ಶನಿವಾರಸಂತೆ, ಜು. 11: ಸಮೀಪದ ಮಾದ್ರೆ ದುಂಡಳ್ಳಿ ಹೊಸಳ್ಳಿ ಗ್ರಾಮಗಳ ಅರಣ್ಯ ಜಾಗವನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವದನ್ನು ವಿರೋಧಿಸಿ ಗ್ರಾಮಗಳ 200 ಗ್ರಾಮಸ್ಥರು ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು. ಹಾಕಲಾಗಿದ್ದ ಬೇಲಿಯನ್ನು ತೆರವುಗೊಳಿಸಿದರು.

ದುಂಡಳ್ಳಿ ಗ್ರಾಮದ ಸ. ನಂ 21/2ರಲ್ಲಿ 30 ವರ್ಷಗಳ ಹಿಂದೆ ಅರಣ್ಯ ಇಲಾಖೆಯವರು ಅಕೇಶಿಯ ನೆಡುತೋಪು ಮಾಡಿದರು. ಮರಗಳು ಎತ್ತರವಾಗಿ ಬೆಳೆದು ನಿಂತಿರುವ ಅರಣ್ಯದಲ್ಲಿ ಹಗಲು ವೇಳೆ ತಂಗುವ ಕಾಡಾನೆಗಳು ರಾತ್ರಿ ವೇಳೆ ಗ್ರಾಮಗಳ ತೋಟಗಳಲ್ಲಿ ಬೆಳೆದಿರುವ ಕಾಫಿ, ತೆಂಗು, ಅಡಿಕೆ ಬೆಳೆಗಳನ್ನು ಹಾಗೂ ಸೋಲಾರ್ ಬೇಲಿಯನ್ನು ನಾಶಮಾಡುತ್ತಿವೆ ಎಂಬದಾಗಿ ಗ್ರಾಮಸ್ಥರು ದೂರಿದ್ದಾರೆ.

ಅದೇ ಅರಣ್ಯ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಜೂನ್ ತಿಂಗಳಲ್ಲಿ ಗ್ರಾಮದ ಚಂದ್ರಪ್ಪ ಮತ್ತು ಪುತ್ರ ಪ್ರಸಾದ್ 5 ಎಕರೆ ಜಾಗ ಒತ್ತುವರಿ ಮಾಡಿ ತಂತಿ ಬೇಲಿ ನಿರ್ಮಿಸಿದ್ದರು. ಕೊಡ್ಲಿಪೇಟೆಯ ಕಂದಾಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲಿಸಿ ಬೇಲಿ ತೆರವುಗೊಳಿಸಿದ್ದರು. ಇದೀಗ ಪುನಃ ಅದೇ ಜಾಗದಲ್ಲಿ ಅಪ್ಪ ಮಗ ಕಾಫಿ ಗಿಡಗಳನ್ನು ನೆಟ್ಟಿದ್ದಾರೆ ಎಂದು ಮಾದ್ರೆ ದಂಡಳ್ಳಿ ಹೊಸಳ್ಳಿ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಳ್ಳು ದಾಖಲೆ ಸೃಷ್ಟಿಸಿ 53 ಅಡಿ ಜಾಗ ತಮಗೆ ಕಳೆದ ವರ್ಷ ಮಂಜೂ ರಾಗಿದೆ ಎಂದು ಅಪ್ಪ ಚಂದ್ರಪ್ಪ, ಮಗ ಪ್ರಸಾದ್ ತಿಳಿಸುತ್ತಾರೆ. ಆದರೆ ಮಂಜೂರಾಗಿರುವ ಜಾಗ ಪಕ್ಕದ ಜಾಗ ಜಯಪ್ಪ ಅವರ ತೋಟವಾಗಿವೆ. ಸರ್ವೆಯರ್ ಮಹದೇವಗೌಡ ಅವರನ್ನು ನಂಬಿಸಿ ತಮ್ಮ ಜಾಗವೆಂದು ಅಳತೆ ಮಾಡಿಸಲಾಗಿದೆ.

(ಮೊದಲ ಪುಟದಿಂದ) ಆರ್.ಟಿ.ಸಿ ಯಲ್ಲಿ ಚಂದ್ರಪ್ಪ ಎಂದು ದಾಖಲಾಗಿದೆ. ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಅರಣ್ಯ ಇಲಾಖೆಯವರು ಗ್ರಾಮಾಭಿವೃದ್ದಿ ಸಮಿತಿ ಅಧ್ಯಕ್ಷ ಶಶಿಶೇಖರ್, ಉಪಾಧ್ಯಕ್ಷ ಎಂ. ಕೆ. ಧರ್ಮಪ್ಪ, ಗ್ರಾ.ಪಂ. ಸದಸ್ಯರಾದ ಎಂ.ಸಿ. ಹೂವಣ್ಣ, ಎಂ.ಆರ್. ಸಂದೇಶ್, ಗ್ರಾಮ ಪ್ರಮುಖರಾದ ಎಂ.ಈ. ವಸಂತ್, ಎಂ.ಆರ್. ಪುರುಷೋತ್ತಮ್, ನಾಗರಾಜ್, ಪ್ರಭುಸ್ವಾಮಿ, ಎಂ.ಈ. ನಾಗರಾಜ್, ಎಂ.ಈ. ಕುಟ್ಟಪ್ಪ ಇತರರು ಆಗ್ರಹಿಸಿದ್ದಾರೆ.