ಮಡಿಕೇರಿ, ಜು. 12: ಸಾಮಾಜಿಕ ಜಾಲ ತಾಣಗಳಾದ ವಾಟ್ಸಾಪ್, ಟ್ವಿಟ್ಟರ್, ಫೇಸ್ಬುಕ್, ಟೆಲಿಗ್ರಾಮ್ ಹಾಗೂ ಇನ್ನಿತರ ಜಾಲತಾಣಗಳಲ್ಲಿ ದೇಶದ ಸುರಕ್ಷತೆ ಹಾಗೂ ಜನರಲ್ಲಿ ಪ್ರಚೋದನೆ ಮೂಡಿಸುವಂತಹ ಮಾಹಿತಿಗಳಿಂದ ರಾಜ್ಯಾದ್ಯಂತ ಸಮಾಜದಲ್ಲಿನ ಶಾಂತಿ ಹದಗೆಡುತ್ತಿದ್ದು, ಸಮಾಜದಲ್ಲಿನ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಯಾವದೇ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಮಾಹಿತಿಯನ್ನು, ಕಾನೂನು ಬಾಹಿರ ಮಾಹಿತಿಯನ್ನು, ದೇಶದ ಸುರಕ್ಷತೆಗೆ ಧಕ್ಕೆಯುಂಟು ಮಾಡುವ ಮಾಹಿತಿಯನ್ನು, ಕೋಮು ಪ್ರಚೋದನೆ ಉಂಟು ಮಾಡುವ ಯಾವದೇ ಜಾತಿ ಭಾಷೆ ಜನಾಂಗಗಳ ಬಗ್ಗೆ ವಿಷಯವನ್ನು ಅನವಶ್ಯಕವಾಗಿ ಚರ್ಚೆ ಹಾಗೂ ರವಾನೆ ಮಾಡುವ ಯಾವದೇ ವ್ಯಕ್ತಿ ಹಾಗೂ ವಾಟ್ಸಾಪ್, ಟೆಲಿಗ್ರಾಮ್ ಗ್ರೂಪ್ನ ಅಡ್ಮಿನ್ ಹಾಗೂ ಮಾಹಿತಿ ರವಾನಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವದು.
ಈ ಬಗ್ಗೆ ವಾಟ್ಸಾಪ್, ಟ್ವಿಟ್ಟರ್, ಫೇಸ್ಬುಕ್, ಟೆಲಿಗ್ರಾಮ್ ಇನ್ನಿತರ ಜಾಲತಾಣಗಳ ಮೇಲೆ ಹದ್ದಿನ ಕಣ್ಣು ಇರಿಸಲು ಕೊಡಗು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಅನ್ನು ಪ್ರಾರಂಭಿಸಲಾಗುವದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೆಲವು ಕಿಡಿಗೇಡಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಶಾಂತಿ ಕದಡಲು ಪ್ರಯತ್ನಿಸುತ್ತಿರುವದರ ಬಗ್ಗೆ ಮಾಹಿತಿ ಇದ್ದು, ಅಂತಹವರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳಲಾಗುವದು.
(ಮೊದಲ ಪುಟದಿಂದ) ಸಾರ್ವಜನಿಕರು ಇಂತಹ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದಲ್ಲಿ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವದು. ಈಗಾಗಲೇ ಪೊಲೀಸ್ ಇಲಾಖೆವತಿಯಿಂದ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸಲಹಾ ಪೆಟ್ಟಿಗೆಯನ್ನು ಇರಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ಬಗ್ಗೆ ಮಾಹಿತಿ ನೀಡುವಂತೆ ಅವರು ಕೋರಿದ್ದಾರೆ.