ಮಡಿಕೇರಿ, ಜು. 11: ರಾಜ್ಯ ಸರ್ಕಾರದ ಶಿಕ್ಷಣ ಸಚಿವಾಲಯ ಮತ್ತು ಕಾಲೇಜು ಶಿಕ್ಷಣ ಮಂಡಳಿ ಆಯುಕ್ತರು ಪೂರ್ವಾಪರ ಆಲೋಚಿಸದೆ ಹೊರಡಿಸಿರುವ ಆದೇಶ ಜಾರಿಯಾಗದೆ ವಿಫಲಗೊಂಡಿವೆ.

ರಾಜ್ಯದ ಎಲ್ಲಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಬೆಳಿಗ್ಗೆ 8 ಗಂಟೆಗೆ ಕಡ್ಡಾಯವಾಗಿ ತರಗತಿಗಳಿಗೆ ಹಾಜರಾಗಬೇಕೆಂದು ಕಳುಹಿಸಲಾದ ಸುತ್ತೋಲೆಗೆ ವಿದ್ಯಾರ್ಥಿಗಳು ತಿಲಾಂಜಲಿಯಿತ್ತಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಈ ಸುತ್ತೋಲೆಗೆ ಯಾವ ರೀತಿ ಪ್ರತಿಸ್ಪಂದನ ಕಂಡು ಬಂದಿದೆ ಎಂಬದು ಇಲ್ಲಿ ಉಲ್ಲೇಖವಾಗದು. ಏಕೆಂದರೆ ಮಲೆನಾಡು ಜಿಲ್ಲೆಯಾದ ಕೊಡಗಿನಲ್ಲಿ ಅನೇಕ ಕುಗ್ರಾಮ ಗಳಿಂದಲೂ ವಿದ್ಯಾರ್ಥಿಗಳು ಸನಿಹದ ನಗರ ಪ್ರದೇಶಗಳಿರುವ ಕಾಲೇಜಿಗೆ ತೆರಳುತ್ತಾರೆ. ಈಗಾಗಲೇ ಪ್ರಸಕ್ತ ಶೈಕ್ಷಣಿಕ ಸಾಲಿನ ಬಸ್‍ಪಾಸ್‍ಗಳನ್ನು ಕೂಡ ಮಾಡಿಸಿಕೊಂಡಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಕಾಲೇಜು ತಲುಪಲು ಅನೇಕ ಕಡೆಗಳಿಂದ ಬಸ್‍ಗಳ ವ್ಯವಸ್ಥೆ ಲಭ್ಯವಿಲ್ಲ. ಇನ್ನೂ ಕೆಲವು ಗ್ರಾಮಗಳಲ್ಲಿ ಬೆಳಿಗ್ಗೆ ವೇಳೆ ಎಲ್ಲೆಂದರಲ್ಲಿ ಆನೆಗಳ ಹಾವಳಿ ಎದುರಾಗುತ್ತದೆ. ವಿದ್ಯಾರ್ಥಿನಿಯರು ಕಾಡು ಮೇಡು ದಾರಿಗಳಿಂದ ಮುಖ್ಯರಸ್ತೆಯನ್ನು ಸೇರಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಕೊಡಗಿನ 6 ಪ್ರಥಮ ದರ್ಜೆ ಕಾಲೇಜುಗಳ 3000ಕ್ಕೂ ಅಧಿಕ ಮಕ್ಕಳು ಸರ್ಕಾರದ ಸುತ್ತೋಲೆಯನ್ನು ಪಾಲಿಸಲು ಅಸಾಧ್ಯವಾಗಿರುವದರಿಂದ ಬೆಳಿಗ್ಗೆ 8 ಗಂಟೆಗೆ ಕಾಲೇಜು ತಲುಪಲು ನಿರಾಕರಿಸಿದ್ದಾರೆ. ಸುತ್ತೋಲೆ ಬಳಿಕ ದ್ವಿತೀಯ ದಿನದ ಬಳಿಕ ಇಂದು ಕೂಡ ಮಡಿಕೇರಿ ಕಾಲೇಜಿನ ಸುಮಾರು 600 ಮಕ್ಕಳ ಪೈಕಿ ಕೇವಲ 10 ಮಕ್ಕಳು ಸಕಾಲಕ್ಕೆ ಹಾಜರಾಗಿರುವದು ಕಂಡುಬಂದಿತು.

ಆದರೆ ಎಲ್ಲಾ ಕಾಲೇಜುಗಳಲ್ಲಿ ಉಪನ್ಯಾಸಕ ವೃಂದ ಮತ್ತು ಪ್ರಾಂಶುಪಾಲರು ಶಿಕ್ಷಣ ಆಯುಕ್ತರ ಆದೇಶವನ್ನು ಪಾಲನೆ ಮಾಡುವದು ಅನಿವಾರ್ಯವೆನಿಸಿದೆ. ಹೀಗಾಗಿ ಬೆಳಿಗ್ಗೆ 8 ಗಂಟೆಗೆ ಕಾಲೇಜು ಸೇರುವ ಉಪನ್ಯಾಸಕ ವೃಂದ 10 ಗಂಟೆವರೆಗೆ ದಿಕ್ಕು ತೋಚದಂತೆ ಕಾಲಹರಣ ಮಾಡಬೇಕಾಗಿದೆ. ಈ ಹಿಂದೆ ಬೆಳಿಗ್ಗೆ 10 ರಿಂದ 4 ಗಂಟೆವರೆಗೆ ಕರ್ತವ್ಯ ನಿರ್ವಹಿಸಬೇಕಾಗಿದ್ದ ಈ ಉಪನ್ಯಾಸಕ ವೃಂದದವರು ಈಗ ಬೆಳಿಗ್ಗೆ 8 ಗಂಟೆಗೆ ಬಂದರೂ ಸಂಜೆ 4 ಗಂಟೆವರೆಗೆ ಇರಲೇಬೇಕಾಗಿದೆ. ಏಕೆಂದರೆ ಮಕ್ಕಳು 10 ಗಂಟೆಗೆ ಆಗಮಿಸುತ್ತಿದ್ದು, ತರಗತಿಗಳನ್ನು 10 ಗಂಟೆಗಷ್ಟೇ ಪ್ರಾರಂಭಿಸಬೇಕಾಗಿದೆ.

ಈ ಪರಿಸ್ಥಿತಿ ನಿರಂತರವಾಗಿ ಮುಂದುವರೆದರೆ ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ಇದೊಂದು ಕಗ್ಗಂಟಾಗಿ ತಲೆನೋವಾಗಿ ಪರಿಣಮಿಸಲಿದೆ. ಮಕ್ಕಳ ಹಿತದೃಷ್ಟಿಯಿಂದ ಕನಿಷ್ಟ ಪಕ್ಷ ಕೊಡಗಿನಂತ ಮಲೆನಾಡ ಪ್ರದೇಶದಲ್ಲಿ ಈ ಬದಲಾದ ಸಮಯವನ್ನು ಕೈ ಬಿಟ್ಟು ಮೊದಲಿದ್ದ ವೇಳೆಯಲ್ಲಿಯೇ ತರಗತಿ ನಡೆಸುವಂತೆ ವಿದ್ಯಾರ್ಥಿಗಳು ಮತ್ತು ಪೋಷಕವೃಂದ ‘ಶಕ್ತಿ’ ಮೂಲಕ ಕೋರಿದ್ದಾರೆ.