ವೀರಾಜಪೇಟೆ, ಜು. 11: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಒಟ್ಟು 113 ಬಾಡಿಗೆ ಮಳಿಗೆಗಳ ಪೈಕಿ 37 ಮಳಿಗೆಗಳನ್ನು ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡುವ ಸಲುವಾಗಿ ಈಗಿನ ಬಾಡಿಗೆದಾರರು ಮಳಿಗೆಯನ್ನು ತೆರವು ಮಾಡಿ ಹರಾಜು ಪ್ರಕ್ರಿಯೆಗೆ ಅವಕಾಶ ನೀಡುವಂತೆ ಪಟ್ಟಣ ಪಂಚಾಯಿತಿ ಯಿಂದ ಬಾಡಿಗೆದಾರರಿಗೆ ನೋಟೀಸ್ ಜಾರಿ ಮಾಡಲಾಗಿದೆ.

ರಾಜ್ಯ ಉಚ್ಚ ನ್ಯಾಯಾಲಯವು ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಎಲ್ಲ ಮಳಿಗೆಗಳನ್ನು ಹರಾಜು ಮೂಲಕ ಕಾನೂನು ಬದ್ಧವಾಗಿ ವಿಲೇವಾರಿ ಮಾಡುವಂತೆ 18 ತಿಂಗಳ ಹಿಂದೆಯೇ ಆದೇಶ ನೀಡಿತ್ತು. 113 ಬಾಡಿಗೆ ಮಳಿಗೆಗಳಲ್ಲಿ ಅನೇಕ ಮಳಿಗೆಗಳು ಶಿಥಿಲಾವಸ್ಥೆಯಲ್ಲಿ ರುವದರಿಂದ ಇದನ್ನು ದುರಸ್ತಿಪಡಿಸದೆ ಹರಾಜು ಮಾಡಲು ಸಾಧ್ಯವಿಲ್ಲ ಎಂದು ಪಂಚಾಯಿತಿ ಆಡಳಿತ ಜಿಲ್ಲಾಧಿಕಾರಿ ಮೂಲಕ ಸರಕಾರದ ಗಮನಕ್ಕೆ ತಂದು ಹರಾಜನ್ನು ಮುಂದೂಡುವ ನಿರ್ಧಾರ ಕೈಗೊಂಡಿತ್ತು.

ಸಮೀಕ್ಷೆ ಪ್ರಕಾರ ಪಟ್ಟಣ ಪಂಚಾಯಿತಿ ಮಳಿಗೆಗಳಲ್ಲಿ ಸುಮಾರು ಹತ್ತು ವರ್ಷಕ್ಕೂ ಮೀರಿ ಮಳಿಗೆಗಳ ಬಾಡಿಗೆದಾರರು ಅದೇ ಕಟ್ಟಡದಲ್ಲಿ ಕಾನೂನು ಬಾಹಿರವಾಗಿ ಮುಂದುವರೆ ಯುತ್ತಿರುವದು ಮಳಿಗೆಗಳ ಹರಾಜಿಗೆ ಕಾರಣವಾಗಿದೆ.

ಈಗ ಪಟ್ಟಣ ಪಂಚಾಯಿತಿ 113 ಮಳಿಗೆಗಳಲ್ಲಿ 24ಮಳಿಗೆಗಳು ಶಿಥಿಲಾವಸ್ಥೆಯಲ್ಲಿದೆ ಎಂದು ಗುರುತಿಸಿದ್ದು ಈ ಮಳಿಗೆಗಳ ಹರಾಜನ್ನು ಮುಂದೂಡಿದೆ. ಈ ಮಳಿಗೆಗಳಲ್ಲಿ

(ಮೊದಲ ಪುಟದಿಂದ) ಖಾಸಗಿ ಬಸ್ಸು ನಿಲ್ದಾಣದಲ್ಲಿ ನೆಲ ಬಾಡಿಗೆಯ ಒಪ್ಪಂದದಲ್ಲಿರುವ ಮೂರು ಮಳಿಗೆಗಳು ಸೇರಿದ್ದು ಉಚ್ಚ ನ್ಯಾಯಾಲಯದ ಆದೇಶದಂತೆ ನೆಲ ಬಾಡಿಗೆಯ ಮಳಿಗೆಗಳ ಒಪ್ಪಂದವನ್ನು ನವೀಕರಿಸಿ ಮುಂದುವರೆಸಲು ಸಾಧ್ಯವಿಲ್ಲ. ಈ ಮೂರು ಮಳಿಗೆಗಳನ್ನು ಕಡ್ಡಾಯವಾಗಿ ತೆರವುಗೊಳಿಸಲು ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಲಿದೆ.

