ಸೋಮವಾರಪೇಟೆ,ಜು.12: ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಯುವಕರನ್ನು ಗಡೀಪಾರು ಮಾಡುವದೇ ಸೂಕ್ತ ಎಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಸಾರ್ವಜನಿಕರು ಅಭಿಪ್ರಾಯಿಸಿದರು.

ಪೊಲೀಸ್ ಉಪ ಅಧೀಕ್ಷಕ ಸಂಪತ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಪಟ್ಟಣದಲ್ಲಿ ಶಾಂತಿ ನೆಲೆಸುವಂತೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ರಂಜಾನ್ ಹಬ್ಬದ ಹಿಂದಿನ ರಾತ್ರಿ ಪಟ್ಟಣದಲ್ಲಿ ನಡೆದ ಗಲಭೆಯ ಬಗ್ಗೆ ಚರ್ಚಿಸಲಾಯಿತು. ಜನತಾ ಕಾಲೋನಿಯ ನಿವಾಸಿಗಳಾದ ರಹೀಂ ಬೇಗ್, ಕರೀಂ ಬೇಗ್ ಅವರುಗಳು ಈ ಹಿಂದೆ ಸೋಮವಾರಪೇಟೆಯಲ್ಲಿದ್ದಾಗ ಮೋಹನ್ ಮೇಲೆ ಹಲ್ಲೆ, ಸತೀಶ್ ಅವರ ಮೇಲೆ ಹಲ್ಲೆ, ಪಟ್ಟಣದ ಕ್ಲಬ್‍ರಸ್ತೆ, ಜನತಾ ಕಾಲೋನಿ ಸೇರಿದಂತೆ ಇತರೆಡೆ ಹಲ್ಲೆ ಪ್ರಕರಣಗಳು ನಡೆದಿವೆ. ಈ ಬಗ್ಗೆ ಮೊಕದ್ದಮೆ ದಾಖಲಾಗಿ ಅವರುಗಳು ಊರುಬಿಟ್ಟ ನಂತರದ ದಿನಗಳಲ್ಲಿ ಮತ್ತೆ ಸೋಮವಾರಪೇಟೆ ಪ್ರಶಾಂತವಾಗಿತ್ತು.

ಆದರೆ ರಂಜಾನ್ ಹಬ್ಬದ ಹಿಂದಿನ ದಿನ ಪಟ್ಟಣಕ್ಕೆ ಆಗಮಿಸಿ ಪಟ್ಟಣದ ವಿವಿಧೆಡೆಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗೆದು ಕೆಲವರ ಮೇಲೆ ಹಲ್ಲೆ ನಡೆಸಿದ್ದಾರೆ. ಇಂತಹ ಅಶಾಂತಿಕೋರರನ್ನು ಗಡಿಪಾರು ಮಾಡಿದರೆ ಮಾತ್ರ ಪಟ್ಟಣದಲ್ಲಿ ಅನ್ಯೋನ್ಯತೆ ಹಾಗೂ ಶಾಂತಿ ನೆಲೆಸಲು ಸಾಧ್ಯ ಎಂದು ಸಭೆಯಲ್ಲಿ ಹಾಜರಿದ್ದ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಉಪಅಧೀಕ್ಷಕ ಸಂಪತ್‍ಕುಮಾರ್ ಎಲ್ಲರ ಅಭಿಪ್ರಾಯಗಳನ್ನು ಆಲಿಸಿ, ಈಗಾಗಲೇ ಶಾಂತಿ ಕದಡಿದವರ ವಿರುದ್ಧ ಅದಕ್ಕೆ ತಕ್ಕ ಸೆಕ್ಷನ್ ಹಾಕುವ ಮೂಲಕ ಕೇಸು ದಾಖಲಿಸಿದ್ದರಿಂದ ಅವರುಗಳು ಜೈಲು ಸೇರುವಂತಾಗಿದೆ. ಪುನಃ ಬಂದು ಮತ್ತೆ ಅಶಾಂತಿ ಮಾಡುವದರಲ್ಲಿ ಸಂಶಯವಿಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರುಗಳು ಇಲ್ಲಿಗೆ ಬಂದಾಗ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಸಂಬಂಧಿಸಿದ ಮಸೀದಿ ಸಮಿತಿಯ ಪದಾಧಿಕಾರಿಗಳಿಗೆ ಸೂಚಿಸಿದರು. ಅವರುಗಳ ಚಲನ ವಲನ ಬಗ್ಗೆ ಇಲಾಖೆ ಕೂಡ ನಿಗಾ ಇಡುತ್ತದೆ ಎಂದರು.

ಹೊರಭಾಗದಲ್ಲಿ ಕೋಮು ಗಲಭೆಗಳನ್ನು ಮಾಡಿ ಇಲ್ಲಿ ಬಂದಾಗ ಅವರಿಗೆ ಆಶ್ರಯ ನೀಡುವದು ಕೂಡ ಅಪರಾಧವಾಗಿದ್ದು, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಆಶ್ರಯ ನೀಡಿದವರನ್ನೂ ಶಿಕ್ಷೆಗೊಳಪಡಿಸಲಾಗುವದು. ಈ ಬಗ್ಗೆ ಸಂಶಯಗಳೇನಾದರೂ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕೇ ವಿನಃ, ಯಾರೂ ಕಾನೂನು ಕ್ರಮ ಕೈಗೆತ್ತಿಕೊಳ್ಳಬಾರದೆಂದು ಮನವಿ ಮಾಡಿದರು.

ಯಾವದೇ ಧರ್ಮದವರಾಗಲಿ ಶಾಂತಿ ಭಂಗವನ್ನುಂಟು ಮಾಡಿದರೆ ಕಾನೂನಿನಂತೆ ಕಠಿಣ ಕ್ರಮಗಳನ್ನು ನಿರ್ಧಾಕ್ಷಿಣ್ಯವಾಗಿ ಕೈಗೊಳ್ಳಲಾಗುವದು. ಇದಕ್ಕೆ ಪೊಲೀಸ್ ಇಲಾಖೆ ಕಟಿಬದ್ಧವಾಗಿದೆ ಎಂದರು. ಸಭೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಉಪನಿರೀಕ್ಷಕ ಶಿವಣ್ಣ ಉಪಸ್ಥಿತರಿದ್ದರು. ಸಭೆಯಲ್ಲಿ ಉಮೇಶ್, ರಮೇಶ್, ಮಹೇಶ್, ಸುರೇಶ್, ಹಸನಬ್ಬ, ಯಾಸ್ಮೀನ್ ಪಾಷಾ ಸೇರಿದಂತೆ ಇತರರು ಭಾಗವಹಿಸಿದ್ದರು.