ಮಡಿಕೇರಿ, ಜು. 12: ಭತ್ತ ಬೆಳೆ ನಾಟಿ ಮಾಡಲು ಕಾರ್ಮಿಕರ ಕೊರತೆ ಇರುವದರಿಂದ ಕಾರ್ಮಿಕರ ಕೊರತೆ ನೀಗಿಸಲು ಕೃಷಿ ಇಲಾಖೆಯಿಂದ 2017-18ನೇ ಸಾಲಿನಲ್ಲಿ ಭತ್ತ ಬೆಳೆಯಲ್ಲಿ ನಾಟಿಯಂತ್ರ ಬಳಸಿ ನಾಟಿ ಮಾಡಲು ಪ್ರತಿ ಹೆಕ್ಟೇರಿಗೆ ರೂ. 4 ಸಾವಿರ ಪ್ರೋತ್ಸಾಹ ಧನವನ್ನು ರೈತರಿಗೆ ನೀಡಲಾಗುತ್ತದೆ. ಒಬ್ಬ ರೈತರಿಗೆ ಗರಿಷ್ಠ 2 ಹೆ.ಗೆ ಮಾತ್ರ ಪ್ರೋತ್ಸಾಹ ಧನ ನೀಡಲಾಗುವದು. ನಾಟಿಯಂತ್ರ ಬಳಸಿ ನಾಟಿ ಮಾಡಲು ಸಸಿಮಡಿ ಹಂತದಿಂದಲೇ ತಯಾರಿ ಮಾಡಿಕೊಳ್ಳಬೇಕಾಗಿದೆ.

ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಪಡೆದುಕೊಳ್ಳಬಹುದಾಗಿದೆ. ಪ್ರಗತಿಪರ ರೈತರಾದ ಎನ್.ಸಿ. ತಿಮ್ಮಯ್ಯ, ನಲ್ಲೂರು ಗ್ರಾಮ ದೂ.ಸಂ: 9480419569, ಸಿ.ಡಿ. ಕರುಂಬಯ್ಯ, ಕಿರಿಗೂರು ಗ್ರಾಮ ದೂ.ಸಂ: 9449276472, ಸೂರಜ್ ಸಿ.ಪಿ., ಹುದಿಕೇರಿ ಗ್ರಾಮ ದೂ.ಸಂ: 9449239771 ಇವರಲ್ಲಿ ಭತ್ತ ನಾಟಿಯಂತ್ರ ದೊರೆಯುತ್ತದೆ.

ಕೃಷಿ ಯಂತ್ರಧಾರೆ ಕೇಂದ್ರ ಅಮ್ಮತ್ತಿ, ಕೊಡ್ಲಿಪೇಟೆ, ಚೇರಂಬಾಣೆ, ಇಲ್ಲಿ ಭತ್ತದ ನಾಟಿ ಯಂತ್ರ ದೊರೆಯುತ್ತದೆ.

ಹೊಸದಾಗಿ ಯಂತ್ರ ಖರೀದಿಸುವ ರೈತರು ಅರ್ಜಿ ಭರ್ತಿ ಮಾಡಿ ತಮ್ಮ ಭಾಗದ ಹಣವನ್ನು ಪಾವತಿಸಿದರೆ ತಕ್ಷಣವೇ ರಿಯಾಯಿತಿ ದರದಲ್ಲಿ ಆದ್ಯತೆ ಮೇರೆಗೆ ಭತ್ತದ ನಾಟಿ ಯಂತ್ರವನ್ನು ಇಲಾಖೆಯಿಂದ ಸಹಾಯ ಧನದಲ್ಲಿ ನೀಡಲಾಗುವದು.

ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ನಾಟಿ ಯಂತ್ರ ಬಳಸುವಂತೆ ಪ್ರೋತ್ಸಾಹಿಸುವ ಸಂಘ-ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ (ರೈತರು) ಪ್ರತಿ ಹೆ.ಗೆ. ರೂ. 300 ರಂತೆ ಪ್ರೋತ್ಸಾಹ ಧನ ನೀಡಲಾಗುವದು. ರೈತರು ಸರ್ಕಾರದಿಂದ ನೀಡುತ್ತಿರುವ ಈ ಸವಲತ್ತನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ. ರಾಮಪ್ಪ ಕೋರಿದ್ದಾರೆ.