ಕಳೆದ ಐದು ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿಯ 47ಮಳಿಗೆಗಳನ್ನು ಷರತ್ತು ಬದ್ಧವಾಗಿ ಹನ್ನೆರಡು ವರ್ಷಗಳಿಗೆ ಬಾಡಿಗೆ ಒಪ್ಪಂದವನ್ನು ನವೀಕರಿಸಿ ಕೊಟ್ಟಿರುವದರಿಂದ ಈ ಮಳಿಗೆಗಳ ಬಾಡಿಗೆದಾರರು ಇನ್ನೂ 7ವರ್ಷಗಳ ಕಾಲ ಅದೇ ಬಾಡಿಗೆ ಮಳಿಗೆಯಲ್ಲಿ ಮುಂದುವರೆಯಲು ಅವಕಾಶ ಕಲ್ಪಿಸಲಾಗಿದೆ. ಈ 47 ಮಳಿಗೆಗಳಲ್ಲಿ ಬಹುತೇಕ ಮಳಿಗೆಗಳನ್ನು ಬಾಡಿಗೆ ಮಳಿಗೆಗಳ ಮಾಲೀಕರು ಅನಾಮಧೇಯರಿಗೆ ಉಪ ಬಾಡಿಗೆಗೆ ನೀಡಿ (ಸಬ್ ಲೀಸ್) ದುಬಾರಿ ಬಾಡಿಗೆ ಪಡೆಯುತ್ತಿರುವ ನಿದರ್ಶನಗಳಿದ್ದರೂ ಪಟ್ಟಣ ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳದಿರುವದು ಪಂಚಾಯಿತಿಯ ಆದಾಯ ಸೋರಿಕೆಗೆ ಕಾರಣವಾಗಿದೆ ಎಂದು ಮಾಜಿ ಸದಸ್ಯರು ದೂರಿದ್ದಾರೆ. ಪಟ್ಟಣ ಪಂಚಾಯಿತಿ ಕಾರ್ಯಾಲಯದ ಆಜುಬಾಜಿನಲ್ಲಿರುವ ಒಂದು ಬಾಡಿಗೆ ಮಳಿಗೆ ಹೊರತುಪಡಿಸಿ ಇತರ 4ಮಳಿಗೆಗಳು ಸೇರಿದಂತೆ 5 ಕೊಠಡಿಗಳನ್ನು ಪಂಚಾಯಿತಿ ವಿವಿಧ ಕಚೇರಿಗಳಿಗಾಗಿ ಸ್ವಂತ ಉಪಯೋಗಕ್ಕೆ ಬಳಸಿಕೊಂಡಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಎಲ್ಲ 108 ಮಳಿಗೆಗಳು ಬಹಿರಂಗವಾಗಿ ಹರಾಜಾದರೆ ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ವಾರ್ಷಿಕವಾಗಿ ರೂ. ಒಂದೂವರೆ ಕೋಟಿ ಮೀರಿದ ಆದಾಯ ಬರಲಿದೆ. ಇದರಿಂದ ಪಟ್ಟಣ ಪಂಚಾಯಿತಿಯ ಜನಪರ ಅಭಿವೃದ್ಧಿ ಕಾರ್ಯಗಳಿಗೆ ಮೂಲ ಆದಾಯ ಕ್ರೋಢೀಕರಣವಾಗಿ ಪಂಚಾಯಿತಿ ಎಲ್ಲ ರೀತಿಯಿಂದಲೂ ಅಭಿವೃದ್ಧಿ ಹೊಂದಲಿದೆ.