೋದ್ರಲ್ಲಿ ಆಸಕ್ತಿಯಿರೋ ಮತ್ತು ನಿಪುಣರೂ ಆಗಿರುವ ಪ್ರೇಮ್ ಮನೆಗೆ ಧಾವಿಸಿ ಅಡುಗೆ ಮನೆಯೊಳಗೆ ಅವಿತಿದ್ದ ಪಟ್ಟೆ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಪಬ್ಲಿಕ್ ಟಿವಿಯ ಮಲ್ಲಿಕಾರ್ಜುನ್ ಕೂಡ ಹಾವು ಹಿಡಿಯೋ ಕಾಯಕದಲ್ಲಿ ಸಾಥ್ ನೀಡಿದರು.

ಈ ರೀತಿ ಹಿಡಿದ ಹಾವನ್ನು ಮಡಿಕೇರಿಯ ಅರಣ್ಯ ಇಲಾಖೆಗೆ ಕೊಂಡೊಯ್ದು ಅಧಿಕಾರಿಗಳ ವಶಕ್ಕೆ ನೀಡಲಾಯಿತು. ಈ ಸಂದರ್ಭ ಹಾವನ್ನು ಪರೀಕ್ಷಿಸಿದ ಡಿಎಫ್‍ಓ ಸೂರ್ಯಸೇನ್ ಇದು ವಿಷಕಾರಿ ಹಾವಾಗಿದ್ದು ಅಪಾಯ ಉಂಟು ಮಾಡುವ ಸಾಧ್ಯತೆಯಿತ್ತು ಎಂದು ತಿಳಿಸಿದರು. ಬಳಿಕ ಅರಣ್ಯಾಧಿಕಾರಿಗಳು ಅರಣ್ಯ ಭವನದ ಬಳಿಯ ಕಾಡಿಗೆ ಈ ಹಾವನ್ನು ಬಿಟ್ಟಿದ್ದಾರೆ.