ಮಡಿಕೇರಿ, ಜು. 11: ಈ ಹಿಂದಿನ ಹಲವು ವರ್ಷಗಳ ಕೊಡಗಿಗೂ ಪ್ರಸ್ತುತದ ಸನ್ನಿವೇಶಕ್ಕೂ ತುಲನೆ ಮಾಡಿದಲ್ಲಿ ಜಿಲ್ಲೆಯ ವಾತಾವರಣ ಬಹುತೇಕ ಬುಡಮೇಲಾಗಿರುವ ಆತಂಕಕಾರಿ ಪರಿಸ್ಥಿತಿ ಮೇಲ್ನೋಟಕ್ಕೆ ಅರಿವಾಗುತ್ತಿದೆ. ಈ ವೇಳೆಗೆ ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿತ್ತು. ನಿರಂತರ ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಪ್ರವಾಹ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯ ಅನಿವಾರ್ಯತೆಯ ನಡುವೆ ಸೂರ್ಯನ ಕಿರಣಗಳೇ ಜಿಲ್ಲೆಯಲ್ಲಿ ತಿಂಗಳುಗಟ್ಟಲೇ ಗೋಚರವಾಗುತ್ತಿರಲಿಲ್ಲ. ಆಗಿನ ವಾತಾವರಣಕ್ಕೂ ಈಗಿನ ವಾತಾವರಣಕ್ಕೂ ಅಜಗಜಾಂತರ ವ್ಯಾತ್ಯಾಸ ಕಂಡುಬರುತ್ತಿದೆ. ನಿರಂತರ ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಜಲದ ಬುಗ್ಗೆಗಳು ಪುಟಿದೇಳುವದರೊಂದಿಗೆ ನದಿ, ತೊರೆಗಳು ತುಂಬಿ ಹರಿಯುತ್ತಿದ್ದವು. ಆದರೆ...

ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಈ ಚಿತ್ರಣ ಕಂಡುಬರುತ್ತಿಲ್ಲ... ಒಂದು ರೀತಿಯಲ್ಲಿ ಕೊಡಗಿನ ನೈಜ ಮಳೆಗಾಲದ ಅರಿವೇ ಆಗದಂತಹ ರೀತಿಯಲ್ಲಿ ಮಳೆಗಾಲದ ಅವಧಿ ಮುಗಿದು ಹೋಗುತ್ತಿದೆ. ಸತತ ಮೂರು ವರ್ಷಗಳಿಂದ ಜಿಲ್ಲೆ ಬರಗಾಲದ ಛಾಯೆಯಲ್ಲಿದ್ದು, ಈ ವರ್ಷದ ಚಿತ್ರಣವೂ ಮತ್ತಷ್ಟು ಆತಂಕ ಮೂಡಿಸುತ್ತಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಅಂತರ್‍ಜಲದ ಮಟ್ಟ ದಿನೇ ದಿನೇ ಪಾತಾಳಕ್ಕಿಳಿ ಯುತ್ತಿರುವದು ಜಿಲ್ಲೆಗೆ ಆಘಾತಕಾರಿಯಾಗಿದೆ.

ಜುಲೈ ತಿಂಗಳು ಮಳೆಗಾಲದ ಅಬ್ಬರದ ಸಮಯ. ಇದೀಗ ಜುಲೈ 12 ತಲುಪಿದರೂ ಮೋಡ ಮುಸುಕಿದ ವಾತಾವರಣ ಆಗೊಮ್ಮೆ... ಈಗೊಮ್ಮೆ ಸುರಿಯುವ ಮಳೆ ಹೊರತುಪಡಿಸಿದರೆ ನೈಜತೆಯ ಮಳೆ-ಗಾಳಿ ಇಲ್ಲದೆ ಬೇಸಿಗೆಯ ಸಂದರ್ಭದಂತೆಯೇ ವಾತಾವರಣವಿದೆ. ಜಿಲ್ಲೆಯಲ್ಲಿ ಜಲ ಏಳದಿದ್ದರೆ ಬೇಸಿಗೆಯ ಅವಧಿಯಲ್ಲಿ ನೀರಿಗಾಗಿ ಹಾಹಾಕಾರ ಖಚಿತ. ಕಳೆದ ವರ್ಷವೂ ಹಿಂದಿನಂತೆ ಜಲ ಎದ್ದ ನಿದರ್ಶನ ಇಲ್ಲ. ಈ ಬಾರಿಯೂ ಅದೇ ಪರಿಸ್ಥಿತಿ ಎದುರಾಗಿದೆ. ಮೃಗಶಿರಾ, ಆದ್ರ್ರಾ, ಮಳೆ ನಕ್ಷತ್ರ ಮುಗಿದಿದ್ದು, ಪುನರ್‍ವಸು ಕೂಡ ಮುಕ್ತಾಯದ ಹಂತ ತಲುಪುತ್ತಿದೆ.

