ನಾಪೋಕ್ಲು, ಜು. 11: ಕಾಶ್ಮೀರದ ಕಾರಟೋರಾಂನಿಂದ ಚೀನಾ ಮತ್ತು ಪಾಕಿಸ್ತಾನಕ್ಕೆ ನೇರ ಹೆದ್ದಾರಿಗೆ ಅವಕಾಶವನ್ನು ಅಂದಿನ ಪ್ರಧಾನಿ ನೆಹರು ಅವರು ಮಾಡಿದ್ದರಿಂದ ನಮ್ಮ ದೇಶ ಇದೀಗ ಪರಿತಪಿಸುವಂತಾಗಿದೆ ಎಂದು ಕೊಡಗು ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದರು.

ಬೆಟ್ಟಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಆವರಣ ತಡೆಗೋಡೆ ಮತ್ತು ನೂತನವಾಗಿ ನಿರ್ಮಿಸಿದ ಗೇಟ್ ಉದ್ಘಾಟಿಸಿದ ಬಳಿಕ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಿಕ್ಕಿಂನಿಂದ 320 ಕಿ.ಮೀ. ಬಾರ್ಡರ್ ಇದ್ದು, ಇಲ್ಲಿ 3 ದೇಶಗಳು ಕೂಡುವ ಟ್ರೈ ಜಂಕ್ಷನ್ ಎಂಬಲ್ಲಿ ಸಮಸ್ಯೆಗಳು ಉಲ್ಬಣಕ್ಕೆ ಚೀನಾ ಕಾರಣವಾಗಿದೆ. ಭಾರತವನ್ನು ಕೆಣಕಲು ಹವಣಿಸುತ್ತಿದೆ. ಈ ಸಮಸ್ಯೆಗಳನ್ನು ಗುರಿಯಾಗಿಸಿ ದೇಶದ ಹಿತ ಕಾಪಾಡಲು ಮೋದಿ ಅವರು ಚೀನಾದ ಸುತ್ತಮುತ್ತಲಿನ ವಿವಿಧ ರಾಷ್ಟ್ರಗಳನ್ನು ಭೇಟಿ ಮಾಡಿ ಸ್ನೇಹ ಪಡೆದು ಯಶಸ್ವಿಯಾಗಿರುವದರಿಂದ ಶತ್ರು ರಾಷ್ಟ್ರಗಳಿಗೆ ಮುಖಭಂಗ ವುಂಟಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಕಳೆದ 70 ವರ್ಷಗಳಿಂದ ದೇಶವನ್ನು ಕತ್ತಲೆಯಲ್ಲಿ ಇರಿಸಿದೆ ಎಂದು ಆರೋಪಿಸಿದ ಅವರು; ಕೇಂದ್ರದ ಯೋಜನೆಯನ್ನು ನಮ್ಮದು ಎಂದು ಬಿಂಬಿಸುತ್ತಿದ್ದಾರೆ. ನೋಟು ಬ್ಯಾನ್‍ನಿಂದ ಜನರು ದÀಂಗೆ ಎದ್ದು ಅಲ್ಲೋಲ ಕಲ್ಲೋಲ ನಡೆಯುತ್ತದೆ ಎಂಬ ಷಡ್ಯಂತ್ರ ರೂಪಿಸಿದ ಅವರು, ಇದೀಗ ಜಿ.ಎಸ್.ಟಿ. ಬಗ್ಗೆಯೂ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂಷಿಸಿದರು.

ಎಲ್ಲಾ ಕಾರ್ಯಕ್ರಮಗಳಿಂದಲೂ ಮೋದಿ ಜನಮನ್ನಣೆ ಗಳಿಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷದಿಂದ ವಿಸ್ತಾರಕ್ ಕಾರ್ಯಕ್ರಮದಡಿಯಲ್ಲಿ ಕೇಂದ್ರ ಸರ್ಕಾರದ ಸಾಧನೆಯನ್ನು ಜನ ಸಾಮಾನ್ಯರಿಗೆ ಮನವರಿಕೆ ಮಾಡಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಎಲ್ಲರೂ ಶ್ರಮಿಸೋಣ ಎಂದರು.

ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ದೇಶದ ಕಟ್ಟಕಡೆಯ ಪ್ರತಿಯೊಬ್ಬ ವ್ಯಕ್ತಿಗೂ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಸವಲತ್ತು ನೀಡಲಾಗುತ್ತಿದೆ. ಈ ಉತ್ತಮ ಬೆಳವಣಿಗೆ ಹಾಗೂ ರಾಜ್ಯ ಸರ್ಕಾರದ ವೈಫಲ್ಯತೆಯನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕಾಗಿದೆ ಮಾತ್ರವಲ್ಲದೆ ಬಿಜೆಪಿ ಸದಸ್ಯತ್ವವನ್ನು ಹೆಚ್ಚಿಸುವ ಕೆಲಸವಾಗಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ತಾ.ಪಂ. ಸದಸ್ಯೆ ತುಂತಜೆ ರಶ್ಮಿ, ಕೊಡಪಾಲು ಗಪ್ಪು ಗಣಪತಿ, ಆರ್.ಎಂ.ಸಿ. ಸದಸ್ಯ ಬೆಪ್ಪುರನ ಮೇದಪ್ಪ, ವಿ.ಎಸ್.ಎಸ್. ಅಧ್ಯಕ್ಷ ಎಡಿಕೇರಿ ವಾಸುದೇವ, ಗ್ರಾ.ಪಂ. ಉಪಾಧ್ಯಕ್ಷೆ ತಳೂರು ಶಾಂತ, ತಾ.ಪಂ. ಮಾಜಿ ಅಧ್ಯಕ್ಷ ಹಾಗೂ ಉದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ಪಂಚಾಯಿತಿ ಸದಸ್ಯೆ ಬಿ.ಮಮತ, ಎಂ.ಎಂ. ಪೂವಮ್ಮ, ಎಂ. ರೇಣುಕಾ, ಹೆಚ್.ಪಿ. ರಾಣಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ. ಪ್ರತಾಪ್, ಬಿ.ಎ. ರಾಮಣ್ಣ ಹಾಗೂ ಎಂ. ವಿರಾನ್ , ಕೆ.ವಿಜಯ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

-ದುಗ್ಗಳ ಸದಾನಂದ