ಕುಶಾಲನಗರ, ಜು. 11: ಮುಳ್ಳುಸೋಗೆ ಗ್ರಾಮದ ಜನತಾ ಕಾಲೋನಿಯಲ್ಲಿ ಸ್ಥಳೀಯರ ವಿರೋಧದ ನಡುವೆ ತೆರೆದಿರುವ ಮದ್ಯ ದಂಗಡಿಯನ್ನು ಮುಚ್ಚಿಸಬೇಕೆಂದು ಸ್ಥಳೀಯ ನಿವಾಸಿಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಘಟನೆ ನಡೆಯಿತು.ಗ್ರಾಮದ ಬಡಾವಣೆಯಲ್ಲಿ ನೂತನವಾಗಿ ಆರಂಭಿಸಿರುವ ಮದ್ಯದಂಗಡಿಗೆ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯ ನಿವಾಸಿಗಳು, ಮಂಗಳವಾರ ಬಾರ್ ಮುಂಭಾಗ ರಸ್ತೆ ತಡೆ ನಡೆಸಿ ತೆರೆದಿರುವ ಬಾರ್ ಅನ್ನು ತಕ್ಷಣ ಮುಚ್ಚಿಸಬೇಕೆಂದು ಪಟ್ಟು ಹಿಡಿದರು. ಹೆಚ್ಚಿನ ಸಂಖ್ಯೆಯಲ್ಲಿ ವಿರೋಧ ವ್ಯಕ್ತಪಡಿಸಿದ ಮಹಿಳೆಯರು ರಸ್ತೆಯಲ್ಲಿಯೇ ಕುಳಿತು ಪ್ರತಿಭಟಿಸಿದರು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಅಬಕಾರಿ ಉಪ ಆಯುಕ್ತೆ ಶೈಲಜಾ ಎ. ಕೋಟೆ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು ಯಾವದೇ ಕಾರಣಕ್ಕೂ ಗ್ರಾಮದಲ್ಲಿ ಬಾರ್ ನಡೆಸಲು ಅವಕಾಶ

(ಮೊದಲ ಪುಟದಿಂದ) ಕಲ್ಪಿಸ ಬಾರದು ಎಂದು ಪಟ್ಟು ಹಿಡಿದರು. ಪ್ರತಿಭಟನಾಕಾರರನ್ನು ಸಮಾಧಾನಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ತೆರೆದಿದ್ದ ಬಾರ್ ಅನ್ನು ತಾತ್ಕಾಲಿಕವಾಗಿ ಮುಚ್ಚಲು ಸೂಚನೆ ನೀಡಿದ ಶೈಲಜಾ ಅವರು, ಈ ಸಂಬಂಧ ಪುನರ್ ಪರಿಶೀಲನೆ ನಡೆಸಿ ಕಾನೂನಿನ್ವಯ ಕ್ರಮಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದು ಕೊಂಡರು. ಪ್ರತಿಭಟನೆ ಸಂದರ್ಭ ವೃತ್ತ ನಿರೀಕ್ಷಕ ಕ್ಯಾತೆಗೌಡ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಆರ್ .ಮಂಜುಳಾ, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತಾರಾನಾಥ್, ಸದಸ್ಯರಾದ ಸಂತೋಷ್, ಎಂ.ಎಸ್. ಶಿವಾನಂದ, ನೀಲಾಂಬಿಕೆ, ಹರೀಶ್ ಸೇರಿದಂತೆ ಗ್ರಾಮಸ್ಥರು ಇದ್ದರು.