ಹಾತೂರು, ಜು. 12: “ಭದ್ರಕಾಳಿಯಮ್ಮೆ ಪೂಜೋ, ಇಗ್ಗುತಪ್ಪ ಪೂಜೋ, ಕಾವೇರಮ್ಮೆ ಪೂಜೋ...”, ಎಂಬ ಶ್ರದ್ಧಾ-ಭಕ್ತಿಯೊಡಗೂಡಿದ ಹರ್ಷೋದ್ಗಾರ ಹಾತೂರಿನ ಗದ್ದೆ-ಬನಗಳಲ್ಲಿ ಮಾರ್ದನಿಸಿತು. ಜನಸಾಗರ ಹೂವು-ಹಾರಗಳನ್ನು ಹಿಡಿದು ದೇವರನ್ನು ಬರಮಾಡಿಕೊಳ್ಳಲು ಕಾಯುತ್ತಿದ್ದ ದೃಶ್ಯ ಅಲ್ಲಿನÀ ರಾಜ್ಯ ಹೆದ್ದಾರಿಯಲ್ಲಿ ದೃಗ್ಗೋಚರವಾಯಿತು. ತಾ. 10-11 ರಂದು ಹಾತೂರಿನ ವನಭದ್ರಕಾಳಿ ದೇವರಕಾಡು ಹಬ್ಬದ ದಿನಗಳಾಗಿದ್ದು, ಅನೇಕರು ಭದ್ರಕಾಳಿ ಮಾತೆಯ ಭಕ್ತ್ಯುತ್ಸವ ಆಚರಣೆಯಲ್ಲಿ ಮಗ್ನರಾಗಿದ್ದರು.ಹಾತೂರಿನ ಜನ, ಬನ, ಬೆಳೆಯನ್ನು ರಕ್ಷಿಸುತ್ತಾ ಬಂದಿರುವ ವನಭದ್ರಕಾಳಿಯ ದೇವರಕಾಡು ಹಬ್ಬ ಎರಡು ವರ್ಷಕ್ಕೊಮ್ಮೆ ನಡೆಯುತ್ತಾ ಬಂದಿದ್ದು, ಈ ಸಾಲಿನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಾವಿರಾರು ವರ್ಷಗಳ ಹಿಂದಿನ ಈ ದೇವರಕಾಡಿನ ಮಹಿಮೆ ಅವರ್ಣನೀಯ, ಹಾಗು ಇದರ ಪೌರಾಣಿಕ ಹಿನ್ನೆಲೆ ಅರ್ವಾಚೀನ ಕಾಲದ್ದಾದರೂ, ಈವರೆಗೂ ಇಲ್ಲಿಯ ಜನರು ಭದ್ರಕಾಳಿಯ ಮಮತೆಗೆ ಋಣಿಗಳಾಗಿ ಅವಳ ಹಬ್ಬವನ್ನು ಶ್ರದ್ಧಾಪೂರ್ವಕವಾಗಿ ಆಚರಿಸಿಕೊಂಡು ಬಂದಿದ್ದಾರೆ.
(ಮೊದಲ ಪುಟದಿಂದ) ಕೊಕ್ಕಂಡ, ಕೊಂಗೇಪಂಡ ಮತ್ತು ಕೇಳಪಂಡ ಕುಟುಂಬದವರು ಸೇರಿ ವನಭದ್ರಕಾಳಿ ದೇವರಕಾಡು ಹಬ್ಬವನ್ನು ಧಾರ್ಮಿಕವಾಗಿ ನಡೆಸಿಕೊಂಡು ಬರುತ್ತಿದ್ದರಾದರೂ, ಇದು ಹಾತೂರಿನ ಸರ್ವ ಜನಾಂಗದ, ಊರ ಹಬ್ಬವಾಗಿ ಬೆಳೆದುಕೊಂಡು ಬಂದಿದೆ. ಪುಟ್ಟ ಮಕ್ಕಳಿಂದ ಹಿಡಿದು ಇಳಿಯ ವಯಸ್ಸಿನ ಭಕ್ತರು ತಮ್ಮ ಬನದೇವರ ಹಬ್ಬವನ್ನು ಆಚರಿಸಲು ವನಭದ್ರಕಾಳಿ ದೇವಾಲಯದಲ್ಲಿ ನೆರೆದಿದ್ದರು.
