ಗೋಣಿಕೊಪ್ಪಲು, ಜು. 11: ಭ್ರಷ್ಟಾಚಾರದ ವಿರುದ್ಧ ಯುವ ಜನತೆ ಹೋರಾಟಕ್ಕೆ ಅಣಿಯಾಗುವ ಅನಿವಾರ್ಯತೆ ಇದೆ ಎಂದು ರೋಟರಿ 3180 ಜಿಲ್ಲಾ ಮಾಜಿ ರಾಜ್ಯಪಾಲ ಸೂರ್ಯ ಪ್ರಕಾಶ್ ಭಟ್ ಅಭಿಪ್ರಾಯಪಟ್ಟರು.

ಇಲ್ಲಿನ ಪರಿಮಳ ಮಂಗಳ ವಿಹಾರದಲ್ಲಿ ನಡೆದ ಗೋಣಿಕೊಪ್ಪ ರೋಟರಿ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಲಾಖೆಗಳಲ್ಲಿ ನಮ್ಮ ಕಾರ್ಯಗಳು ತುರ್ತಾಗಿ ನಡೆಯಬೇಕು ಎಂಬ ಕಾರಣಕ್ಕೆ ಬೇರೆ ಮಾರ್ಗವನ್ನು ನಾವೇ ಹುಡುಕುತ್ತೇವೆ. ತುರ್ತು ವಿಲೇವಾರಿಗಾಗಿ ತಾಳ್ಮೆ ಕಳೆದುಕೊಂಡು ಸಿಬ್ಬಂದಿಗಳಿಗೆ ಲಂಚ ನೀಡುವ ಮೂಲಕ ನಾವು ಭ್ರಷ್ಟಾಚಾರಕ್ಕೆ ಪ್ರಚೋದÀನೆ ಕೊಡುತ್ತಿದ್ದೇವೆ. ಇದು ಸರಿಯಲ್ಲ ನಾವು ಬದಲಾಗುವ ಮೂಲಕ ಭ್ರಷ್ಟಾಚಾರದ ವಿರುದ್ಧ ಕಾರ್ಯನಿರ್ವಹಿಸಲು ಯುವ ಪಡೆ ಹೋರಾಟ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ನೂತನವಾಗಿ ಅಧ್ಯಕ್ಷ ಸ್ಥಾನ ಪಡೆದುಕೊಂಡ ಮಚ್ಚಮಾಡ ಬಿ. ವಿಜಯ್ ಹಾಗೂ ಪ್ರ. ಕಾರ್ಯದರ್ಶಿ ದಿಲನ್ ಚೆಂಗಪ್ಪ ಅವರುಗಳು ಪದಗ್ರಹಣ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಟಿ.ಎಂ. ಕಾವೇರಮ್ಮ, ಜಂಟಿ ಕಾರ್ಯದರ್ಶಿಯಾಗಿ ರಾಮಕೃಷ್ಣ ಹೆಗಡೆ, ಖಜಾಂಜಿಯಾಗಿ ರಾಜಶೇಖರ್, ಸಾರ್ಜೆಂಟ್ ಆಗಿ ವಾಸು ಉತ್ತಪ್ಪ ಅವರುಗಳು ಅಧಿಕಾರ ವಹಿಸಿಕೊಂಡರು.

ಈ ಸಂದರ್ಭ ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಆಟಗಾರ್ತಿ ಕರ್ತಮಾಡ ಕಾಳಪ್ಪ ಪೂವಮ್ಮ ಹಾಗೂ ಎಸೆಸೆಲ್ಸಿಯಲ್ಲಿ ಶೇ. 98.4 ಅಂಕ ಪಡೆದ ಎಂ ಎಸ್ ಮಹಮದ್ ಜಿಯಾದ್ ಅವರುಗಳನ್ನು ಸನ್ಮಾನಿಸಲಾಯಿತು.

ಅತಿಥಿಗಳಾಗಿ ರೋಟರಿ ಸಹಾಯಕ ರಾಜ್ಯಪಾಲ ಮಹೇಶ್ ನಾಲ್ವಾಡೆ, ವಲಯ ಲೆಫ್ಟಿನೆಂಟ್ ಪಿ ಎನ್ ಹರಿಶಂಕರ್ ಪ್ರಸಾದ್ ಉಪಸ್ಥಿತರಿದ್ದರು. ಕೊಡಗು, ಪಿರಿಯಾಪಟ್ಟಣ ಸೇರಿದಂತೆ ಹೊರ ಜಿಲ್ಲೆಗಳ ರೋಟರಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಅಧ್ಯಕ್ಷ ಟಿ.ಯು. ನರೇಂದ್ರ ಸ್ವಾಗತಿಸಿದರು. ಕಾರ್ಯದರ್ಶಿ ನೆವಿನ್ ವಾರ್ಷಿಕ ವರದಿ ವಾಚಿಸಿದರು. ಎಂ.ಕೆ. ದೀನಾ, ಬೀಟಾ ಲಕ್ಷ್ಮಣ್ ಹಾಗೂ ಕಾವೇರಮ್ಮ ಅವರುಗಳು ಅತಿಥಿಗಳ ಪರಿಚಯ ಮಾಡಿದರು.