ಆರು ದಶಕಗಳ ಹಿಂದೆ ಮಡಿಕೇರಿ ಹೊರವಲಯದ ಉಕ್ಕುಡ(ಇಂದಿನ ರಾಜರಾಜೇಶ್ವರಿ ನಗರ)ದಲ್ಲಿ ತೀರಾ ಬಡತನ ಹಾಗೂ ಕಷ್ಟಕರ ಬದುಕು ಕಟ್ಟಿಕೊಂಡಿದ್ದ ದಿ. ಸಣ್ಣಯ್ಯ ಹಾಗೂ ನಂಜಮ್ಮ ದಂಪತಿಯ ತುಂಬು ಕುಟುಂಬದಲ್ಲಿ ಜನಿಸಿದ್ದ ಪ್ರೊ. ಹೆಚ್.ಎಸ್. ವಾಸುದೇವ್ ಅವರು ನಮ್ಮ ಸಮಾಜ ವ್ಯವಸ್ಥೆಯಲ್ಲಿ ಸಾಮರಸ್ಯದ ಬಂಧುವಾಗಿದ್ದರು.

ಎಳೆಯ ವಯಸ್ಸಿನಲ್ಲೇ ತಮ್ಮ ಕುಟುಂಬಕ್ಕೆ ವರದಾತೆಯಾಗಿ ನೆಲೆಸಿರುವ ಶ್ರೀ ರಾಜರಾಜೇಶ್ವರಿ ದೇವಿಯ ಪರಮ ಭಕ್ತರಾಗಿ; ಆ ತಾಯಿಯ ಆಶೀರ್ವಾದದಿಂದಲೇ ವಿದ್ಯಾಕ್ಷೇತ್ರದಲ್ಲಿ ಇವರು ಉತ್ತಮ ಸಾಧನೆಯೊಂದಿಗೆ ಬಿಎಸ್ಸಿ ಪದವಿ ಪಡೆದವರು. ಅಷ್ಟಕ್ಕೆ ಕಲಿಕೆಯ ದಾಹ ತಣಿಯದೆ ಮತ್ತಷ್ಟು ಶೈಕ್ಷಣಿಕ ಸಾಧನೆಯೊಂದಿಗೆ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕೌಟುಂಬಿಕ ಜೀವನದಲ್ಲಿ ಬಡತನ, ಕಷ್ಟಕಾರ್ಪಣ್ಯಗಳ ನಡುವೆಯೂ 1977ರಲ್ಲಿ ಬಿಎಸ್ಸಿ ಬಳಿಕ, 1990ರಲ್ಲಿ ಎ.ಎಸ್‍ಸ್ಸಿ ಪದವಿಯೊಂದಿಗೆ ಕೃಷಿ ವಿಭಾಗದಲ್ಲಿ ಪಿಹೆಚ್‍ಡಿ ಪದವಿಯನ್ನು 2008ರಲ್ಲಿ ಪಡೆದು ಡಾ. ವಾಸುದೇವ್ ಎಂದು ಪರಿಚಿತರಾದರು.

ಕೃಷಿ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಪಡೆದ ಇವರು ಬೆಂಗಳೂರು ಹಾಗೂ ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿ, ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಪ್ರಾರಂಭಿಕ ದಿನಗಳಿಂದಲೂ ಉತ್ತಮ ಸೇವೆಯೊಂದಿಗೆ ಈ ಸಂಸ್ಥೆಯ ಏಳಿಗೆಗಾಗಿ ವಿಶೇಷ ಕಾಳಜಿಯೊಂದಿಗೆ ಶ್ರಮಿಸುವ ಮುಖಾಂತರ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