ದೇವಾಲಯದ ಮಾಜಿ ಅಧ್ಯಕ್ಷ, ಕೊಕ್ಕಂಡ ಎಸ್ ಬೆಳ್ಳಿಯಪ್ಪ ಅವರು ತಿಳಿಸಿದಂತೆ, ಕೊಕ್ಕಂಡ ಕುಟುಂಬದ ಐನ್‍ಮನೆಯಿಂದ ಭದ್ರಕಾಳಿ ದೇವತೆಯ ಮೊಗವನ್ನು ಹಿಡಿದು ದೈವ ನೃತ್ಯದ ತೆರೆಯ ಮೂಲಕ ಕೊಳ್ತೊಡು ಗ್ರಾಮ ತಲುಪಿ, ಅಲ್ಲಿ ದೈವ ನೃತ್ಯದ ನಂತರ ಭಕ್ತಾದಿಗಳಿಂದÀ ಹರಕೆ ಒಪ್ಪಿಸುವ ಕಾರ್ಯ ನೆರವೇರಿತು. ನಂತರ ಕೊಂಗೇಪಂಡ ಐನ್‍ಮನೆಯಿಂದ ತೆರೆ ಹೊರಟು, ಭತ್ತದ ಪೈರಿನ ಮಧ್ಯೆ ನಡೆದುಬಂದ ದೇವಿ, ಹಾತೂರಿನ ಮಹಾದೇವ ದೇವಸ್ಥಾನದ ಬಳಿ ಇರುವ ಅರಳಿ (ಪೀಪಲ್) ಮರದ ಬಳಿ ಆಸೀನಳಾದಳು. ಅವಳ ಆಯುಧವನ್ನು ಪುಟ್ಟಮಕ್ಕಳು ಕೈಯಲ್ಲಿ ಹಿಡಿದು ‘ದೇವಿ ನಮ್ಮನ್ನು ಕಾಪಾಡು’ ಎಂದು ಮೊರೆಹೋಗುತ್ತಿದ್ದಂತೆ, ಅಯ್ಯಪ್ಪ ಸ್ವಾಮಿಯ ತೆರೆ ಕೇಳಪಂಡ ಐನ್‍ಮನೆಯಿಂದ ಪೈರಿನ ಮಧ್ಯೆ ನಲಿಯುತ್ತಾ, ಗದ್ದೆಯಲ್ಲಿ ಮೇಯುತ್ತಿದ್ದ ಹಸುಗಳನ್ನು ದಿಗಿಲು ಬೀಳಿಸುತ್ತಾ ಓಡಿಬಂದು ಭದ್ರಕಾಳಿಯ ಹತ್ತಿರ ನೆರೆಯಿತು. ಈ ಅರಳಿ ಮರದಡಿ ಸ್ವಾಮಿ ಹಾಗು ದೇವಿ ದೈವ ನೃತ್ಯ ಕುಣಿದು, ಹೆದ್ದಾರಿಯಲ್ಲಿ ಸೇರಿದ್ದ ಜನರ ಭಕ್ತಿಯ ಕೂಗಿಗೆ ಓಗೊಟ್ಟು, ದೇವಾಲಯದತ್ತ ತೆರಳುತ್ತಾರೆ. ಇಲ್ಲಿ ಎತ್ತರದ ದೇವರ ಕಲ್ಲಿನ ಮೇಲೆ ಹತ್ತಿ, ನಲಿದು, 10 ಎಕರೆ ದೇವರಕಾಡಿನಲ್ಲಿರುವ ಗರ್ಭಗುಡಿಯತ್ತ ತೆರಳಿದರು. ಗರ್ಭಗುಡಿಗೆÉ ಮೂರು ಸುತ್ತು ಬಂದು ನೆರೆದಿದ್ದ ಭಕ್ತಾದಿಗಳ ಹರಕೆಯನ್ನು ದೈವಿಕ ನರ್ತಕನ ಮೂಲಕ ಸ್ವೀಕರಿಸುತ್ತಾಳೆ ಆ ಬನದೇವಿ. ಮುಂದುವರೆದು, ಬಂಡಾರ ಅರ್ಪಣೆ ಹಾಗು ಇನ್ನಿತರ ಧರ್ಮಾಚರಣೆಗಳ ಮೂಲಕ ಕೊನೆಗೊಂಡ ದೇವಿಯ ಹಬ್ಬ, ಕೊಡಗಿನ ಈ ಸಾಲಿನ ದೇವರಕಾಡು ಹಬ್ಬಗಳಲ್ಲಿ ಕೊನೆಯ ಹಬ್ಬವಾಗಿ ಪೂರ್ಣಗೊಂಡಿತು.
( ವರದಿ : ಪ್ರಜ್ಞಾ , ಚಿತ್ರ : ಪ್ರಜ್ವಲ್)