ಗೋಣಿಕೊಪ್ಪಲು,ಜು.11: ಬಾಳೆಲೆ ಸಮೀಪ ಕೊಟ್ಟಗೇರಿ ಗ್ರಾಮದಲ್ಲಿ ಹೆಬ್ಬುಲಿಯೊಂದು ಗ್ರಾಮಸ್ಥರಿಗೆ ನಿತ್ಯದರ್ಶನ ನೀಡುತ್ತಿದ್ದು, ಹುಲಿಯನ್ನು ಅರಣ್ಯಕ್ಕೆ ಅಟ್ಟುವ ಅಥವಾ ಸೆರೆ ಹಿಡಿಯುವ ಯಾವ ಪ್ರಯತ್ನವನ್ನೂ ಅರಣ್ಯ ಇಲಾಖೆ ಮಾಡುತ್ತಿಲ್ಲವೆಂದು ಅಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.ಕೊಟ್ಟಗೇರಿ ವ್ಯಾಪ್ತಿಯಲ್ಲಿ ಸಣ್ಣ ಹಿಡುವಳಿದಾರರು ಅಧಿಕವಿದ್ದು ಕಳೆದ ಒಂದು ವಾರದಿಂದ ಹುಲಿರಾಯನ ನಿತ್ಯದರ್ಶನವಾಗುತ್ತಿದೆ ಎಂದು ಭಯಭೀತಗೊಂಡಿರುವ ಕೃಷಿಕರು ಮಾಹಿತಿ ನೀಡಿದ್ದಾರೆ.ಮಾಚಂಗಡ ಅನಿತಾ ಅವರು ಕೊಟ್ಟಗೇರಿ ನಿವಾಸಿಯಾಗಿದ್ದು, ಇಂದು ಬೆಳಿಗ್ಗೆ 7 ಗಂಟೆಗೆ ತಮ್ಮ ತೋಟದಲ್ಲಿ ಕಾರ್ಮಿಕರೊಂದಿಗೆ ಅಣಬೆ ಹುಡುಕುತ್ತಾ ತೆರಳುತ್ತಿದ್ದ ಸಂದರ್ಭ ಹುಲಿಯನ್ನು ಪ್ರತ್ಯಕ್ಷ ನೋಡಿರುವದಾಗಿ ತಿಳಿಸಿದ್ದಾರೆ. ಹುಲಿಯು ಕಾಫಿ ತೋಟದ ಹಾದಿಯಲ್ಲಿ ಮರೆಯಾಗಿದ್ದು, ಈವರೆಗೆ ಯಾವದೇ ರಾಸುಗಳು, ಹಂದಿ ಇತ್ಯಾದಿ ಸಾಕುಪ್ರಾಣಿಗಳನ್ನು ಬೇಟೆ ಆಡಿರುವ ಪ್ರಕರಣ ಬೆಳಕಿಗೆ ಬಂದಿಲ್ಲ. ತಮ್ಮ ಕೊಟ್ಟಿಗೆಯಲ್ಲಿ ಎರಡು ಹಸುಗಳಿದ್ದು ಈವರೆಗೂ ದಾಳಿ ಮಾಡಿಲ್ಲ. ಆದರೆ, ದಿನನಿತ್ಯ ಅಲ್ಲಲ್ಲಿ ಕಾಫಿ ತೋಟದ

(ಮೊದಲ ಪುಟದಿಂದ) ನಡುವೆ ಹುಲಿಯು ಕಣ್ಣಿಗೆ ಬೀಳುತ್ತಿರುವದರಿಂದ ಗ್ರಾಮಸ್ಥರಲ್ಲಿ ಭಯ ಮನೆ ಮಾಡಿದೆ ಎಂದು ತಿಳಿಸಿದ್ದಾರೆ.

ಸಮೀಪದ ಮೇಚಂಡ ಸಾಬು ಮಂದಣ್ಣ, ಮಚ್ಚಾಮಾಡ ಸತೀಶ್ ಅವರುಗಳೂ ಹುಲಿಯನ್ನು ವೀಕ್ಷಣೆ ಮಾಡಿದ್ದು ಭಾರೀ ಗಾತ್ರದ ಹುಲಿಯಾಗಿದೆ ಎಂದು ಹೇಳಿದ್ದಾರೆ. ಹುಲಿಯ ಭಯದಿಂದ ಕಾರ್ಮಿಕರೂ ಇತ್ತ ಕೆಲಸಕ್ಕೆ ಬರುತ್ತಿಲ್ಲ. ರಾತ್ರಿ ಓಡಾಟವೂ ಸ್ಥಗಿತವಾಗಿದೆ ಎಂದು ಅನಿತಾ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರೂ, ಬೋನನ್ನು ಇಟ್ಟು ಸೆರೆ ಹಿಡಿಯುವದು ಅಥವಾ ಕಾಡಿಗೆ ಅಟ್ಟುವ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಕೇವಲ ಹುಲಿಯ ಹೆಜ್ಜೆಯ ಫೆÇೀಟೋವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ. ಕಳೆದ ಒಂದು ವಾರದಿಂದ ಹುಲಿಯ ದರ್ಶನವಾಗುತ್ತಿದ್ದು ಎಲ್ಲಿಯಾದರೂ ದಾಳಿ ಮಾಡಬಹುದು ಎಂಬ ಭಯ ಅಲ್ಲಿನ ಗ್ರಾಮಸ್ಥರಲ್ಲಿ ಮನೆಮಾಡಿದೆ. ಈ ಬಗ್ಗೆ ವನ್ಯಜೀವಿ ವಿಭಾಗದ ಇಲಾಖಾಧಿಕಾರಿಗಳು ತುರ್ತು ಸ್ಪಂದಿಸಿ, ಹುಲಿಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ. - ಟಿ.ಎಲ್.ಶ್ರೀನಿವಾಸ್