1978ರಲ್ಲಿ ಬೆಂಗಳೂರು ಕೃಷಿ ವಿವಿಯಲ್ಲಿ ಅಧೀಕ್ಷಕರಾಗಿ ವೃತ್ತಿ ಜೀವನ ಆರಂಭಿಸಿ ಸಹಾಯಕ ಪ್ರೊಫೆಸರ್ ಹಾಗೂ ಪ್ರೊಫೆಸರ್ ಆಗಿ ಪೊನ್ನಂಪೇಟೆಯಲ್ಲಿ ಸೇವೆಯೊಂದಿಗೆ 2014ರ ತನಕ ಉದ್ಯೋಗದಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಕೃಷಿ ವಿಷಯದಲ್ಲಿ ಮುಖ್ಯಸ್ಥರಾಗಿದ್ದ ವಾಸುದೇವ್ ಅವರು ಅಲ್ಲಿನ ವಸತಿ ನಿಲಯ ವಿದ್ಯಾರ್ಥಿಗಳ ಸಲಹಾ ಮಂಡಳಿ ಪ್ರಮುಖರಾಗಿ, ವಿದ್ಯಾಲಯದ ಸಲಹಾ ಸಮಿತಿ ಸೇರಿದಂತೆ ವಿವಿಧ ಹಂತದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು.

ತಮ್ಮ ಸುದೀರ್ಘ ವೃತ್ತಿ ಜೀವನದ ನಡುವೆಯೂ; ಬಡ ವಿದ್ಯಾರ್ಥಿಗಳ ಕಷ್ಟ, ವಿದ್ಯಾಭ್ಯಾಸ ಮುಂದುವರಿಸಲು ಎದುರಾಗಲಿರುವ ತೊಂದರೆ ಬಗ್ಗೆ ತಮ್ಮ ಶೈಕ್ಷಣಿಕ ಬದುಕಿನ ದಿನಗಳಿಂದ ಪ್ರೇರಣೆ ಪಡೆದು; ತಾವೇ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದ್ದರು.

ಪ್ರೊ. ವಾಸುದೇವ್ ಅವರ ಕುಟುಂಬದ ಆರಾಧ್ಯ ದೇವತೆ ಶ್ರೀ ರಾಜರಾಜೇಶ್ವರಿಯ ಕೃಪೆಯಿಂದ 1990 ರಲ್ಲಿ 12 ವಿದ್ಯಾರ್ಥಿಗಳಿಂದ ಪುಟ್ಟ ಮಕ್ಕಳಿಗೆ ಶಿಕ್ಷಣ ಆರಂಭಿಸಿ, ನಗರದ ಪ್ರಕೃತಿ ರಮಣೀಯ ಕರ್ಣಂಗೇರಿ ಬೆಟ್ಟ ಶ್ರೇಣಿ ನಡುವೆ ಸುಂದರ ಪರಿಸರದಲ್ಲಿ, ಅಂದು ಆರಂಭಿಸಿದ್ದ ವಿದ್ಯಾ ದೇಗುಲ ಇಂದು ಸುಸಜ್ಜಿತವಾಗಿ ತಲೆಯೆತ್ತಿ ನಿಂತಿರುವದು ಇವರ ಪರಿಶ್ರಮಕ್ಕೆ ಪ್ರತ್ಯಕ್ಷ ಸಾಕ್ಷಿ”

ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆಯು ಇಂದು ಪ್ರಾಥಮಿಕ ಹಂತದಿಂದ ದ್ವಿತೀಯ ಪಿಯುಸಿ ತನಕ ವಿದ್ಯಾರ್ಜನೆ ನೀಡುತ್ತಾ; ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರವಾಗಿದ್ದು; ಕೊನೆಯುಸಿರಿರುವ ತನಕ ವಾಸುದೇವ್ ಅವರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದರು.

ಅಷ್ಟು ಮಾತ್ರವಲ್ಲದೆ ಉಕ್ಕುಡ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯನ್ನು ಭಕ್ತರ ಸಹಕಾರದಿಂದ ಮತ್ತು ಕುಟುಂಬದ ಬೆಂಬಲದೊಂದಿಗೆ ಹಂತ ಹಂತವಾಗಿ ಜೀರ್ಣೋದ್ಧಾರಗೊಳಿಸುವಲ್ಲಿ ಅಪಾರ ಶ್ರಮವಹಿಸಿದ್ದ ಇವರು ಭಕ್ತರ ಆಶಯಗಳ ಈಡೇರಿಕೆಯ ಕ್ಷೇತ್ರದೊಂದಿಗೆ ಹಸಿದು ಬಂದವರಿಗೆ ಅನ್ನದಾಸೋಹ ಕಲ್ಪಿಸಿ; ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಂಥವರಿಂದಲೂ ಶ್ಲಾಘನೆಗೆ ಪಾತ್ರರಾಗಿದ್ದರು.

ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಉಪಾಸಕರಾಗಿದ್ದ ಸಣ್ಣಯ್ಯ ಹಾಗೂ ನಂಜಮ್ಮ ದಂಪತಿಯ 10 ಮಂದಿ ಮಕ್ಕಳ ತುಂಬು ಕುಟುಂಬದಲ್ಲಿ ದ್ವಿತೀಯ ಸುಪುತ್ರರಾಗಿ 22.7.1954ರಲ್ಲಿ ಜನಿಸಿದ್ದ ವಾಸುದೇವ್ ಅವರು 2.7.2017ರಂದು ತಮ್ಮ 63ನೇ ವಯಸ್ಸಿನಲ್ಲಿ ಇಹಲೋಕ ಪಯಣ ಮುಗಿಸಿದರು.

ಆ ಕ್ಷಣದ ತನಕವೂ ಇವರು ಜ್ಞಾನದೇಗುಲದೊಂದಿಗೆ ಧಾರ್ಮಿಕ ನೆಲೆ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಶ್ರೇಯೋಭಿವೃದ್ಧಿಯಲ್ಲಿ ಸಮರ್ಪಿತ ಬದುಕು ಸವೆಸಿ ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾಗಿರುವ ಪತ್ನಿ ದಾಕ್ಷಾಯಿಣಿ; ಇಂಜಿನಿಯರಿಂಗ್ ಪದವಿಯೊಂದಿಗೆ, ವೈವಾಹಿಕ ಬದುಕು ಕಟ್ಟಿಕೊಂಡಿರುವ ಪುತ್ರಿ ಸಾಂಚನ ವರುಣ್ ಹಾಗೂ ವಕೀಲರಾಗಿರುವ ಪುತ್ರ ಸಚಿನ್ ಸೇರಿದಂತೆ ನಾಲ್ವರು ಸಹೋದರರು, ಸಹೋದರಿಯರು ಸೇರಿದಂತೆ ಅಪಾರ ವಿದ್ಯಾರ್ಥಿ ಸಮೂಹ, ಕ್ಷೇತ್ರ ದೇವತೆಯ ಸದ್ಭಕ್ತರಿಂದ ಇಂದು ಕಣ್ಮರೆಯಾಗಿದ್ದಾರೆ.

ಒಟ್ಟಿನಲ್ಲಿ ಪ್ರೊ. ಹೆಚ್.ಎಸ್. ವಾಸುದೇವ್ ಅವರು ತಮ್ಮ ಸಮರ್ಪಿತ ಜೀವನದಲ್ಲಿ ಶೋಷಿತ, ಪೀಡಿತ ದುರ್ಬಲರ ದನಿಯಾಗಿ ಇಂದಿನ ಸಮಾಜ ವ್ಯವಸ್ಥೆಯ ಸಾಮರಸ್ಯದ ಬಂಧುವಾಗಿ ಸಾರ್ಥಕ ಬದುಕು ಕಂಡುಕೊಳ್ಳುವ ಮೂಲಕ ಸದಾ ಸ್ಮರಣೀಯರಾಗಿದ್ದಾರೆ. ಇವರ ನೆರಳಿನಲ್ಲಿ ಕುಟುಂಬ ವರ್ಗ, ಸ್ನೇಹಿತರು, ದೈವೀ ಭಕ್ತರ ಕೂಡಿಬಾಳುವಿಕೆಯಿಂದ ಇಂದು ಶಾಶ್ವತ ನೆಲೆಯಾಗಿರುವ ಶ್ರೀ ರಾಜರಾಜೇಶ್ವರಿ ದೇವಾಲಯ ಕ್ಷೇತ್ರ ಮತ್ತು ಶ್ರೀ ರಾಜೇಶ್ವರಿ ವಿದ್ಯಾದೇಗುಲಗಳು ಅಮರತ್ವ ಪಡೆದುಕೊಂಡಿವೆ. - ಶ್ರೀಸುತ.