ಮಡಿಕೇರಿ, ಜು. 11: ಪತ್ನಿಯ ಮೇಲೆ ಸಂಶಯ ವ್ಯಕ್ತಪಡಿಸಿ ಆಕೆಯನ್ನು ಹತ್ಯೆಗೈದ ಪತಿರಾಯನಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮೂಲತಃ ವಾಲ್ನೂರು - ತ್ಯಾಗತ್ತೂರು ಗ್ರಾಮದ ಬಾಳೆಗುಂಡಿ ನಿವಾಸಿಗಳಾದ ಜೇನುಕುರುಬರ ಚಂದ್ರ ಹಾಗೂ ಪತ್ನಿ ಜಯ ಇವರುಗಳು ನಾಪೋಕ್ಲು ಬಳಿಯ ಕೋಕೇರಿ ಗ್ರಾಮದ ಪಿ.ಎ. ಪಳಂಗಪ್ಪ ಎಂಬವರ ತೋಟದಲ್ಲಿ ಕೆಲಸ ಮಾಡಿಕೊಂಡು ಲೈನ್‍ಮನೆಯಲ್ಲಿ ವಾಸವಿದ್ದರು. ಕಳೆದ ತಾ. 27.6. 2016 ರಂದು ಚಂದ್ರ ತನ್ನ ಪತ್ನಿ ಜಯ ಬೇರೆ ಗಂಡಸರೊಂದಿಗೆ ಸಲಿಗೆಯಿಂದ ಇರುವದನ್ನು ಕಂಡ ಆಕೆಯನ್ನು ಪ್ರಶ್ನಿಸಿದ್ದಾನೆ. ಅದಕ್ಕೆ ಆಕೆ ಆತನನ್ನು ನಿಂದಿಸಿದ್ದಾಳೆ. ಇದರಿಂದ ಕುಪಿತನಾದ ಚಂದ್ರ ರಾತ್ರಿ ವೇಳೆ ಆಕೆಯ ಮೇಲೆ ಹಲ್ಲೆ ನಡೆಸಿ, ಸೌದೆಯಿಂದ ಹೊಡೆದು ಸಾಯಿಸಿ ಪರಾರಿಯಾಗಿದ್ದ. ಈ ಬಗ್ಗೆ ದೊರೆತ ಪುಕಾರಿನ ಮೇರೆಗೆ ತನಿಖೆ ನಡೆಸಿದ ನಾಪೋಕ್ಲು ಪೊಲೀಸರು ಚಂದ್ರನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಕುರಿತು ವಿಚಾರಣೆ ನಡೆಸಿದ ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀರಾದ ಪವನೇಶ್ ಡಿ. ಅವರು ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ, ರೂ. 5 ಸಾವಿರ ದಂಡ ಪಾವತಿಸುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ವಾದ ಮಂಡಿಸಿದರು.