(ಮೊದಲ ಪುಟದಿಂದ) ಜಿಲ್ಲೆಯಲ್ಲಿ ಸುರಿಯುತ್ತಿರುವ ಈಗಿನ ಮಳೆ ಕೇವಲ ಅಂಕಿ ಅಂಶದ ದಾಖಲೆಗಷ್ಟೇ ಸೀಮಿತವಾಗುತ್ತಿದ್ದು, ಜಿಲ್ಲೆಯ ಭೌಗೋಳಿಕ ಪರಿಸ್ಥಿತಿಗೆ ಅಗತ್ಯವಾಗುವಂತಹ ರೀತಿಯಲ್ಲಿ ಮಳೆಯಾಗದಿರುವದು ಆತಂಕಕಾರಿ ಯಾಗಿದೆ.

ಮಳೆಗಾಲದಲ್ಲೇ ಕುಡಿಯುವ ನೀರಿಲ್ಲ...

ಜಿಲ್ಲೆಯ ಹಲವಾರು ಭಾಗಗಳಲ್ಲಿ ಮಳೆಗಾಲದ ಈ ಅವಧಿಯಲ್ಲೇ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಅದರಲ್ಲೂ ದಕ್ಷಿಣ ಕೊಡಗಿನಲ್ಲಿ ಈ ಸಮಸ್ಯೆ ಅಧಿಕವಾಗಿದೆ. ಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದು, ನೀರಿಗಾಗಿ ಹಾಹಾಕಾರ ಉಂಟಾಗುತ್ತಿದೆ. ಗೋಣಿಕೊಪ್ಪಲು, ಪೊನ್ನಂಪೇಟೆ, ಬೆಕ್ಕೆಸೊಡ್ಲೂರು, ಕಾನೂರು, ಕೋತೂರು, ಬಾಳೆಲೆ, ನಿಟ್ಟೂರು, ಮಲ್ಲೂರು, ಅಮ್ಮತ್ತಿ, ಬಿಳುಗುಂದ, ಹೊಸೂರು, ಕಾವಾಡಿ, ಕಳತ್ಮಾಡು ಮತ್ತಿತರ ಕೆಲವು ಕಡೆಗಳಲ್ಲಿ ಇನ್ನೂ ಕುಡಿಯುವ ನೀರು ಸಂಗ್ರಹವಾದಂತಿಲ್ಲ. ಕೆಲವೆಡೆ ಬಾವಿಗಳು ಪೂರ್ಣ ಬತ್ತಿ ಹೋಗಿದ್ದರೆ, ಇನ್ನು ಹಲವೆಡೆಗಳಲ್ಲಿ ನೀರಿನ ಕೊರತೆಯಿಂದ ಬಾವಿಯಲ್ಲಿ ಮೋಟಾರು ಅಳವಡಿಸಿದ್ದರೂ ಅದನ್ನು ಚಾಲನೆ ಮಾಡಲು ಸಾಧ್ಯವಿಲ್ಲದಂತಾಗಿದೆ.

