ಸೋಮವಾರಪೇಟೆ, ಜು. 11: ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿ ದಂತೆ ಸೋಮವಾರಪೇಟೆ ತಾಲೂಕಿನಲ್ಲಿ 6,600ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಬೆಳೆಗಾರರಿಗೆ ಪರಿಹಾರ ನೀಡಲು ಸುಮಾರು 4ಕೋಟಿ ರೂ. ಅನುದಾನ ಬೇಕಾಗಿದೆ ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್ ಮಾಹಿತಿ ನೀಡಿದರು.

ತಾಲೂಕು ಕಾಫಿ ಬೆಳೆಗಾರರ ಸಂಘದ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಏರ್ಪಡಿಸ ಲಾಗಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಗಿರೀಶ್ ಅವರು ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪ್ರತಿಯೋರ್ವ ಬೆಳೆಗಾರರು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡ ಬೇಕು. ಬೆಳೆಹಾನಿಗೆ ಸಂಬಂಧಿಸಿದಂತೆ ಇದುವರೆಗೂ 6600 ಅರ್ಜಿಗಳು ಸ್ವೀಕಾರವಾಗಿದೆ ಎಂದು ಸಭೆಗೆ ತಿಳಿಸಿದ ಮೇರೆ, ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ಮುರಳೀಧರ್ ಮೇಲಿನಂತೆ ಮಾಹಿತಿ ನೀಡಿದರು.

ಕಾಫಿ ಮಂಡಳಿಯಿಂದ ದೊರಕುವ ಸೌಲಭ್ಯಗಳು ಕಾರ್ಯಯೋಜನೆಗಳ ಕುರಿತು ಮುಂದಿನ ದಿನಗಳಲ್ಲಿ ಎಲ್ಲಾ ಬೆಳೆಗಾರರಿಗೆ ವಾಟ್ಸ್‍ಅಪ್ ಮೂಲಕ ಮಾಹಿತಿ ನೀಡಲಾಗುವದು. ಪ್ರತಿಯೊಬ್ಬರು ತಮ್ಮ ಮೊಬೈಲ್ ಸಂಖ್ಯೆಯನ್ನು ಕಚೇರಿಯಲ್ಲಿ ದಾಖಲಿಸಬೇಕೆಂದು ಮುರಳೀಧರ್ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ಮಾತನಾಡಿ, ಬೃಹತ್ ಉದ್ಯಮಿಗಳ ಬದಲು ಸಣ್ಣ ಬೆಳೆಗಾರರಿಗೆ ಕಾಫಿ ಸಬ್ಸಿಡಿಯನ್ನು ನೀಡುವಂತಾಗ ಬೇಕೆಂದು ಆಗ್ರಹಿಸಿದರು.

ಕಾಫಿ ಬೆಳೆಗಾರರ ಬದುಕು ಇಂದು ಶೋಚನೀಯವಾಗಿದ್ದು ಬೆಳೆಗಾರರು ತಮಗೆ ದೊರಕಬೇಕಾದ ಸವಲತ್ತುಗಳಿಗೆ ಕಾಫಿ ಮಂಡಳಿಯತ್ತ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಫಿ ಸಬ್ಸಿಡಿಯನ್ನು ಸಣ್ಣ ಬೆಳೆಗಾರರಿಗೆ ನೇರವಾಗಿ, ಕೆರೆ, ಇಂಗುಗುಂಡಿ, ಸಲಕರಣೆ, ಯಂತ್ರೋಪಕರಣಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಕಾಫಿ ಬೆಳೆಗಾರರಿಗೆ ಮಾರಕವಾಗಿ ರುವ ಬಿಳಿಕಾಂಡಕೊರಕ ರೋಗವನ್ನು ನಿಯಂತ್ರಿಸಲು ಕಾಫಿ ಮಂಡಳಿ ಅಧಿಕಾರಿಗಳು ಬೆಳೆಗಾರರ ತೋಟ ಇರುವ ಸ್ಥಳಕ್ಕೆ ಬೇಟಿ ನೀಡಿ ಸಮಸ್ಯೆ ಪರಿಹರಿಸಲು ಮುಂದಾಗ ಬೇಕು ಎಂದರು. ಜಿಲ್ಲೆಯ ಕಾಫಿ ತೋಟಗಳಲ್ಲಿನ ಮಣ್ಣು ಪರೀಕ್ಷೆಗೆ ಸಂಚಾರ ಮಣ್ಣು ಪರೀಕ್ಷಾ ಘಟಕ ನಿಯೋಜನೆ ಮಾಡಬೇಕೆಂದು ಬೆಳೆಗಾರ ಕೆ.ಎಂ.ಲಕ್ಷ್ಮಣ್ ಸಭೆಯಲ್ಲಿ ಮನವಿ ಮಾಡಿದರು.

ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿಗಳು ಕೇವಲ ಆಯ್ದ ಬೆಳೆಗಾರರ ತೋಟಕ್ಕೆ ಮಾತ್ರ ಭೇಟಿ ನೀಡುತ್ತಾರೆ ಎಂದು ಕಾಫಿ ಬೆಳೆಗಾರ ಶುಭಕರ್ ಆರೋಪಿಸಿದರು. ಕಾಫಿ ಮಂಡಳಿಯಿಂದ ಬೆಳೆಗಾರರಿಗೆ ಯಾವದೇ ಸೌಲಭ್ಯಗಳು ಸಿಗುತ್ತಿಲ್ಲ. ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ ಎಂದು ಶಾಂತಳ್ಳಿ ಬೆಳೆಗಾರ ರಾಜಪ್ಪ ದೂರಿದರು.

ಕಾಫಿ ಬೆಳೆಗಾರರಿಗೆ ಸಂಬಂಧಿಸಿ ದಂತೆ ಬಹುತೇಕ ಪ್ರಕರಣದಲ್ಲಿ ಮೂಲ ಕಡತಗಳೇ ಲಭ್ಯವಿರುವದಿಲ್ಲ. ಇದರಿಂದ ತೊಂದರೆಯಾಗುತ್ತಿದೆ ಎಂದು ತಹಸೀಲ್ದಾರ್ ಮಹೇಶ್ ಸಭೆಗೆ ತಿಳಿಸಿದರು. ಸಾರ್ವಜನಿಕರ ಅನುಕೂಲಕ್ಕಾಗಿ ಆರ್‍ಟಿಸಿ ವಿತರಿಸಲು ಅಟಲ್‍ಜೀ ಕೇಂದ್ರದಲ್ಲಿ ಮತ್ತೊಂದು ಕೌಂಟರ್ ತೆರೆಯಲಾಗುತ್ತದೆ ಎಂದರು.

ಅಕ್ರಮ ಸಕ್ರಮ ಸಮಿತಿ ಸಭೆ ಸಮರ್ಪಕವಾಗಿ ನಡೆಯುತ್ತಿಲ್ಲ. ಬಂದೂಕು ಪರವಾನಗಿ ನವೀಕರಣ ಶುಲ್ಕ 50 ರೂ.ಗಳಿಂದ 1500ರೂ. ಗಳವರೆಗೆ ಏಕಾಏಕಿ ಏರಿಸಿದ್ದಾರೆ. ಸರ್ಕಾರ ಎಲ್ಲಾ ಕೆಲಸಗಳಿಗೆ ಆನ್‍ಲೈನ್ ಅರ್ಜಿ ಎಂದು ಹೇಳುತ್ತಿದೆ. ಆದರೆ, ತಾಲೂಕು ಕಚೇರಿಯಲ್ಲಿ ಪ್ರತಿಯೊಂದು ಕೆಲಸಕ್ಕೂ ಹಣ ನೀಡಬೇಕಾಗಿದೆ ಎಂದು ಬೆಳೆಗಾರರು ಸಭೆಯಲ್ಲಿ ಆರೋಪಿಸಿದರು.

ಸೋಮವಾರಪೇಟೆ ಪಟ್ಟಣದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ವಾರಕ್ಕೊಮ್ಮೆ ಪಟ್ಟಣಕ್ಕೆ ಬರುವ ಬೆಳೆಗಾರರಿಗೆ ವಾಹನ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಪಟ್ಟಣದಲ್ಲಿ ಹಳದಿ ಬೋರ್ಡ್ ವಾಹನಗಳ ಬದಲಾಗಿ ಖಾಸಗಿ ವಾಹನಗಳು ನಿಲುಗಡೆ ಸ್ಥಳದಲ್ಲಿ ಇರುತ್ತವೆ. ಪಟ್ಟಣ ಪಂಚಾಯಿತಿ ಮಾರುಕಟ್ಟೆಯ ಒಳಗೆ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಕಾಫಿ ಬೆಳೆÀಗಾರ ಎಸ್.ಬಿ.ಭರತ್ ಕುಮಾರ್ ಮನವಿ ಮಾಡಿದರು.

ಕೃಷಿ ಇಲಾಖೆ ಅಧಿಕಾರಿ ಮುಕುಂದ್, ಡಿವೈಎಸ್‍ಪಿ ಸಂಪತ್ ಕುಮಾರ್, ಸಂಬಾರ ಮಂಡಳಿ ಅಧಿಕಾರಿ ವಾಸು, ವಲಯಾರಣ್ಯಾಧಿ ಕಾರಿ ಮೊಹಸ್ಸೀನ್ ಭಾಷ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಬೆಳೆಗಾರರಿಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ವೃತ್ತನಿರೀಕ್ಷಕ ಪರಶಿವಮೂರ್ತಿ, ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಎಡದಂಟೆ ಲವ, ತಾಕೇರಿ ಪ್ರಕಾಶ್, ಬಸಪ್ಪ, ಲಕ್ಷ್ಮಣ್ ಮತ್ತಿತರರು ಇದ್ದರು.