ಕುಶಾಲನಗರ, ಜು. 11: ಹೋಂ ಸ್ಟೇಯಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಓರ್ವ ಸೇರಿದಂತೆ ಒಟ್ಟು 8 ಜನರನ್ನು ಬೈಲುಕೊಪ್ಪೆ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಹೈದರಬಾದ್ ಮೂಲದ 20 ರಿಂದ 25ರ ವಯೋಮಾನದ 8 ಯುವತಿಯರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ವಿಚಾರಣೆ ನಡೆಸಿ ಮೈಸೂರು ಶಕ್ತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕುಶಾಲನಗರದ ಓರ್ವ ವ್ಯಕ್ತಿ ತಲೆಮರೆಸಿಕೊಂಡಿದ್ದಾರೆ ಎಂದು ಪಿರಿಯಾಪಟ್ಟಣ ಪೊಲೀಸ್ ವೃತ್ತ ನಿರೀಕ್ಷಕ ಹೆಚ್.ಎನ್.ಸಿದ್ದಯ್ಯ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಹೊಸಕೋಟೆಯ ರಜಾಕ್ ಮತ್ತು ವಸಂತ್ ಎಂಬವರುಗಳು ಈ ದಂಧೆಯ ಪ್ರಮುಖ ರೂವಾರಿಗಳಾಗಿದ್ದು ರಜಾಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ವಸಂತ ಎಂಬಾತ ಪರಾರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಕಲಗೂಡಿನ ಜಗದೀಶ್, ಉಮೇಶ್, ಸಿದ್ದೇಶ್, ಮೂರ್ತಿ, ಹೊಳೆನರಸಿಪುರದ ಕುಮಾರಸ್ವಾಮಿ, ಹೈದರಾಬಾದ್‍ನ ಸಾಯಿಕುಮಾರ್, ಮಲ್ಲೇಶ್ ಎಂಬವರನ್ನು ಬಂಧಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಸಿದ್ದಯ್ಯ ತಿಳಿಸಿದ್ದಾರೆ. ಸಮೀಪದ ಗಿರುಗೂರಿನ ಹೋಂಸ್ಟೇ ಒಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮೈಸೂರು ಎಸ್ಪಿ ರವಿ ಡಿ. ಚೆನ್ನಣ್ಣನವರ್, ಹುಣಸೂರು ಡಿವೈಎಸ್ಪಿ ಹರೀಶ್ ಪಾಂಡೆ ಮಾರ್ಗದರ್ಶನದಲ್ಲಿ ಪಿರಿಯಾಪಟ್ಟಣ ಪೊಲೀಸ್ ವೃತ್ತ ನಿರೀಕ್ಷಕ ಹೆಚ್.ಎನ್.ಸಿದ್ದಯ್ಯ ತಂಡದ ನೇತೃತ್ವದಲ್ಲಿ ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿದಾಗ ಈ ದಂಧೆ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 3 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗಡಿಭಾಗದಲ್ಲಿರುವ ಗಿರುಗೂರು ಗ್ರಾಮದ ಈ ಹೋಂಸ್ಟೇ ಅನ್ನು ಕುಶಾಲನಗರದ ಕೆಲವು ವ್ಯಕ್ತಿಗಳು ಲೀಸ್‍ಗೆ ಪಡೆದು ಈ ದಂಧೆಯಲ್ಲಿ ತೊಡಗಿಸಿಕೊಂಡಿರುವದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.