ಪೊನ್ನಂಪೇಟೆ ಪಂಚಾಯಿತಿಯ 6 ವಾರ್ಡ್‍ಗಳಲ್ಲೂ ನೀರಿಗೆ ಸಮಸ್ಯೆ ಕಂಡುಬಂದಿದೆ. ಬಾವಿಗಳಲ್ಲಿ ಇರುವ ನೀರು ದಿನೇ ದಿನೇ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ 13 ಸಾರ್ವಜನಿಕ ಬಾವಿಗಳಿಗೆ ತಲಾ 6 ಬುಷ್ ಅಳವಡಿಸಲಾಗಿದೆ. 3 ಕೊಳವೆ ಬಾವಿ ತೆಗೆಯಲಾಗಿದ್ದು, ಒಂದರಲ್ಲಿ 450 ಅಡಿಯಲ್ಲಿ 4 ಇಂಚು ನೀರು ಸಿಕ್ಕಿದೆ. 600 ಅಡಿ ಆಳದ ಮತ್ತೊಂದು ಕೊಳವೆ ಬಾವಿಯಲ್ಲಿ ಕೇವಲ ಒಂದೂವರೆ ಇಂಚು ನೀರು ಸಕ್ಕಿದ್ದರೆ ಮತ್ತೊಂದು ಕೊಳವೆ ಬಾವಿ 600 ಅಡಿಗೂ ಅಧಿಕ ಆಳ ತೆಗೆದರೂ ನೀರೇ ಸಿಗದೆ ವಿಫಲತೆ ಕಂಡಿರುವದಾಗಿ ಪ್ರಬಾರ ಪಿ.ಡಿ.ಓ. ಅಬ್ದುಲ್ಲಾ ಮಾಹಿತಿ ನೀಡಿದ್ದಾರೆ.

ವೈಯಕ್ತಿಕವಾಗಿಯೂ ಜನರು ಬಾವಿಗೆ ಆಳವಾಗಿ ಬುಷ್ ಹಾಕಿಸುತ್ತಿದ್ದಾರೆ. ಪಂಚಾಯಿತಿಯಿಂದ ಎರಡು ಅಥವಾ ಮೂರು ದಿನಕೊಮ್ಮೆ ನಲ್ಲಿಯಲ್ಲಿ ನೀರು ಬಿಡಲಾಗುತ್ತಿದೆ. ಬೆಕ್ಕೆಸೂಡ್ಲೂರು ಗ್ರಾಮದ ಮಲ್ಲಮಾಡ ಈಶ್ವರ, ಪ್ರಕಾಶ್, ಸುನಿಲ್ ಅವರುಗಳಿಗೆ ಸೇರಿದ ಬಾವಿಯಲ್ಲಿ ಜನವರಿ ತಿಂಗಳಲ್ಲಿ ನೀರು ಬತ್ತಿ ಹೋಗಿದ್ದು, ಈತನಕವೂ ನೀರು ಸೇರ್ಪಡೆಯಾಗಿಲ್ಲ ಎಂದು ಸ್ಥಳೀಯರಾದ ಎಂ.ಎಂ. ರವೀಂದ್ರರವರು ಮಾಹಿತಿ ನೀಡಿದ್ದಾರೆ. ಪೊನ್ನಂಪೇಟೆ ವಿಭಾಗದಲ್ಲಿ ಕಳೆದ ನಾಲ್ಕು ವರ್ಷದಿಂದ ನೀರಿಗೆ ಸಮಸ್ಯೆ ಎದುರಾಗುತ್ತಿರುವದಾಗಿ ಅಬ್ದುಲ್ಲಾ ತಿಳಿಸಿದರು.

ಅಮ್ಮತ್ತಿ ವಿಭಾಗದ ಗ್ರಾಮಗಳಲ್ಲೂ ಶೇ. 60ಕ್ಕಿಂತ ಹೆಚ್ಚು ಜನರು ನೀರಿಗಾಗಿ ಆತಂಕ ಎದುರಿಸುವಂತಾಗಿದೆ ಎಂದು ಸ್ಥಳೀಯರಾದ ಮೂಕೋಂಡ ಬೋಸ್ ದೇವಯ್ಯ ಅನುಭವ ಹಂಚಿಕೊಂಡಿದ್ದಾರೆ. ಈ ವಿಭಾಗಗಳು ಮಾತ್ರವಲ್ಲದೆ ಸುಂಟಿಕೊಪ್ಪ, ಸಿದ್ದಾಪುರ, ವಾಲ್ನೂರು, ಮತ್ತೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿಯೂ ಈ ಸಮಸ್ಯೆ ಉದ್ಭವಿಸುತ್ತಿದೆ. ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನಲ್ಲಿ ಕೃಷಿ ಚಟುವಟಿಕೆಗೂ ಈಗಿನ ಮಳೆಗಾಲದಿಂದ ವ್ಯತಿರಿಕ್ತ ಪರಿಣಾಮ ಎದುರಾಗುತ್ತಿದೆ.